Advertisement

ಕರುಣಾನಿಧಿ ಅಗಲಿಕೆ ಹೊತ್ತಿಗೆ ಕಾಡುತ್ತಿದೆ ಕಾಮರಾಜ್‌ ನೆನಪು

06:00 AM Aug 16, 2018 | |

ತಮಿಳುನಾಡಲ್ಲಿ ಮಧ್ಯಾಹ್ನದೂಟ ಯೋಜನೆ ಜಾರಿಗೊಳಿಸಿದ್ದು ಕಾಮರಾಜ್‌ ನಾಡಾರ್‌ ಅವರೇ ಹೊರತು ಎಂ.ಜಿ. ರಾಮಚಂದ್ರನ್‌ ಅಲ್ಲ. ಈ ಯೋಜನೆಯನ್ನು ನಾಡಾರ್‌ ಚಾಲ್ತಿಗೆ ತಂದುದು 1950ರ ದಶಕದ ಉತ್ತರಾರ್ಧದಲ್ಲಿ. ಲಕ್ಷಗಟ್ಟಲೇ ಬಡಮಕ್ಕಳನ್ನು ಶಾಲೆಯತ್ತ ಸೆಳೆದಿತ್ತು ಈ ಯೋಜನೆ.

Advertisement

ಈ ಹಿಂದೊಮ್ಮೆ ಈ ಅಂಕಣದಲ್ಲಿ ನಾನು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಗ್ಗೆ ಬರೆಯುತ್ತಾ, ಆಕೆಯ ಭ್ರಷ್ಟಾಚಾರ ಹಾಗೂ ದರ್ಪ ಎಂಬ ಎರಡು ಗುಣಗಳನ್ನು ಹೊರತುಪಡಿಸಿದರೆ ಆಕೆಯ ವ್ಯಕ್ತಿತ್ವವನ್ನು ಮೆಚ್ಚಿಕೊಳ್ಳಬಹುದು ಎಂಬ ಮಾತನ್ನು ಹೇಳಿದ್ದೆ. ಈಚೆಗೆ ನಿಧನರಾದ ಡಿಎಂಕೆಯ ನಾಯಕ ಮುತ್ತುವೇಲ್‌ ಕರುಣಾನಿಧಿಯವರ ಬಗೆಗೂ ಇದೇ ಮಾತನ್ನು ಹೇಳಬಹುದು. ಆದರೂ ಅವರು ಜಯಲಲಿತಾ ಅವರಷ್ಟು ದರ್ಪಿಷ್ಟರೇನಲ್ಲ ಬಿಡಿ.

ಕರುಣಾನಿಧಿ ಬಗ್ಗೆ ಪ್ರಕಟವಾಗಿರುವ ಬಹಳಷ್ಟು ಬರಹಗಳು ಬಹುತೇಕ “ಸಂತ ಚರಿತ್ರೆ’ಯ ರೀತಿಯಲ್ಲಿದ್ದವು. ಅವರ ತಪ್ಪುಗಳನ್ನು ಮರೆಸುವ ಉದ್ದೇಶದ ಮಿಂಚು ಮಾತುಗಳಿಂದ ಕೂಡಿದ್ದವು. ಮೃತ ವ್ಯಕ್ತಿಯೊಬ್ಬರ ಬಗ್ಗೆ ಕೆಟ್ಟದ್ದನ್ನು ಆಡಬಾರದು ಎಂಬಂಥ ರಾಷ್ಟ್ರೀಯ ಸಂಪ್ರದಾಯದ ಫ‌ಲಶ್ರುತಿ ಇದಾಗಿರಬಹುದು. ಇಂಥ ಪರಿಪಾಠಕ್ಕೆ ಬಹುಶಃ ಇನ್ನೊಂದು ಕಾರಣವೆಂದರೆ, ನಮ್ಮ ರಾಜಕೀಯ ವಲಯದಲ್ಲಿನ ಭ್ರಷ್ಟಾಚಾರವೆನ್ನುವುದು ತೀರಾ ಮಾಮೂಲಿನ ಸಂಗತಿ. ಭ್ರಷ್ಟತೆಯ ಮಾತು ಬಂದಾಗ ಯಾರದೋ ಹೆಸರನ್ನು ಉಲ್ಲೇಖೀಸುವುದು ಸಮಂಜಸ ವಾಗಲಾರದು ಎಂದಿರಬಹುದು.

ಈಗ ಕರುಣಾನಿಧಿಯವರು ನಿಧನರಾಗಿ ಕೆಲವು ದಿನಗಳೇ ಉರುಳಿವೆ. ಅವರ ಇಬ್ಬರು ರಾಜಕೀಯ ಆಕಾಂಕ್ಷಿಗಳಾದ ಪುತ್ರರ ನಡುವೆ ಡಿಎಂಕೆಯ ಉತ್ತರಾಧಿಕಾರಿ ಯಾರೆಂಬ ಬಗೆಗಿನ ಯುದ್ಧ ಸನ್ನಿಹಿತವಾಗಿದೆ. ದೇಶ ಸ್ವಾತಂತ್ರ್ಯವಾದ ಬಳಿಕದ ಇಷ್ಟು ವರ್ಷಗಳಲ್ಲಿ ತಮಿಳುನಾಡಿನಲ್ಲಿ ಆಗಿ ಹೋಗಿರುವ ಮುಖ್ಯಮಂತ್ರಿಗಳಲ್ಲಿ ಅತ್ಯುತ್ತಮರು ಯಾರು ಎಂಬ ಬಗ್ಗೆ ಚಿಂತನೆ ನಡೆಸಲು ಇದು ಸಕಾಲ. ಹೌದು, ಇಂಥ ಪ್ರಶ್ನೆ ಬಂದಾಗ ಯಾವುದೇ ತಡಬಡಿಕೆಯಿಲ್ಲದೆ ಹೇಳಬಹುದಾದ ಹೆಸರು ಕರುಣಾನಿಧಿ ಯವರದೂ ಅಲ್ಲ, ಎಂ.ಜಿ.ರಾಮಚಂದ್ರನ್‌ ಅವರದೂ ಅಲ್ಲ ಅಥವಾ ಜಯಲಲಿತಾ ಅವರದೂ ಅಲ್ಲ. ಆ ಹೆಸರೆಂದರೆ, ನಿಸ್ಸಂಶಯವಾಗಿ ಕಾಮರಾಜ ನಾಡಾರ್‌. ಆ ರಾಜ್ಯದ ಚರಿತ್ರೆಯತ್ತ ಹೊರಳಿ ನೋಡಿದರೆ 1952ರಲ್ಲಿ ನಡೆದ ಪ್ರಥಮ ಮಹಾ ಚುನಾವಣೆಯ ಬಳಿಕ ಮದ್ರಾಸ್‌ ಪ್ರಾಂತ್ಯದ ಪ್ರಥಮ ಮುಖ್ಯಮಂತ್ರಿಯಾಗಲು ಸಿ. ರಾಜಗೋಪಾಲಾಚಾರಿಯವರು ಒಪ್ಪಕೂಡದಿತ್ತು ಎನ್ನಬೇಕಾಗುತ್ತದೆ. ಆದರೂ ಅವರು ರಾಜ್ಯಕ್ಕೆ ಸ್ವತ್ಛ ಆಡಳಿತ ನೀಡಿದ್ದು ನಿಜ. ಅದೇನಿದ್ದರೂ 1935ರ ಭಾರತ ಸರಕಾರದ ಕಾಯ್ದೆಯಡಿ 1937-39ರ ಅವಧಿಯಲ್ಲಿ ಅರ್ಥಾತ್‌ ಸ್ವಾತಂತ್ರ್ಯ ಪೂರ್ವದ ಎರಡು ವರ್ಷಗಳಲ್ಲಿ ಅಸ್ತಿತ್ವದಲ್ಲಿದ್ದ ಸರಕಾರದಲ್ಲಿ ರಾಜಾಜಿಯವರು (ಮೊದಲ) ಮುಖ್ಯಮಂತ್ರಿಯಾಗಿ ನೀಡಿದ ಆಡಳಿತವೇ ಈಗ ಜನರ ನೆನಪಿನಲ್ಲಿ ಉಳಿದಿರುವುದು. 

ತಮಿಳುನಾಡನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದವರು ಕಾಮರಾಜ ನಾಡಾರ್‌. ಅವರು ರಾಜ್ಯದ ಮಾತ್ರವಲ್ಲ, ಇಡೀ ದೇಶದಲ್ಲೇ ಅತ್ಯುತ್ತಮ ಹಾಗೂ ಅತ್ಯಂತ ಶುದ್ಧ ಹಸ್ತದ ಮುಖ್ಯಮಂತ್ರಿ ಎಂದು ಪರಿಗಣಿತರಾದವರು. ಅವರು ನಿಜವಾಗಿ ಗಾಂಧಿವಾದಿಯಾಗಿದ್ದರು. ಪ್ರಾಮಾಣಿಕ ಹಾಗೂ ಸರಳ ವ್ಯಕ್ತಿತ್ವ ಅವರದ್ದಾಗಿತ್ತು. ಅವರು ನಿಧನರಾದಾಗ ಈ ಜಗತ್ತಿನಿಂದ ಅವರು ಬಿಟ್ಟು ಹೋದುದು ಕೇವಲ 130 ರೂ.ಗಳನ್ನು! ಅವರ ಹೆಸರಿನಲ್ಲಿ ಯಾವುದೇ ಆಸ್ತಿ ಇರಲಿಲ್ಲ. ಅವರು ಅವಿವಾಹಿತರಾಗಿದ್ದರು; ಹಾಗಾಗಿ ತನ್ನ ಹಿಂದೆ ಯಾವ ವಾರಸುದಾರನನ್ನೂ ಬಿಟ್ಟು ಹೋಗಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಈ ರಾಜ್ಯದ ಆಡಳಿತ ರುಚಿ ಕಂಡಿರುವ ಎಐಎಡಿಎಂಕೆ ಹಾಗೂ ಡಿಎಂಕೆಯ ರಾಜಕಾರಣಿಗಳು ಸಾರ್ವಜನಿಕ ಹಣವನ್ನು ಲೂಟಿಗೈದಿರುವುದಲ್ಲದೆ, ಅಗಾಧ ಮೊತ್ತದ ಸಂಪತ್ತನ್ನೂ ಬಾಚಿಕೊಂಡಿದ್ದಾರೆ. ಕರ್ನಾಟಕದಲ್ಲಿ ಕೂಡ ಸ್ವಾತಂತ್ರ್ಯೋತ್ತರದ ಅವಧಿಯಲ್ಲಿ ಆಗಿ ಹೋದ ರಾಜಕಾರಣಿಗಳ ಪೈಕಿ ಕೆಲವರು ಈ ಮಾತಿಗೆ ಹೊರತಾಗಿಲ್ಲ. ಪಂಚವಾರ್ಷಿಕ ಯೋಜನೆಗಳ ವಿಜೃಂಭಣೆಯ ಈ ದಿನಗಳಲ್ಲಿ ತಮಿಳುನಾಡಿನ ಕೃಷಿ ಹಾಗೂ ಕೈಗಾರಿಕಾ ಪ್ರಗತಿಯ ಕಾರ್ಯ ಕ್ರಮಗಳನ್ನು ಅತ್ಯಂತ ಮುತುವರ್ಜಿಯಿಂದ ಕೈಗೆತ್ತಿಕೊಂಡವರು ಕಾಮರಾಜ ನಾಡಾರ್‌. 

Advertisement

ಕರ್ನಾಟಕದೊಂದಿಗೆ ಕಾವೇರಿ ನದಿ ನೀರಿನ ಹಂಚಿಕೆ ಕುರಿತಂತೆ ಯಾವುದೇ ಗೊಣಗಾಟ-ಜಗಳಾಟ ನಡೆಸದೆ, ಭವಾನಿ ಮೇಲ್ದಂಡೆ ಹಾಗೂ ಕೆಳದಂಡೆ ಯೋಜನೆಗಳಂಥ ಒಂಬತ್ತು ಪ್ರಮುಖ ನೀರಾವರಿ ಯೋಜನೆಗಳನ್ನು ಅವರು ತಮಿಳುನಾಡಿಗೆ ನೀಡಿದ್ದರು. ಅವರ ಆಡಳಿತ ದಿನಗಳಲ್ಲಿ 1924ರ ಕಾವೇರಿ ಒಪ್ಪಂದ ಸರಿಯಾದ ರೀತಿಯಲ್ಲಿಯೇ ಅನುಷ್ಠಾನವಾಗುತ್ತಿತ್ತು; ಈ ಒಪ್ಪಂದ 1974ರವರೆಗೂ ಊರ್ಜಿತ ದಲ್ಲಿತ್ತು. ಲಕ್ಷಗಟ್ಟಲೆ ಎಕರೆ ಕೃಷಿ ಭೂಮಿಗೆ ನೀರಾವರಿ ಭಾಗ್ಯ ಲಭಿಸಿತ್ತು. ಕಾಮರಾಜ್‌ ಅವರು ಉಚಿತ ಶಾಲಾ ಶಿಕ್ಷಣ ಯೋಜನೆಯನ್ನೂ ಜಾರಿಗೊಳಿಸಿದರು, ಈ ಮೂಲಕ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಿದರು; ರಾಜ್ಯದ ಸಾಕ್ಷರತಾ ಪ್ರಮಾಣ ಹೆಚ್ಚುವಂತೆ ಮಾಡಿದ್ದರು.

ರಾಜ್ಯದಲ್ಲಿ ಮಧ್ಯಾಹ್ನದೂಟ ಯೋಜನೆಯನ್ನು ಜಾರಿಗೊಳಿಸಿದ್ದು ಕಾಮರಾಜ್‌ ನಾಡಾರ್‌ ಅವರೇ ಹೊರತು ಎಂ.ಜಿ. ರಾಮಚಂದ್ರನ್‌ ಅಲ್ಲ. ಈ ಯೋಜನೆಯನ್ನು ನಾಡಾರ್‌ ಚಾಲ್ತಿಗೆ ತಂದುದು 1950ರ ದಶಕದ ಉತ್ತರಾರ್ಧದಲ್ಲಿ. ಲಕ್ಷಗಟ್ಟಲೇ ಬಡಮಕ್ಕಳನ್ನು ಶಾಲೆಯತ್ತ ಸೆಳೆಯಲು ಈ ಯೋಜನೆ ನೆರವಾಯಿತು. ಈ ಯೋಜನೆಯನ್ನು ಎಂ.ಜಿ. ರಾಮಚಂದ್ರನ್‌ ಅವರು ದೊಡ್ಡ ರೀತಿಯಲ್ಲಿ ವಿಸ್ತರಿಸಿದರಾದರೂ ಇಲ್ಲೊಂದು ವ್ಯತ್ಯಾಸವಿತ್ತು. ಎಂ.ಜಿ.ಆರ್‌. ಈ ಯೋಜನೆಗೆ ಒದಗಿಸಿದ್ದು “ಕಳಂಕಿತ ಹಣ’ವನ್ನು ಅರ್ಥಾತ್‌, ದೇಶೀ ನಿರ್ಮಿತ ವಿದೇಶೀ ಮದ್ಯ ಮಾರಾಟದ ಏಕಸ್ವಾಮ್ಯ ಹಕ್ಕನ್ನು ತಮಗೆ ಬೇಕಿದ್ದ ಉದ್ಯಮಿಗಳಿಗೆ ಬಟವಾಡೆ ಮಾಡುವ ಮೂಲಕ ಹರಿದು ಬಂದ ಹಣ ಇದಾಗಿತ್ತು. ಇಂದು ಇಂಥ ವ್ಯವಹಾರವನ್ನು ಅನೇಕ ರಾಜಕಿಯ ವಿಶ್ಲೇಷಕರು ಭಾರೀ ಭ್ರಷ್ಟಾಚಾರದ ಹಗರಣವೆಂದೇ ಪರಿಗಣಿಸುತ್ತಾರೆ. ಕಾಮರಾಜ್‌ ಅವರು ಉನ್ನತ ಶಿಕ್ಷಣದ ಗುಣ ಮಟ್ಟಕ್ಕೂ ಒತ್ತು ನೀಡಿದ್ದರು. ಆಗಿನ ರಾಜ್ಯಪಾಲ ಬಿಷ್ಣುರಾಮ್‌ ಮೇಧಿ (ಅಸ್ಸಾಂನ ಮಾಜಿ ಮುಖ್ಯಮಂತ್ರಿ)ಯವರ ಸಹಚರ್ಯದೊಡನೆ ಚೆನ್ನೈಯಲ್ಲಿ ಐಐಟಿ (ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ) ಸ್ಥಾಪಿಸುವಲ್ಲೂ ಕಾಮರಾಜ್‌ ಯಶಸ್ವಿಯಾದರು. ರಾಜ್ಯದ ಕೈಗಾರಿಕೀಕರಣದ ಹೊಣೆಯನ್ನು ಅವರು ತಮ್ಮ ಸಂಪುಟದ ಅತ್ಯಂತ ಸಮರ್ಥ ಸಚಿವರಾಗಿದ್ದ (ಮುಂದೆ ರಾಷ್ಟ್ರಪತಿಯಾದ) ಆರ್‌. ವೆಂಕಟರಾಮನ್‌ ಅವರಿಗೆ ವಹಿಸಿದ್ದರು.  ಕಾಮರಾಜ್‌ ಅವರ ಸಚಿವ ಸಂಪುಟ ನಿಜಕ್ಕೂ ಮಾದರಿ ಸಂಪುಟವೇ ಆಗಿತ್ತು. ಸಿ. ಸುಬ್ರಹ್ಮಣ್ಯಂ ವೆಂಕಟರಾಮನ್‌ ಹಾಗೂ ಗಾಂಧಿವಾದಿ ಪಿ. ಕಕ್ಕನ್‌ ಅವರಂಥ ಸಮರ್ಥ ಸಚಿವರು ಕಾಮರಾಜ್‌ ಸಂಪುಟದಲ್ಲಿದ್ದರು. ಇದರೊಂದಿಗೆ ಹೋಲಿಸಬಹು ದಾದ ಒಂದೇ ಒಂದು ಸಂಪುಟವೆಂದರೆ 1937ರ ರಾಜಾಜಿಯವರ ಸಂಪುಟ ಟಿ. ಪ್ರಕಾಶಂ, ವಿ.ವಿ.ಗಿರಿ, ಡಾ| ಟಿ.ಎಸ್‌.ಎಸ್‌. ರಾಜನ್‌, ಪಿ. ಸುಬ್ಬರಾಯನ್‌ ಹಾಗೂ ಬಿ. ಗೋಪಾಲ ರೆಡ್ಡಿ ಮುಂತಾದ ಘಟಾನುಘಟಿಗಳು ಆ ಸಂಪುಟದಲ್ಲಿದ್ದರು.

ತಮ್ಮ ಕುಟುಂಬದ ಸದಸ್ಯರನ್ನು ರಾಜಕಾರಣಕ್ಕೆ ಸೆಳೆಯುವ ವಿಷಯದಲ್ಲಿ ಕರುಣಾನಿಧಿಯವರು ಸೋನಿಯಾಗಾಂಧಿ ಮತ್ತು ಇತರ ಅನೇಕ ರಾಜಕಾರಣಿಗಳಿಗಿಂತ ಭಿನ್ನರಾಗಿರಲಿಲ್ಲ. ಅವರ ಇಬ್ಬರು ಪುತ್ರರಾದ ಅಳಗಿರಿ ಹಾಗೂ ಸ್ಟಾಲಿನ್‌ ಹಾಗೆಯೇ ಪುತ್ರಿಯಾದ ಕನಿಮೋಳಿ ಇವರಿಗಿಂತ ಉತ್ತಮ ಮಟ್ಟದ ಉತ್ತರಾಧಿಕಾರಿಗಳು ಡಿಎಂಕೆ ಪಕ್ಷದಲ್ಲಿ ಇರಲಿಲ್ಲವೆ? ಕರುಣಾನಿಧಿ ಅವರ ನಿಧನ ಸಂದರ್ಭದಲ್ಲಿ ಅವರ ಸಂಕ್ಷಿಪ್ತ ಚರಿತ್ರೆ ಯನ್ನೊಳಗೊಂಡ ಬರಹವನ್ನು ಪ್ರಕಟಿಸಿದವರ ಪೈಕಿ ಯಾರೊಬ್ಬರೂ ಅವರ ಪ್ರಥಮ ಪುತ್ರ (ಕ್ಷಯ ರೋಗದಿಂದ ತೀರಿಕೊಂಡಿದ್ದು ಅವರ ಮೊದಲ ಪತ್ನಿ ಪದ್ಮಾವತಿ ಅಮ್ಮಾಳ್‌ ಪುತ್ರ) ಎಂ.ಕೆ. ಮುತ್ತು ಅವರ ಹೆಸರನ್ನು ಉಲ್ಲೇಖೀಸಿದ ಹಾಗಿಲ್ಲ. 

ಮುತ್ತು ಓರ್ವ ಚಿತ್ರನಟ ಹಾಗೂ ಹಿನ್ನೆಲೆ ಗಾಯಕರಾಗಿದ್ದವರು. ಎಂಜಿಆರ್‌ ಅವರ ವಿರುದ್ಧದ ಶಕ್ತಿಯಾಗಿ ಮುತ್ತು ಬೆಳೆದು ನಿಲ್ಲಬೇಕೆಂಬ ಒತ್ತಾಸೆ ಕರುಣಾನಿಧಿಯವರದಾಗಿತ್ತು. ಆದರೆ ತಂದೆಯ ಬಯಕೆಯನ್ನು ಈಡೇರಿಸುವಲ್ಲಿ ಮುತ್ತು ವಿಫ‌ಲ ರಾದರು. ಕರುಣಾನಿಧಿ ಡಿಎಂಕೆಯನ್ನು ತಮ್ಮ ಕುಟುಂಬದ ಉದ್ಯಮವಾಗಿಸಿದರು; ತಮ್ಮ ವಂಶದ ಹೊರಗಿನ ಯಾವ ವ್ಯಕ್ತಿಯನ್ನೂ ಅವರು ರಾಜಕೀಯ ನಾಯಕರನ್ನಾಗಿ ಬೆಳೆಸಲಿಲ್ಲ. ಇದೇ ಅವರ ತಪ್ಪು . ವಿ.ಆರ್‌. ನೆಡುಂಚೆಳಿಯನ್‌ ಹಾಗೂ ಅವರ ಬುದ್ಧಿಜೀವಿ ಸಹೋದರ ಇ.ರಾ. ಸೆಳಿಯನ್‌ ಇವರಿಬ್ಬರನ್ನೂ ಬದಿಗೊತ್ತಲಾಯಿತು; ಎಂಜಿಆರ್‌, ವೈಕೋ ಹಾಗೂ ರಾಮದಾಸ್‌ರಂಥ ಇತರ ಕೆಲವರು ಪಕ್ಷವನ್ನೇ ಬಿಟ್ಟು ಹೋದರು.

ಕರುಣಾನಿಧಿ, ಅವರ ಪತ್ನಿ ರಜತಿ ಅಮ್ಮಾಳ್‌ ಹಾಗೂ ಅವರ ಕೆಲ ಸಚಿವರ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ತನಿಖೆ ನಡೆಸಿದ್ದ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ಆರ್‌.ಎಸ್‌. ಸರ್ಕಾರಿಯಾ ಅವರ ನೇತೃತ್ವದ ಆಯೋಗ, ಇವರನ್ನೆಲ್ಲ “ವೈಜ್ಞಾನಿಕ ಭ್ರಷ್ಟಾಚಾರದ ನಿಪುಣಾಗ್ರೇಸರರು’ ಎಂದು ತನ್ನ ವರದಿಯಲ್ಲಿ ಬಣ್ಣಿಸಿತ್ತು (1975ರಲ್ಲಿ). ಸರ್ಕಾರಿಯಾ ಆಯೋಗ ವನ್ನು ನೇಮಿಸಿದ್ದು ಆಗಿನ ಇಂದಿರಾಗಾಂಧಿ ಸರಕಾರ ವೀರನಂ ಯೋಜನೆಗಾಗಿ ಗುತ್ತಿಗೆ ನೀಡಿಕೆಯೂ ಸೇರಿದಂತೆ ಕೆಲವು ಪ್ರಕರಣಗಳಿಗೆ ಸಂಬಂಧಿಸಿದ ಆರೋಪಗಳಿಗೆ ಸಂಬಂಧಿಸಿದಂತೆ ಕರುಣಾನಿಧಿ ತಪ್ಪೆಸಗಿದ್ದು ಹೌದೆಂದು ಸರ್ಕಾರಿಯಾ ಆಯೋಗ ಹೇಳಿತ್ತು. ಆದರೆ ಜಯಲಲಿತಾ ನೇಮಿಸಿದ್ದ ಸಮಿತಿ, ಕರುಣಾನಿಧಿ ನಿರ್ದೋಷಿ ಎಂದು 1995ರಲ್ಲಿ ಅಭಿಪ್ರಾಯಪಟ್ಟಿತು. ಇದೇ ವೇಳೆ, (ತನಿಖೆ ಪ್ರಕ್ರಿಯೆಯಲ್ಲಿ) ಎಐಎಡಿಎಂಕೆ ಸರಕಾರ ತನಗೆ ಅಗತ್ಯವಾದ ಸಹಕಾರ ನೀಡಲಿಲ್ಲವೆಂದೂ ಹೇಳಿತ್ತು. ರಾಜಕೀಯ ಘೋಷಣೆಗೆ ಸಂಬಂಧಿಸಿದಂತೆ ಜಯಲಲಿತಾ ಅವರಿಗೆ ಕರುಣಾ ನಿಧಿಯವರಂತೆ ಬಂಧುಬಾಂಧವರೆಂಬುವರು ಯಾರೂ ಇಲ್ಲ ದಿದ್ದರೂ ಆಕೆ ಜನರಿಂದ ದೋಚಿದ್ದ ಹಣವನ್ನು ತನ್ನ ಸಹವರ್ತಿ ಶಶಿಕಲಾ ನಟರಾಜನ್‌ ಮತ್ತಿತರರ ಮಡಿಲಿಗೆ ತುಂಬಿದರು; ಅವರು ಈಗ ಪರಪ್ಪನ ಅಗ್ರಹಾರ ಜೈಲಲ್ಲಿದ್ದಾರೆ. ಜಯಲಲಿತಾ ಅವರೂ ಇದೇ ಜೈಲಿಗೆ ಹೋಗ ಬೇಕಿತ್ತಾರಾದರೂ ಸಾವೇ ಅವರನ್ನು ಪಾರು ಮಾಡಿತು. ಆಕೆ ಬದುಕಿದ್ದಿದ್ದರೆ ಸುಪ್ರೀಂಕೋರ್ಟ್‌ ಆಕೆಯನ್ನೂ ಶಿಕ್ಷಾರ್ಹ ದೋಷಿಯೆಂದು ಘೋಷಿಸುವ ಸಾಧ್ಯತೆಯಿತ್ತು.

ಇನ್ನು, ಸ್ವತಂತ್ರ ಭಾರತದ ಅತ್ಯಂತ ದೊಡ್ಡ ಹಗರಣವಾದ 2ಜಿ ಸ್ಪೆಕ್ಟ್ರಮ್‌, ದೇಶದ ಎಲ್ಲರಿಗೂ ಚೆನ್ನಾಗಿ ಗೊತ್ತಿರು ವುದೇ. ಕರುಣಾನಿಧಿ ಇದರಲ್ಲಿ ನೇರವಾಗಿ ಭಾಗಿಯಾಗಿಲ್ಲವಾದರೂ, ಅವರದೇ ಮೂಗಿನ ಕೆಳಗಿನ ವ್ಯಕ್ತಿ ಆಂಡಿಪಟ್ಟಿ ರಾಜಾ ಹಾಗೂ ಪುತ್ರಿಯಾದ ಕನಿಮೋಳಿ ಇದರಲ್ಲಿ ಶಾಮೀಲಾಗಿರುವುದು ಸಾಬೀತಾಗಿ ಅವರಿಗೆ ಶಿಕ್ಷೆಯೂ ಆಗಿದೆ. ಇವರುಗಳ ಅದೃಷ್ಟವೆಂಬಂತೆ ಈ ಇಬ್ಬರನ್ನೂ ವಿಚಾರಣಾ ನ್ಯಾಯಾಲಯ ವೊಂದು ಖುಲಾಸೆಗೊಳಿಸಿದೆ. ಡಿಎಂಕೆ ಹಾಗೂ ಎಐಎಡಿಎಂಕೆ ಈ ಎರಡೂ ಪಕ್ಷಗಳು, ಬಹುಮತದ ಕೊರತೆಯಿದ್ದ ಯುಪಿಎ ಅಥವಾ ಎನ್‌ಡಿಎ ಸರಕಾರಗಳಿಗೆ ಬೆಂಬಲ ನೀಡಿ, ಈ ಬೆಂಬಲದ ಗರಿಷ್ಠ ಪ್ರಯೋಜನವನ್ನು ಪಡೆದುಕೊಂಡಿವೆ. ಮುರಸೋಳಿ ಮಾರನ್‌ ಹಾಗೂ ಅವರಂಥ ಒಬ್ಬರೋ ಇಬ್ಬರೋ ಬಿಟ್ಟರೆ, ಈ ಎರಡೂ ಪಕ್ಷಗಳಲ್ಲಿದ್ದ ಕೇವಲ ಪಂಚಾಯತ್‌ ಮಟ್ಟದ ರಾಜಕಾರಣಿಗಳು ಕೇಂದ್ರ ಸಚಿವರಾದದ್ದನ್ನು ದೇಶ ಕಂಡಿದೆ. 

ಜನ್ಮ ಸಹಜ ಮೇಧಾವಿ
ಆದರೂ ಒಂದು ಮಾತನ್ನಿಲ್ಲಿ ಹೇಳಬೇಕು. ಕರುಣಾನಿಧಿ ಔಪಚಾರಿಕ ಶಿಕ್ಷಣವನ್ನು ಪಡೆದಿರಲಿಲ್ಲವಾದರೂ ಅವರೊಬ್ಬ ಜನ್ಮಜಾತ ಮೇಧಾವಿಯಾಗಿದ್ದರು. ತಿಳಿವಳಿಕೆಯುಳ್ಳ ರಾಜಕಾರಣಿ ಯಾಗಿದ್ದರು. ಹಿಂದಿ ಹೇರಿಕೆಯ ವಿರುದ್ಧ ಸಿಡಿದೆದ್ದು ನಿಂತವರು ಅವರು. ರಾಜ್ಯಗಳು ಹೊಂದಿರಬೇಕಾದ ಅಧಿಕಾರವನ್ನು ಪ್ರತಿ ಪಾದಿಸಿ ದವರು. ರಾಜ್ಯಗಳ ಸ್ವಾಯತ್ತೆಯನ್ನು ಪ್ರಬಲವಾಗಿ ಪ್ರತಿಪಾದಿಸಿದ್ದಲ್ಲದೆ ನ್ಯಾ| ಪಿ.ವಿ. ರಾಜಮನ್ನಾರ್‌ ನೇತೃತ್ವದ ಆಯೋಗವನ್ನು ಸ್ಥಾಪಿಸಿದವರು. ಸ್ವಾತಂತ್ರ್ಯಪೂರ್ವ ವರ್ಷಗಳಲ್ಲಿ ಜಸ್ಟೀಸ್‌ ಪಾರ್ಟಿ ಸರಕಾರಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮ ಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಇನ್ನಷ್ಟು ಮುಂದುವರಿದು ಹಿಂದುಳಿದ ವರ್ಗಗಳ ಅಭಿವೃದ್ಧಿ, ಎಲ್ಲ ಹಂತಗಳಲ್ಲೂ ಬ್ರಾಹ್ಮಣರ ಪಾರಮ್ಯಕ್ಕೆ ವಿರೋಧ ಮುಂತಾದ ಕಾರ್ಯಕ್ರಮಗಳನ್ನು ತೀವ್ರ ಸ್ವರೂಪದಲ್ಲಿ ಕಾರ್ಯಗತಗೊಳಿಸಿದವರು. 

ಅವರು ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುವ ಹೊತ್ತಿಗೆ ಸ್ವಾಭಿಮಾನ ಆಂದೋಲನ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿತ್ತು. ಕೊನೆ ಕೊನೆಗೆ ಕರುಣಾನಿಧಿ ಎಂಬ ತೀವ್ರ ಸೈದ್ಧಾಂತಿಕ ಹೋರಾಟಗಾರ ಮೆತ್ತಗಾಗುತ್ತ ಬಂದರೇನೋ ಎನ್ನಿಸುವ ಹಾಗಿತ್ತು ಅವರ ನಡವಳಿಕೆ. ರಾಮನುಜಾಚಾರ್ಯರನ್ನು ಕುರಿತ ಟಿವಿ ಧಾರಾವಾಹಿಗೆ ಸಂಭಾಷಣೆ ಬರೆಯಲೂ ಅವರು ಮುಂದಾದರು. ರಾಮಾನುಜಾಚಾರ್ಯರು ಧರ್ಮವನ್ನು ಜನಸಾಮಾನ್ಯರ ಬಳಿಗೆ ಒಯ್ದವರು; ಧರ್ಮ ಹಾಗೂ ಜಾತಿಗಳ ಮೀರಿ ನಿಂತವರು ಅವರು ಎಂಬುದು ಕರುಣಾನಿಧಿ ಈ ಕೆಲಸಕ್ಕೆ ತಾನು ಮುಂದಾದುದಕ್ಕೆ ನೀಡಿದ ಕಾರಣ. ಅಷ್ಟೇ ಅಲ್ಲ, ತಾನು ಹಿಂದೂ ಧರ್ಮದ ವಿರೋಧಿಯಲ್ಲ ; ಧರ್ಮದ ಸಂರಕ್ಷಕರೆಂದು ದರ್ಪ ಮೆರೆಯುವ ಮೂಲಭೂತವಾದಿಗಳ ವಿರುದ್ಧವಷ್ಟೇ ತನ್ನ ತಕರಾರು ಎಂದೂ ಅವರು ಸ್ಪಷ್ಟಪಡಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next