ಮುಂಬಯಿ, ಡಿ. 8: ಮೀರಾರೋಡ್ ಪೂರ್ವದ, ಮೀರಾ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ಲಿ., ರಾಷ್ಟ್ರೀಯ ಹೆದ್ದಾರಿ ಸಮೀಪದ ಹೊಟೇಲ್ ಅಮರ್ ಪ್ಯಾಲೇಸ್ ಹಿಂದುಗಡೆಯಿರುವ ಶ್ರೀ ಮಹಾಲಿಂಗೇಶ್ವರ ಟ್ರಸ್ಟ್ ಇದರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿ. 7ರಂದು ಸಂಜೆ ಕಾರ್ತಿಕ ದೀಪೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.
ಶ್ರೀ ಸನ್ನಿಧಿಯ ಪ್ರಧಾನ ಅರ್ಚಕ ಸಾತಿಂಜ ಜನಾರ್ದನ್ ಭಟ್ ಅವರು ಸ್ವದೇಶಿ ನಿರ್ಮಿತ ಹಣತೆಗೆ ದೀಪ ಹಚ್ಚಿ ದೀಪೋತ್ಸಕ್ಕೆ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ, ದೀಪವು ಲೌಕಿಕ ಹಾಗೂ ಅಲೌಕಿಕ ಸಂಬಂಧಗಳ ಕೊಂಡಿಯಾಗಿದೆ. ಕತ್ತಲನ್ನು ಹೊಡೆದೋಡಿಸುವ ಜ್ಯೋತಿ ಮನೆ-ಮನವನ್ನು ಬೆಳಗಿಸುವ ಶಕ್ತಿಯಾಗಿದೆ. ಅಸಂಖ್ಯಾಕ ದೀಪಗಳ ಪ್ರಜ್ವಲನೆಯಿಂದ ನಮ್ಮಲ್ಲಿರುವ ಲೌಕಿಕ ಚಿಂತನೆಗಳು ದೂರವಾಗಿ ಮನಸ್ಸು ಶಾಂತಿಯ ಪಥದತ್ತ ಮುನ್ನಡೆಯುತ್ತದೆ. ದೇಶದ ಆರ್ಥಿಕತೆಯನ್ನು ಬುಡ ಸಮೇತ ಅಲುಗಾಡಿಸಿದ ಕೊರೊನಾ ಸಾಂಕ್ರಾಮಿಕ ರೋಗ ಮಾನವ ಬದುಕಿನ ಮೇಲೆ ಘೋರ ಪರಿಣಾಮ ಬೀರಿದೆ. ಪರಿಸ್ಥಿತಿ ಯೋಚಿಸಲಾರದಷ್ಟು ಶೋಚನೀಯವಾಗಿದೆ. ಇದರಿಂದ ಮುಕ್ತಿ ಹೊಂದಲು ಸರಕಾರದ ನಿಯಮಗಳನ್ನು ಪಾಲಿಸಬೇಕು. ಸ್ವತ್ಛತೆ, ಮಾಸ್ಕ್, ಸಾಮಾಜಿಕ ಅಂತರದೊಂದಿಗೆ ಆರೋಗ್ಯ ಪೂರ್ಣ ಸಮಾಜವನ್ನು ನಿರ್ಮಿಸಬೇಕೆಂದು ವಿನಂತಿಸಿದರು. ಮನದ ಚಿಂತೆಯ ಕತ್ತಲನ್ನು ದೂರಗೊಳಿಸುವ ಕಾರ್ತಿಕ ದೀಪೋತ್ಸವ ತಮಗೆಲ್ಲ ಸನ್ಮಂಗಳವನ್ನುಂಟು ಮಾಡಲಿ ಎಂದು ಹರಸಿದರು.
ಇದೇ ಸಂದರ್ಭ ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿಯ ಸದಸ್ಯರಿಂದ ಭಜನೆ, ದೀಪೋತ್ಸವ, ಮಹಾ ರಂಗಪೂಜೆ, ಪರಿವಾರ ದೇವರಾದ ಶ್ರೀ ಗಣಪತಿ, ದುರ್ಗಾಮಾತೆ, ನವಗ್ರಹಗಳಿಗೆ ವಿಶೇಷ ಪೂಜೆಗಳು ನೆರವೇರಿದವು. ವೈದಿಕ ವಿಧಿವಿಧಾನದಲ್ಲಿ ಮಾಧವ ಭಟ್, ರಾಘವೇಂದ್ರ ಉಪಾಧ್ಯಾಯ, ದೇವರಾಜ್ ಭಟ್, ಕುಂಟಾಡಿ ಸುರೇಶ್ ಭಟ್, ಅಕುಲ್ ನೆಲ್ಲಿತ್ತಾಯ, ಶ್ರೀನಿವಾಸ ಭಟ್, ಶ್ರೀಶ ಉಡುಪ ಸಹಕರಿಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಶಿಮಂತೂರು ಮಜಲಗುತ್ತು ಬಾಬಾ ರಂಜನ್ ಶೆಟ್ಟಿ, ಸ್ಥಾಪಕ ಕೃಷ್ಣ ಜಿ. ಶೆಟ್ಟಿ, ಕಾರ್ಯದರ್ಶಿ ಪ್ರಮೋದ್ ವಿ. ಮಾತ್ರೆ, ಕೋಶಾಧಿಕಾರಿ ವೆಂಕಟೇಶ್ ಪಾಟೀಲ್, ಟ್ರಸ್ಟಿಗಳಾದ ಅನಿಲ್ ಶೆಟ್ಟಿ, ಸುಂದರ್ ಶೆಟ್ಟಿಗಾರ್, ಹೇಮಂತ್ ಸಂಕಪಾಲ್, ಪ್ರಸನ್ನ ಬಿ. ಶೆಟ್ಟಿ ಕುರ್ಕಾಲು, ಪ್ರಸನ್ನ ಶೆಟ್ಟಿ ಸಹಿತ ಮಹಿಳಾ ಸದಸ್ಯೆಯರು, ವಿವಿಧ ಸಂಘ-ಸಂಸ್ಥೆಗಳ, ಸಮುದಾಯ ಸಂಘಟನೆಗಳ ಪದಾಧಿಕಾರಿಗಳು, ಕನ್ನಡೇತರರು ಉಪಸ್ಥಿತರಿದ್ದು ಸರಕಾರದ ಲಾಕ್‌ಡೌನ್ ನಿಯಮದಂತೆ ಪ್ರಸಾದ ಸ್ವಿಕರಿಸಿದರು.
ಚಿತ್ರ-ವರದಿ: ರಮೇಶ್ ಅಮೀನ್