ಚೆನ್ನೈ: ಕಾಲಿವುಡ್ ಸಿನಿಮಾರಂಗದ ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರ ʼಜಿಗರ್ತಾಂಡ ಡಬಲ್ಎಕ್ಸ್ʼ ಶುಕ್ರವಾರ(ನ.10 ರಂದು) ರಿಲೀಸ್ ಆಗಲಿದೆ. ಕಾರ್ತಿಕ್ ಸುಬ್ಬರಾಜ್ ಅವರ ʼಪೆಟ್ಟಾʼ ಸಿನಿಮಾದ ಬಳಿಕ ಅಂದರೆ ನಾಲ್ಕು ವರ್ಷದ ಬಳಿಕ ಥಿಯೇಟರ್ ನಲ್ಲಿ ಕಾರ್ತಿಕ್ ಅವರ ಸಿನಿಮಾ ರಿಲೀಸ್ ಆಗಲಿದೆ.
2014 ರಲ್ಲಿ ಬಂದ ʼಜಿಗರ್ತಾಂಡʼ ಸೂಪರ್ ಹಿಟ್ ಆಗಿತ್ತು. ಇದೀಗ ಅದೇ ಟೈಟಲ್ ನಲ್ಲಿ ʼಜಿಗರ್ತಾಂಡ ಡಬಲ್ಎಕ್ಸ್ʼ ಸಿನಿಮಾ ಬರುತ್ತಿದ್ದು, ಪ್ರೇಕ್ಷಕರು ಕಾರ್ತಿಕ್ ಸುಬ್ಬರಾಜ್ ಅವರ ಮಾಸ್ ಮೂವಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಈ ಹಿಂದೆ ಕಾರ್ತಿಕ್ ಸುಬ್ಬರಾಜ್ ಅವರ ʼ ಜಗಮೆ ತಂದಿರಮ್ʼ ,ʼಮಹಾನ್ʼ ಸಿನಿಮಾಗಳು ಓಟಿಟಿಯಲ್ಲಿ ರಿಲೀಸ್ ಆಗಿದ್ದವು. ಈ ಎರಡೂ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಿಲ್ಲ. ಈ ಬಗ್ಗೆ ಕಾರ್ತಿಕ್ ಸುಬ್ಬರಾಜ್ ಅವರು ʼಜಿಗರ್ತಾಂಡ ಡಬಲ್ಎಕ್ಸ್ʼ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ್ದಾರೆ.
“ಓಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡುವ ನಿರ್ಧಾರದ ಬಗ್ಗೆ ನಾನು ನಿರ್ಮಾಪಕರೊಂದಿಗೆ ವಾದ ಮಾಡಿದ್ದೆ. ನನಗೆ ಆ ಎರಡು ಸಿನಿಮಾಗಳು ಓಟಿಟಿಯಲ್ಲಿ ರಿಲೀಸ್ ಮಾಡಲು ಇಷ್ಟವಿರಲಿಲ್ಲ. ಸಿನಿಮಾದ ಸಂಪೂರ್ಣ ಔಟ್ ಪುಟ್ ನ್ನು ನೀಡುವುದಿಲ್ಲ ಎಂದಾಗ ಅದ್ಯಾಗೋ ಕೊನೆಗೆ ಸಿನಿಮಾವನ್ನು ಓಟಿಟಿಯಲ್ಲಿ ರಿಲೀಸ್ ಮಾಡಲು ಒಪ್ಪಿದೆ” ಎಂದರು.
“ನಾಲ್ಕು ವರ್ಷದ ಬಳಿಕ ನನ್ನ ಸಿನಿಮಾ ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿದೆ. ನನ್ನ ಮೊದಲ ಸಿನಿಮಾ ʼಪಿಜ್ಜಾʼ ರಿಲೀಸ್ ವೇಳೆ ನಾನು ಕುತೂಹಲದಿಂದ ಕಾಯುತ್ತಿದ್ದ ಕ್ಷಣದ ಅನುಭವ ನನಗೆ ಈ ಸಿನಿಮಾ ರಿಲೀಸ್ ವೇಳೆ ಆಗುತ್ತಿದೆ” ಎಂದು ಕಾರ್ತಿಕ್ ಹೇಳುತ್ತಾರೆ.
ರಾಘವ ಲಾರೆನ್ಸ್ ಮತ್ತು ಎಸ್‌ಜೆ ಸೂರ್ಯ ಕಾಣಿಸಿಕೊಳ್ಳುತ್ತಿದ್ದು, ಲಾರೆನ್ಸ್ ಮಧುರೈ ಪಾಂಡಿಯನ್ ಎನ್ನುವ ಗ್ಯಾಂಗ್ ಸ್ಟರ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
2014 ರಲ್ಲಿ ʼಜಿಗರ್ತಾಂಡʼ ಸಿನಿಮಾ ಕನ್ನಡ,ತೆಲುಗು ಹಾಗೂ ಹಿಂದಿಯಲ್ಲೂ ರಿಮೇಕ್ ಆಗಿತ್ತು. ಬೇರೆ ಬೇರೆ ಕಲಾವಿದರು ಅದರಲ್ಲಿ ನಟಿಸಿದ್ದರು.