Advertisement

Karwar; ರಾ.ಹೆ.66 ರ ಟನಲ್ ನಲ್ಲಿ ಸಂಚಾರ ಪುನರಾರಂಭಕ್ಕೆ ಆಗ್ರಹಿಸಿ ದಿನವಿಡೀ ಪ್ರತಿಭಟನೆ

05:50 PM Sep 29, 2023 | Team Udayavani |

ಕಾರವಾರ : ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಗರದ ಲಂಡನ್ ಬ್ರಿಜ್ ಹಾಗೂ ಪ್ಲೈಓರ್ ಗೆ ಹೊಂದಿಕೊಂಡಿರುವ ಟನಲ್ ನಲ್ಲಿ ವಾಹನ ಸಂಚಾರ ಪುನರಾರಂಭಕ್ಕೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನ ವಶಕ್ಕೆ ಪಡೆದು ಬಿಟ್ಟ ಘಟನೆಯೂ ನಡೆಯಿತು‌.

Advertisement

ಹಗಲಿಡೀ ನಡೆದ ಪ್ರತಿಭಟನೆ ಕಾದಿದ್ದ ಪೊಲೀಸರು ವಿಧಾನಪರಿಷತ್ ಸದಸ್ಯ ಉಳ್ವೇಕರ್ , ನಗರಸಭೆಯ ಮಾಜಿ ಅಧ್ಯಕ್ಷ ನಿತಿನ್ ಉಳ್ವೇಕರ್ ಹಾಗೂ ಪ್ರತಿಭಟನೆಯ ನಂತರ ಧರಣಿಯಲ್ಲಿದ್ದ ನಗರಸಭೆ ಕೆಲ ಸದಸರನ್ನು ಬಂಧಿಸಿ, ಡಿ ಆರ್ ಪೊಲೀಸ್ ಕರೆದೊಯ್ದರು.

ಬೆಳಗ್ಗೆಯೇ ಆರಂಭವಾದ ಪ್ರತಿಭಟ‌ನೆ
ಕಾರವಾರದ ಹೆದ್ದಾರಿ 66 ಟನಲ್‌ನಲ್ಲಿ ಸಂಚರಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಟನಲ್ ಎದುರು ಸೇರಿ ಬೃಹತ್ ಪ್ರತಿಭಟನೆ ನಡೆಸಿದರು. ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಎರಡು ಸುರಂಗಗಳನ್ನ ನಿರ್ಮಿಸಲಾಗಿದ್ದು ಮಳೆಗಾಲದಲ್ಲಿ ಸೋರಿಕೆಯಾಗುತ್ತಿದೆ ಎನ್ನುವ ಕಾರಣಕ್ಕೆ ಕಳೆದೆರಡು ತಿಂಗಳಿನಿಂದ ಸಂಚಾರವನ್ನ ಬಂದ್ ಮಾಡಲಾಗಿದೆ. ಟನಲ್ ಬಂದ್ ಆದ ಪರಿಣಾಮ ನಾಲ್ಕೈದು ಕಿಮೀ ಬಿಣಗಾ ಘಟ್ಟದಲ್ಲಿ ಸುತ್ತುವರೆದು ವಾಹನ ಸವಾರರು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿನಿತ್ಯ ಸಂಚರಿಸುವವರು, ವಾಹನ ಸವಾರರು ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಟನಲ್ ಸಂಚಾರ ಆರಂಭಿಸುವಂತೆ ಒಂದು ವಾರದ ಗಡುವು ನೀಡಿದ್ದರೂ ಜಿಲ್ಲಾಡಳಿತದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನಲೆ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ನೇತೃತ್ವದಲ್ಲಿ ಟನಲ್ ಎದುರು ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಮಳೆಯನ್ನೂ ಲೆಕ್ಕಿಸದೇ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಟನಲ್ ಎದುರು ಪ್ರತಿಭಟನೆ ನಡೆಸಿದ್ದು ಒತ್ತಾಯಪೂರ್ವಕವಾಗಿ ಟನಲ್ ಎದುರಿನ ಬ್ಯಾರಿಕೇಡ್ ತೆರವುಗೊಳಿಸಲು ಮುಂದಾಗಿದ್ದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದು ಪ್ರತಿಭಟನಾಕಾರರನ್ನ ಬಂಧಿಸಲು ಮುಂದಾಗಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಟನಲ್ ಮುಕ್ತಗೊಳಿಸಲು ಸೂಚನೆ ನೀಡುವವರೆಗೆ ಪ್ರತಿಭಟನೆ ಸ್ಥಗಿತಗೊಳಿಸಲ್ಲ ಎಂದು ಪಟ್ಟುಹಿಡಿದಿದ್ದಾರೆ. ಟನಲ್ ಸಂಚಾರ ಪುನರಾರಂಭ ವಿಚಾರವಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ಕರೆಯಲಾಗಿದ್ದು ಸಭೆಗೆ ಅಧಿಕಾರಿಗಳು ಗೈರಾದ ಹಿನ್ನಲೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದ್ದು ಟನಲ್‌ ಸಂಚಾರ ಆರಂಭವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾರವಾರ, ಅಂಕೋಲಾ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ.

Advertisement

ಟನಲ್ ವಿಚಾರ ರಾಜಕೀಯ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು ಸಂಚಾರ ಆರಂಭಿಸಲು ನಾ ಕೊಡೆ, ನೀ ಬಿಡೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಟನಲ್ ಸಂಚಾರ ಬಂದ್ ಮಾಡಿಸಿರುವ ಜಿಲ್ಲಾಡಳಿತ ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಬೇಡಿಕೆಯಂತೆ ಟನಲ್ ಸಂಚಾರಕ್ಕೆ ಅನುಮತಿ ನೀಡಲಿದೆಯೇ ಕಾದುನೋಡಬೇಕು. ಪ್ರತಿಭಟನೆಯಲ್ಲಿ ನಿತಿನ್ ಪಿಕಳೆ, ಬಿಜೆಪಿಯ ನಗರಸಭೆಯ ಕೆಲ ಸದಸ್ಯರು, ಛತ್ರಪತಿ ಮಾಳ್ಸೇಕರ್ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next