ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹಳೆಯ ಕಟ್ಟಡಗಳು ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಕೊರತೆ ಇಲ್ಲ. ಅಂತೆಯೇ ನಾಲ್ಕು ನೂರು ವರ್ಷಗಳಿಗೂ ಹಳೆಯದಾದ ಬಂಗಲೆಯೊಂದು ಬಿಣಗಾ ಗ್ರಾಮದ ಕಾಮತ್ ವಾಡದಲ್ಲಿದೆ.
ಕಾರವಾರ ನಗರಸಭೆ ವ್ಯಾಪ್ತಿಯಲ್ಲಿರುವ ಸೀಬರ್ಡ್ ನೌಕಾನೆಲೆ ಹತ್ತಿರದ ಪ್ರದೇಶವಾಗಿದೆ. ಬಿಣಗಾ ಕಾಮತವಾಡದ ಪ್ರಸಿದ್ಧಿಯಿಂದಲೇ ಈ ಭಾಗದ ಸೀಬರ್ಡ್ ನೌಕಾನೆಲೆ ಪ್ರವೇಶ ದ್ವಾರಕ್ಕೆ ಕಾಮತ್ ಪ್ರವೇಶದ್ವಾರ ಎಂದೇ ಹೆಸರಿಡಲಾಗಿದೆ. ಇಂತಹ ಹಿನ್ನೆಲೆ ಇರುವ ಕಾಮತ್ ಬಂಗಲೋ ಅತ್ಯಂತ ಹಳೆಯದಾಗಿದ್ದರೂ ಗಟ್ಟಿಮುಟ್ಟಾಗಿದೆ. ಈಗಲೂ ಆ ಮನೆತನದ ಒಂದು ಕುಟುಂಬ ಬಂಗಲೆಯ ಒಂದು ಭಾಗದಲ್ಲಿ ವಾಸಿಸುತ್ತಿದೆ.
ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಸಫೇಲಾ ಕಾಮತ್ ಎನ್ನುವವರು ಪಶ್ಚಿಮ ಬಂಗಾಳದಿಂದ ಗೋವಾಕ್ಕೆ ವಲಸೆ ಬಂದು ನೆಲೆಸಿದ್ದರು. ಅಲ್ಲಿಂದ ಪೋರ್ಚುಗೀಸರ ಕಾಲದಲ್ಲಿ ಗೋವಾದಿಂದ ಕಾರವಾರದ ಬಿಣಗಾಕ್ಕೆ ಬಂದು ನೆಲೆಸಿದ್ದರು ಎನ್ನಲಾಗುತ್ತಿದೆ. ಇಂದಿಗೆ ಈ ಮನೆತನ ಒಂಭತ್ತಕ್ಕೂ ಹೆಚ್ಚು ತಲೆಮಾರುಗಳನ್ನು ಈ ಮನೆ ಕಂಡಿದೆ. ಒಟ್ಟು ಎಂಟು ಕುಟುಂಬದ ನೂರು ಜನ ಒಂದೇ ಕೂಡು ಕುಟುಂಬವಾಗಿ ಅನ್ಯೋನ್ಯತೆ ಮತ್ತು ಸಂಬಂಧಗಳ ಸಾರುವ ಅವಿಭಕ್ತ ಕುಟುಂಬ ಎಂಬುದೇ ವಿಶೇಷ.
ಕೋಟೆಯಂತಹ ಬಂಗಲೆ: ಬ್ರಾಹ್ಮಣವಾಡಕ್ಕೆ ಕಾಮತವಾಡ ಎಂದೂ ಹೆಸರಿದೆ. ಮೂರು ಅಂತಸ್ತಿನ ಈ ಕೋಟೆಯಂತಹ ಬಂಗಲೆ 50ಕ್ಕಿಂತ ಹೆಚ್ಚಿನ ವಿಶಾಲವಾದ ಕೋಣೆಗಳನ್ನು ಹೊಂದಿದೆ. ಸಾಗುವಾನಿ ಮರಗಳಿಂದ ವಿಶೇಷವಾಗಿ ನಿರ್ಮಿಸಲಾಗಿದ್ದು ಮನೆಯ ಒಂದು ಕಡೆಯಿಂದ ಇನ್ನೊಂದು ಕಡೆ ನೇರವಾಗಿ ಸಂಪರ್ಕ ಹೊಂದುವ ವ್ಯವಸ್ಥೆ ಕಾಣಬಹುದು. ಹಳೆಯ ಕಟ್ಟಡವಾದರೂ ಬಹಳ ವ್ಯವಸ್ಥಿತವಾಗಿದೆ. ಈ ಮನೆ ಸುಮಾರು ಒಂದು ಎಕರೆಗಿಂತ ಹೆಚ್ಚು ವಿಸ್ತೀರ್ಣ ಹೊಂದಿದೆ. ಈಗ ಇಲ್ಲಿ ವಾಸವಿರುವುದು ಸುರೇಶ ವಿದ್ಯಾಧರ ಕಾಮತ್ ಮತ್ತು ಸುಜಾತಾ ಕಾಮತ್ ದಂಪತಿ.
ಈ ಕುಟುಂಬದ ಎಲ್ಲ ಸದ್ಯಸರು ಬೇರೆ ಬೇರೆ ಕಡೆಗೆ ವಾಸವಿದ್ದು, ಎಲ್ಲರೂ ಪ್ರತಿಷ್ಠಿತ ಹುದ್ದೆ ಹೊಂದಿದ್ದಾರೆ. ಅಮೆರಿಕದಲ್ಲಿ ಪ್ರಸಿದ್ಧ ವಿಜ್ಞಾನಿಯಾಗಿರುವ ಪ್ರಶಾಂತ ಕಾಮತ್ ಈ ಮನೆಯವರಾಗಿದ್ದು ಈಗಲೂ ಅವರ ತಾಯಿ ನೂರರ ಆಸುಪಾಸಿನವರಾಗಿದ್ದು, ಹಾಸಿಗೆಯಲ್ಲಿ ಶುಶ್ರೂಷಕಿಯೊಬ್ಬರ ಸಹಾಯದಲ್ಲಿ ಆರೋಗ್ಯವಾಗಿದ್ದಾರೆ. ಈ ಕುಟುಂಬದ ಎಲ್ಲರೂ ವರ್ಷಕ್ಕೊಂದು ಬಾರಿ ಇಲ್ಲಿ ಸೇರಿ ಸಮಯ ಕಳೆಯುವುದು ಪರಂಪರಾಗತವಾಗಿ ಬಂದಿದೆ. ಜೊತೆಗೆ ಮದುವೆ ಹಬ್ಬ ಹರಿದಿನಗಳಲ್ಲಿ ಎಲ್ಲರೂ ಸೇರಿ ಸಂಭ್ರಮಿಸುವುದೂ ಇದೆ. ಬಿಣಗಾದ ಕಾಮತವಾಡ ಅವಿಭಕ್ತ ಕುಟುಂಬಕ್ಕೆ ಉತ್ತಮ ಉದಾಹರಣೆ. ಕಾಲಘಟ್ಟ ಕ್ರಮಿಸಿದಂತೆ ಅವರೆಲ್ಲರೂ ಬೇರೆ ಬೇರೆ ಕಡೆಗಳಲ್ಲಿ ವಾಸವಿದ್ದರೂ ಹಿಂದಿನ ತಲೆಮಾರಿನವರು ಒಂದೇ ಮನೆಯಲ್ಲಿ ವಾಸವಾಗಿದ್ದು ಮನೆಯನ್ನು ಒಂಬತ್ತು ತಲೆಮಾರಿನವರೆಗೆ ಮಾರದೇ ಉಳಿಸಿಕೊಂಡಿರುವುದು ಒಂದು ಸಾಧನೆಯಾಗಿದೆ.
ಅವಿಭಕ್ತ ಕುಟುಂಬಗಳಲ್ಲಿ ಒಗ್ಗಟ್ಟು, ಪ್ರೀತಿ, ವಿಶ್ವಾಸ, ಮಾನಸಿಕ ಭದ್ರತೆ, ಒಂದುಗೂಡಿ ಬಾಳುವ ಪರಿಕಲ್ಪನೆ, ಬಬ್ಬರನ್ನೊಬ್ಬರು ಸಹಿಸಿಕೊಳ್ಳುವ ಗುಣ, ತ್ಯಾಗ, ಮನೋಭಾವನೆಗಳು ಹೆಚ್ಚು.
ಸುರೇಶ್ ಕಾಮತ್,
ಸದ್ಯ ವಾಸವಿರುವವರು.