Advertisement

ಕಾರವಾರ: ಮಾಜಿ ಸಚಿವ ಪ್ರಭಾಕರ ರಾಣೆ ಇನ್ನಿಲ್ಲ

02:35 PM Sep 05, 2022 | Team Udayavani |

ಕಾರವಾರ: ಮಾಜಿ ಸಚಿವ ಪ್ರಭಾಕರ ರಾಣೆ ಸೋಮವಾರ ನಿಧನ ಹೊಂದಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ವಯೋ ಸಹಜ ಅಲ್ಪ ಕಾಲದ ಅಸ್ವಸ್ಥತೆ ಯಿಂದ ಬಳಲುತ್ತಿದ್ದರು. ಮರೆವಿನ(ಅಲ್ಜಮೇರಿಯಾ) ಸಹ ಅವರನ್ನು ಕಾಡುತ್ತಿತ್ತು. ಮಧ್ಯಾಹ್ನ 1.30 ಕ್ಕೆ ಕೊನೆಯುಸಿರೆಳೆದಿದ್ದಾರೆ.

Advertisement

ಸಿದ್ಧರದ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಆರಂಭಿಸಿದ್ದ ಅವರು ಶಿಕ್ಷಕರನ್ನು ಸಂಘಟಿಸಿದ್ದರು. ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದರು‌. 1983 ರಿಂದ ಮೂರು ಅವಧಿಗೆ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದರು. 1993 ರಲ್ಲಿ  ವೀರಪ್ಪ ಮೊಯ್ಲಿ ಸಚಿವ ಸಂಪುಟದಲ್ಲಿ ವಯಸ್ಕರ ಶಿಕ್ಷಣ ಮತ್ತು ಸಾಕ್ಷರತೆ ಶಿಕ್ಷಣ ಖಾತೆ ಪಡೆದು 10 ತಿಂಗಳು ಸಚಿವರಾಗಿದ್ದರು. ಬಂಗಾರಪ್ಪ ಅವರ ಕ್ಲಾಸಿಕ್ ಕಂಪ್ಯೂಟರ್ ಹಗರಣವನ್ನು ಸದನದಲ್ಲಿ ಪ್ರಶ್ನಿಸಿ ,ಬಂಗಾರಪ್ಪ ಅಧಿಕಾರ ಕಳೆದುಕೊಳ್ಳಲು ಕಾರಣರಾಗಿದ್ದರು.

ಕಾರವಾರ- ಜೊಯಿಡಾ ಶಾಸಕರಾಗಿ ಮೂರು ಅವಧಿ ಪೂರೈಸಿದ್ದ ಅವರು1996 ರಲ್ಲಿ ಸೋಲು ಅನುಭವಿಸಿದರು. ನಂತರ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕ ವಸಂತ ಅಸ್ನೋಟಿಕರ್ ವಿರುದ್ಧ ಸೋಲು ಅನುಭವಿಸಿದರು. ನಂತರ ಜೆಡಿಎಸ್ ಸಹ ಸೇರಿದ್ದ ರಾಣೆ ಮತ್ತೆ ಸೋಲು ಕಂಡರು. ನಂತರ ರಾಜಕೀಯ ದಿಂದ ಹಿಂದೆ ಸರಿದರು.

ಶಿಕ್ಷಣ ಸಂಸ್ಥೆ 
ಪ್ರಭಾಕರ ರಾಣೆ ಭಾಪೂಜಿ ಗ್ರಾಮೀಣ ವಿಕಾಸ ಸಮಿತಿ ಸ್ಥಾಪಿಸಿ ಅದರ ಅಧ್ಯಕ್ಷರಾದರು. ಕಾರವಾರ ಜೊಯಿಡಾ ತಾಲೂಕಿನಲ್ಲಿ ಶಾಲಾ‌ ಕಾಲೇಜು ಸ್ಥಾಪಿಸಿ ಬಡ ಕುಟುಂಬಗಳ ಮಕ್ಕಳು ಶಿಕ್ಷಣ ಬೆಳಕು ಕಾಣಲು ಕಾರಣರಾಗಿದ್ದರು. ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು. ಜನ ಶಿಕ್ಷಣ ಸಂಸ್ಥಾನವನ್ನು ಉತ್ತರ ಕನ್ನಡದಲ್ಲಿ ಕ್ರಿಯಾಶೀಲ ಗೊಳಿಸಿದರು. ಸಚಿವರಾಗಿದ್ದ ಅವಧಿಯಲ್ಲಿ ಅಂತಾರಾಷ್ಟ್ರೀಯ ಯುವ ಸಮ್ಮೇಳನವನ್ನು ಸಿದ್ಧರ ಗ್ರಾಮದಲ್ಲಿ ನಡೆಸಿ, ದೇಶ ವಿದೇಶ ಗಳಿಂದ ಯುವ ಜನರು ಕಾರವಾರಕ್ಕೆ ಬರಲು ಕಾರಣರಾಗಿದ್ದರು.

ಕರಾವಳಿ ಉತ್ಸವಕ್ಕೆ ಸಾಹಿತಿ ಅನಂತಮೂರ್ತಿಯನ್ನು ಕರೆಯಿಸಿ ಉದ್ಘಾಟಿಸಿದ್ದರು. ರಾಣೆ ಅವರು ಪತ್ನಿ ಹಾಗೂ ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ. ಅವರ ನಿಧನಕ್ಕೆ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next