ಕಾರವಾರ: ನಗರದಲ್ಲಿ ಚುನಾವಣಾ ಪ್ರಚಾರದ ಕಾವು ಏರುತ್ತಿದ್ದು, ಜೆಡಿಎಸ್ ಅಭ್ಯರ್ಥಿ ಮಾಜಿ ಸಚಿವ ಆನಂದ ಅಸ್ನೋಟಿಕರ್ ಪರ ಪ್ರಚಾರಕ್ಕೆ ನಟಿ ಪೂಜಾ ಗಾಂಧಿ ರವಿವಾರ ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಚಾಲನೆ ನೀಡಿದರು.
ಬೆಳಗ್ಗೆ 10:45 ಅಂಬೇಡ್ಕರ್ ವೃತ್ತಕ್ಕೆ ಬಂದ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ನಮಿಸಿದರು. ನಂತರ ಯುವ ಜನತೆ ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ರಾಷ್ಟ್ರೀಯ ಪಕ್ಷಗಳು ಕರ್ನಾಟಕದ ಹಿತ ಕಾಯುತ್ತಿಲ್ಲ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಕಾಂಗ್ರೆಸ್ ಸ್ವಂತ ಹಿತಾಸಕ್ತಿಯಲ್ಲಿ ಮುಳುಗಿವೆ. ಜನರ ಕಷ್ಟ ಸುಖ ದೆಹಲಿಯಲ್ಲಿ ಆಡಳಿತ ಮಾಡುವವರಿಗೆ ಗೊತ್ತಿಲ್ಲ. ಹಾಗಾಗಿ ಪ್ರಾದೇಶಿಕ ಪಕ್ಷಕ್ಕೆ ಮತ ನೀಡಿ ಎಂದು ನಟಿ ಹಾಗೂ ಜೆಡಿಎಸ್ ಸ್ಟಾರ್ ಕ್ಯಾಂಪೇನರ್ ಪೂಜಾ ಗಾಂಧಿ ಹೇಳಿದರು.
ಕುಮಾರಸ್ವಾಮಿ ಜನರ ಜೊತೆ ಬೆರೆಯುವವರು. ಅವರು ಕರ್ನಾಟಕದ ಮುಖ್ಯಮಂತ್ರಿಯಾದಾಗ ಅವರು ಅನೇಕ ಜನಪರ ಯೋಜನೆ ಜಾರಿಗೆ ತಂದಿದ್ದರು. ಅವರು ಹೆಚ್ಚು ದಿನ ಅಧಿ ಕಾರ ನಡೆಸಲು ಅವಕಾಶ ಸಿಕ್ಕಿಲ್ಲ. ಹಾಗಾಗಿ ಮತ್ತೂಮ್ಮೆ ಕುಮಾರಸ್ವಾಮಿಗೆ ಅಧಿಕಾರ ನೀಡಿ ಎಂದು ಪೂಜಾ ಕೇಳಿಕೊಂಡರು.
ತೆನೆಹೊತ್ತ ಮಹಿಳೆಯ ಸಂಕೇತಕ್ಕೆ ಮತ ನೀಡಿ. ಆ ಮೂಲಕ ಆನಂದ ಅಸ್ನೋಟಿಕರರನ್ನು ಗೆಲ್ಲಿಸಿ. ನಾನು ಇಲ್ಲಿ ನಟಿಯಾಗಿ ಬಂದಿಲ್ಲ. ಜೆಡಿಎಸ್ ಸರ್ಕಾರವನ್ನು ಆರಿಸಿ ತನ್ನಿ ಎಂದು ಮತಯಾಚನೆಗೆ ಬಂದಿದ್ದೇನೆ. ಪ್ರಾದೇಶಿಕ ಪಕ್ಷಕ್ಕೆ ಮತ ನೀಡಿದರೆ ಕನ್ನಡಿಗರ ಹಿತ ಸಾಧ್ಯ ಎಂದು ಹೇಳಿದರು. ಕುಮಾರಸ್ವಾಮಿ ಸಿಎಂ ಆದರೆ ಕೈಗಾರಿಕೆಗಳ ಸ್ಥಾಪನೆ, ಉದ್ಯೋಗ ಸೃಷ್ಟಿ ಆಗಲಿವೆ ಎಂದರು. ಬಡವರಿಗೆ ಸ್ಪಂದಿಸುವ ಗುಣ ಜೆಡಿಎಸ್ ಪಕ್ಷಕ್ಕೆ ಇದೆ ಎಂದು ಹೇಳಿದರು.
ಅಭ್ಯರ್ಥಿ ಆನಂದ ಅಸ್ನೋಟಿಕರ್ ಮಾತನಾಡಿ ಪೂಜಾ ಗಾಂಧಿ ಅವರು ಕಾರವಾರ ಮತ್ತು ಅಂಕೋಲಾದ ಗ್ರಾಮಾಂತರ ಭಾಗದಲ್ಲಿ ಸಂಚರಿಸಿ ಜೆಡಿಎಸ್ ಪರ ಪ್ರಚಾರ ಮಾಡಲಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದರು. ನಂತರ ಅಭಿಮಾನಿಗಳ ಒತ್ತಾಯದ ಮೇರೆಗೆ ಮುಂಗಾರು ಮಳೆಯ ಚಿತ್ರದ ಕುಣಿದು ಕುಣಿದು ಬಾರೆ ಹಾಡಿನ ಎರಡು ಸಾಲುಗಳನ್ನು ಪೂಜಾ ಹಾಡಿದರು. ಆಗ ನೆರೆದಿದ್ದ ಮಹಿಳೆಯರು, ಯುವತಿಯರು ಪೂಜಾ ಹಾಡಿಗೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ನಗರದಲ್ಲಿ ಪಾದಯಾತ್ರೆ
ನಗರದ ಗ್ರೀನ್ ಸ್ಟ್ರೀಟ್‌ನಲ್ಲಿ ನಟಿ ಪೂಜಾ ಗಾಂಧಿ ಹಾಗೂ ಆನಂದ ಅಸ್ನೋಟಿಕರ್ ಪಾದಯಾತ್ರೆ
ಮಾಡಿ ಮತಯಾಚಿಸಿದರು. ಈ ವೇಳೆ ನಟಿ ಪೂಜಾ ಜೊತೆ ಯುವತಿಯರು ಮತ್ತು ಯುವಕರು ಸೆಲ್ಫಿ
ತೆಗೆಸಿಕೊಂಡರು. ಹತ್ತದಿನೈದು ನಿಮಿಷ ಸೆಲ್ಫಿ ತೆಗೆಸಿಕೊಳ್ಳುವ ಕ್ರಿಯೆ ನಡೆಯಿತು. ಇದೆಲ್ಲಾ ರಸ್ತೆಯಲ್ಲೇ
ನಡೆದ ಪರಿಣಾಮ ವಾಹನ ಮತ್ತು ಬಸ್ ಸಂಚಾರಕ್ಕೆ ಅಡ್ಡಿಯಾಯಿತು. ಆಗ ಮಧ್ಯೆ ಪ್ರವೇಶಿಸಿದ
ಪೊಲೀಸರು ಕಾರ್ಯಕರ್ತರನ್ನು ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು