ಕಾರವಾರ: ಕಾರವಾರ ಸೇರಿದಂತೆ ಉತ್ತರ ಕನ್ನಡ ಕರಾವಳಿ ತಾಲೂಕುಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಎಡೆಬಿಡದ ಮಳೆಯಿಂದಾಗಿ ದೇವಭಾಗ, ಜಂಗಲ್ ಲಾಡ್ಜ್ ರೆಸಾರ್ಟಗೆ ಹೊಂದಿಕೊಂಡ ಕಡಲತೀರ ಭಯಾನಕ ಕಡಲ್ಕೊರೆತಕ್ಕೆ ಸಾಕ್ಷಿಯಾಗಿದೆ.
ವರ್ಷಕ್ಕೆ ಹತ್ತು ಸಾವಿರ ಪ್ರವಾಸಿಗರು ಬಂದು ಉಳಿಯುವ, ವಾರ್ಷಿಕ 2 ಕೋಟಿ ರೂ. ವಹಿವಾಟು ನಡೆಸುವ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಇದೀಗ ಭಾರೀ ಮಳೆಯಿಂದ ಕಡಲ್ಕೊರೆತ ಎದುರಿಸುತ್ತಿದೆ.
ದೇವಭಾಗ ರೆಸಾರ್ಟ ಭಾಗದಲ್ಲಿ ಅಲೆತಡೆಗೊಡೆ ಜಾಗ ಹೊರತುಪಡಿಸಿ ಉಳಿದ ಕಡಲತೀರದಲ್ಲಿ ಕಡಲ್ಕೊರೆತಕ್ಕೆ ಗಾಳಿ ಮರಗಳು ನೆಲಕ್ಕುರಿಳಿವೆ. ರೆಸಾರ್ಟನ ಒಂದು ವಸತಿ ಕೋಣೆ ಸಹ ಕಡಲ್ಕೊರೆತಕ್ಕೆ ಬಲಿಯಾಗಿದೆ. ರೆಸಾರ್ಟ್ ಗೆ ಅಪಾರ ನಷ್ಟ ಉಂಟಾಗಿದೆ.
ಕಡಲ್ಕೊರೆತ ತಡೆಯಲು ಎರಡು ಕೋಟಿ ರೂ. ಅಲೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಕಳುಹಿಸಿದ ಪ್ರಸ್ತಾವನೆ ಸರ್ಕಾರದ ಅನುಮತಿಗೆ ಕಾದಿದೆ. ಮಳೆಯಿಂದ ಪ್ರವಾಸಿಗರ ಅತ್ಯಾಕರ್ಷಕ ತಾಣ ಇದೀಗ ಸಂಕಷ್ಟ ಎದುರಿಸುತ್ತಿದೆ.