ಮಂಗಳೂರು: ಇತ್ತೀಚೆಗೆ ಸಂಚಾರ ಆರಂಭಿಸಿದ ಬೆಂಗಳೂರು-ಕಾರವಾರ ನಿತ್ಯ ರೈಲಿಗೆ ಪ್ರಯಾಣಿಕರ ಕೊರತೆ ಎದುರಾಗಿದೆ!
ರೈಲ್ವೇ ಮೂಲಗಳ ಪ್ರಕಾರ ಸೆ. 24ರಂದು ಕಾರವಾರದಿಂದ ಬೆಂಗಳೂರಿಗೆ ಹೊರಟ ರೈಲಿನಲ್ಲಿ ಕೇವಲ 18 ಪ್ರಯಾಣಿಕರು, ಸೆ. 25ರಂದು 15 ಪ್ರಯಾಣಿಕರು, ಸೆ. 26ರಂದು 20, ಸೆ. 27ರಂದು 21, ಸೆ. 28ರಂದು 18 ಪ್ರಯಾಣಿಕರು ಮಾತ್ರ ರೈಲಿನಲ್ಲಿ ಪ್ರಯಾಣಿಸಿದ್ದರು.
ಬೆಂಗಳೂರಿನಿಂದ ಕಾರವಾರಕ್ಕೆ ಸೆ. 24ರಂದು ಆಗಮಿಸಿದ ರೈಲಿನಲ್ಲಿ ಕೇವಲ 13 ಪ್ರಯಾಣಿಕರು, ಸೆ. 25ರಂದು 23, ಸೆ. 26ರಂದು 27, ಸೆ.27ರಂದು 18, ಸೆ. 28ರಂದು 12 ಜನರು ಮಾತ್ರ ಪ್ರಯಾಣಿಸಿದ್ದರು. ಉಳಿದ ದಿನಗಳಿಗೆ ಕೂಡ ಕೇವಲ ಬೆರಳೆಣಿಕೆ ಪ್ರಯಾಣಿಕರು ಮಾತ್ರ ಬುಕ್ಕಿಂಗ್ ಮಾಡಿದ್ದಾರೆ.
ಕೊರೊನಾ ಕಾರಣದಿಂದ ಜನರು ರೈಲು ಪ್ರಯಾಣಕ್ಕೆ ಹಿಂಜರಿ ಯುತ್ತಿರುವ ಕಾರಣದಿಂದ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ರೈಲಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸೇಶನ್ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ರೈಲ್ವೇ ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿದೆ.
ಸೆ. 4ರಿಂದ ನಂ.06585 ಬೆಂಗಳೂರು-ಕಾರವಾರ ಹಾಗೂ ನಂ.06586 ಕಾರವಾರ- ಯಶವಂತಪುರ ರೈಲು ಸೆ. 5ರಿಂದ ಕಾರ್ಯಾರಂಭಿಸಿತ್ತು. ನಿತ್ಯ ಈ ರೈಲು ಸಂಜೆ 6.45ಕ್ಕೆ ಬೆಂಗಳೂರಿನಿಂದ ಹೊರಟು ಕಾರವಾರಕ್ಕೆ ಮರುದಿನ ಬೆಳಗ್ಗೆ 8.25ಕ್ಕೆ ಹಾಗೂ ಸಂಜೆ 6ಕ್ಕೆ ಕಾರವಾರದಿಂದ ಹೊರಟು ಬೆಳಗ್ಗೆ 8ರ ಸುಮಾರಿಗೆ ಬೆಂಗಳೂರು ತಲುಪಲಿದೆ. ಈ ರೈಲುಗಳಲ್ಲಿ 7 ಸ್ಲಿàಪರ್, ಒಂದು 3 ಟೈರ್ ಎಸಿ, ಒಂದು 2 ಟೈರ್ ಎಸಿ 4 ಸಾಮಾನ್ಯ ಸಹಿತ 15 ಬೋಗಿಗಳು ಇರಲಿವೆ. ರೈಲುಗಳಿಗೆ ಸ್ಟೇಷನ್‌ನಲ್ಲಿ ಟಿಕೆಟ್ ನೀಡಲಾಗುವುದಿಲ್ಲ. ಪೂರ್ವ ಕಾದಿರಿಸಿದ ಟಿಕೆಟ್‌ನಲ್ಲೇ ಪ್ರಯಾಣಿಸಬೇಕಾಗುತ್ತದೆ.
ಈ ಮಧ್ಯೆ ಪೂರ್ವ ಕಾಯ್ದಿರಿಸುವ ಟಿಕೆಟ್‌ನ ಜತೆಗೆ ಆಯಾ ರೈಲು ನಿಲ್ದಾಣದ ಸ್ಥಳದಲ್ಲಿಯೇ ಟಿಕೆಟ್ ದೊರೆಯುವಂತೆ ರೈಲ್ವೇ ಇಲಾಖೆಯು ವ್ಯವಸ್ಥೆ ಮಾಡಿದರೆ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳಿವೆ.