ಬಾಗಲಕೋಟೆ: ಸಿಎಂ ಕುಮಾರಸ್ವಾಮಿಯವರು ಖಡಕ್ ಆಗಿ ಸೂಚನೆ ನೀಡದಿದ್ದರಿಂದ ಕಾರ್ಖಾನೆ ಮಾಲೀಕರು ಕಳುಹಿಸಿದ ಕಾರಕೂನಗಳ ಜತೆಗೆ ಅವರು ಸಭೆ ನಡೆಸಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಗೋವಿಂದ ಕಾರಜೋಳ ಟೀಕಿಸಿದರು.
ನಗರದಲ್ಲಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆ ಮಾಲೀಕರನ್ನು ಸಭೆಗೆ ಕರೆಸಲು ಸಿಎಂಗೆ ಆಗಿಲ್ಲ. ಕಬ್ಬು ಬೆಳೆಗಾರರ ಸಮಸ್ಯೆ ಇತ್ಯರ್ಥಕ್ಕೆ ಮುಖ್ಯಮಂತ್ರಿ ಕರೆದ ಸಭೆಗೆ ಕಾರ್ಖಾನೆ ಮಾಲೀಕರು ಹೋಗಿಲ್ಲ. ಸಕ್ಕರೆ ಕಾರ್ಖಾನೆಗಳ ಮಾಲೀಕರ ಬದಲು ಅವರು ಕಳುಹಿಸಿದ ಕಾರಕೂನರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಸಿಎಂ, ಕಾರಕೂನರ ಜತೆಗೆ ಸಭೆ ನಡೆಸಿದ್ದಾರೆ. ಮುಖ್ಯಮಂತ್ರಿಗೆ ನಾಚಿಕೆಯಾಗಬೇಕು. ಸಿಎಂ ಕರೆದ ಸಭೆಗೆ ಕಾರ್ಖಾನೆ ಮಾಲೀಕರಿಗೆ ಲೆಕ್ಕಕ್ಕೇ ಇಲ್ಲ ಎಂದರು. ಕುಮಾರಸ್ವಾಮಿ ರೈತರಿಗೆ ಮೋಸ ಮಾಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ. ಅವರ ಮೇಲೆ ಈ ಜಿಲ್ಲೆಯ ಋಣವಿದೆ. ಜಿಲ್ಲೆಯ ರೈತರ ಋಣ ತೀರಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡಬೇಕಿತ್ತು. ಆದರೆ, ಕುಮಾರಸ್ವಾಮಿಯತ್ತ ಬೆಟ್ಟು ಮಾಡುತ್ತಿದ್ದಾರೆ. ಅವರೇ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವುದು ಅವರ ಜವಾಬ್ದಾರಿಯೂ ಆಗಿದೆ ಎಂದರು.
ಉತ್ತರ ಕರ್ನಾಟದಕಲ್ಲಿ ಹೆಣ್ಣು ಮಕ್ಕಳನ್ನು ಅವರ ಹೆಸರಿನ ಮೂಲಕ ಅವ್ವ ಎಂದು ಕರೆಯುತ್ತೇವೆ. ಇಂದಿಗೂ ನಾವು ಸಂಸ್ಕೃತಿ ಕಾಪಾಡಿಕೊಂಡು ಬಂದಿದ್ದೇವೆ. ಆದರೆ, ಸಿಎಂ ಕುಮಾರಸ್ವಾಮಿ, ನಮ್ಮ ಮಹಿಳೆಗೆ ಎಲ್ಲಿ ಮಲಗಿದ್ರಿ ಎಂದು ಅವಮಾನ ಮಾಡಿದ್ದು, ಕೂಡಲೇ ರಾಜ್ಯದ ಜನರ ಕ್ಷಮೆ ಕೋರಬೇಕು.
– ಗೋವಿಂದ ಕಾರಜೋಳ, ಬಿಜೆಪಿ ಶಾಸಕ