ಕನ್ನಡದಲ್ಲಿ “ಮನೆ ದೇವ್ರು’, “ಹಾಲುಂಡ ತವರು’, “ಕರುಳಿನ ಕೂಗು’ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿದ್ದ ನಿರ್ಮಾಪಕ ವೈಜಾಕ್ ರಾಜು ಅವರ ಪುತ್ರ ಕಾರ್ತಿಕ್ ರಾಜು ಈಗ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಅಂದಹಾಗೆ, ಕಾರ್ತಿಕ್ ರಾಜು ಅಭಿನಯದ ಈ ಸಿನಿಮಾಕ್ಕೆ “ಅಥರ್ವ’ ಎಂದು ಹೆಸರಿಡಲಾಗಿದ್ದು, ಇದೇ ನವೆಂಬರ್‌ನಲ್ಲಿ ಸಿನಿಮಾ ತೆರೆಗೆ ಬರುತ್ತಿದೆ.
ಮೊದಲ ಬಾರಿಗೆ ಕನ್ನಡ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿರುವುದರ ಬಗ್ಗೆ ಮಾತನಾಡುವ ಕಾರ್ತಿಕ್ ರಾಜು, “ಕನ್ನಡ ಸಿನಿಮಾದಲ್ಲಿ ನಾಯಕನಾಗಿ ನಟಿಸಬೇಕೆಂಬ ನನ್ನ ಬಹುದಿನ ಕನಸು ಈಗ ಈಡೇರಿದೆ. ಇದಕ್ಕೂ ಮೊದಲು ನಾನು ಪುನೀತ್ ರಾಜಕುಮಾರ್ ಅಭಿನಯದ “ವೀರ ಕನ್ನಡಿಗ’ ಸಿನಿಮಾದಲ್ಲಿ ಬಾಲನಟನಾಗಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. “ನೀನು ಹೀರೋ ಆಗ್ತೀಯಾ’ ಎಂದು ಪುನೀತ್ ರಾಜಕುಮಾರ್ ಹೇಳಿದ್ದ ಮಾತು ಇಂದು ನಾನು ನಟ ಆಗುವಂತೆ ಮಾಡಿದೆ’ ಎಂದರು.
“ನಾನು ತೆಲುಗಿನಲ್ಲಿ ಕೆಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದೇನೆ. ಕನ್ನಡದಲ್ಲಿ “ಅಥರ್ವ’ ನನ್ನ ಮೊದಲ ಸಿನಿಮಾ. ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ. ಕ್ಲೂಸ್ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿರುತ್ತೇನೆ. ಯಾವುದೇ ಕುರುಹುಗಳಿಲ್ಲದ ಒಂದು ಕೇಸನ್ನು ಹೇಗೆ ಪತ್ತೆ ಮಾಡುತ್ತೇನೆ ಎನ್ನುವುದೇ ಈ ಸಿನಿಮಾದ ಕಥೆ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು ಕಾರ್ತಿಕ್ ರಾಜು.
ಮೂಲತಃ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ, ಈಗಾಗಲೇ ಕೆಲ ನಿರ್ದೇಶಕರೊಂದಿಗೆ ಕೆಲಸ ಮಾಡಿದ ಅನುಭವವಿರುವ ಮಹೇಶ್ ರೆಡ್ಡಿ, “ಅಥರ್ವ’ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. “ಕ್ಲೂಸ್ ಡಿಪಾರ್ಟ್ ಮೆಂಟ್ ಎಂಬುದು ಪೊಲೀಸ್ ಡಿಪಾರ್ಟ್‌ಮೆಂಟ್ ವ್ಯಾಪ್ತಿಗೆ ಬರುತ್ತದೆ. ಈ ಕ್ಲೂಸ್ ಡಿಪಾರ್ಟ್‌ಮೆಂಟ್ ಸಬೆjಕ್ಟ್‌ನಲ್ಲಿ ಹೆಚ್ಚಿನ ಸಿನಿಮಾಗಳು ಬಂದಿಲ್ಲ. ಒಂದು ಕೊಲೆಯ ಸತ್ಯವನ್ನು ತಿಳಿಯಲು ಕ್ಲೂಸ್ ಡಿಪಾರ್ಟ್‌ಮೆಂಟ್ ಎಷ್ಟು ಮುಖ್ಯ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಿದ್ದೇವೆ’ ಎಂಬುದು ನಿರ್ದೇಶಕರ ಮಾತು.
ಚಿತ್ರದಲ್ಲಿ ನಾಯಕಿ ಸಿಮ್ರಾನ್ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕ ಸುಭಾಷ್ ನೂತಲಪಾಟಿ , ಹಿರಿಯ ನಿರ್ಮಾಪಕ ವೈಜಾಕ್ ರಾಜು ಹಾಗೂ ವಿತರಕ ಮಾರ್ ಸುರೇಶ್ “ಅಥರ್ವ’ ಸಿನಿಮಾದ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡಿದರು.