ಲಾಹೋರ್ : ಕರ್ತಾರ್‌ಪುರ್ ಕಾರಿಡಾರ್ ನಿಂದಾಗಿ ಭಾರತ ಮತ್ತು ಪಾಕಿಸ್ಥಾನಕ್ಕೆ ಶಾಶ್ವತ ಶಾಂತಿ ಮತ್ತು ಸಮೃದ್ಧಿಯನ್ನು ಹೊಂದುವ ಅಪರಿಮಿತ ಅವಕಾಶಗಳು ತೆರೆದುಕೊಳ್ಳಲಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಪಂಜಾಬ್ ಸಚಿವ ನವಜ್ಯೋತ್ ಸಿಂಗ್ ಸಿಧು ಇಂದಿಲ್ಲಿ ಹೇಳಿದರು.
ನಾಳೆ ಬುಧವಾರ ಪಾಕಿಸ್ಥಾನದ ಕಡೆಯಿಂದ, ಪ್ರಧಾನಿ ಇಮ್ರಾನ್ ಖಾನ್ ಅವರು ನೆರವೇರಿಸಲಿರುವ ಕರ್ತಾರ್‌ಪುರ್ ಕಾರಿಡಾರ್ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಸಿಧು ಇಲ್ಲಿಗಾಗಮಿಸಿದ್ದಾರೆ.
ಕರ್ತಾರ್‌ಪುರ್ ಕಾರಿಡಾರ್ ನಿಂದಾಗಿ ಭಾರತೀಯ ಸಿಕ್ಖರಿಗೆ ಪಾಕಿಸ್ಥಾನದ ರಾವಿ ನದೀ ತೀರದಲ್ಲಿರುವ ದರ್ಬಾರ್ ಸಾಹಿಬ್ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಸುವುದಕ್ಕೆ ಸುಲಭದ ಅವಕಾಶ ಪ್ರಾಪ್ತವಾಗಲಿದೆ ಎಂದು ಸಿಧು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದರು.
ಕಳೆದ ವಾರ ಕೇಂದ್ರ ಸರಕಾರ ಪಂಜಾಬ್ ನ ಗುರುದಾಸ್‌ಪುರ ಜಿಲ್ಲೆಯಿಂದ ಅಂತಾರಾಷ್ಟ್ರೀಯ ಗಡಿಯ ವರೆಗೆ ತಾನು ಕಾರಿಡಾರ್ ಕಾಮಗಾರಿಯನ್ನು ಕೈಗೊಳ್ಳುವುದಾಗಿ ಹೇಳಿತ್ತು. ಆ ಪ್ರಕಾರ ನಿನ್ನೆ ಸೋಮವಾರ ಭಾರತದ ಕಡೆಯಿಂದ ಶಿಲಾನ್ಯಾಸ ನಡೆದಿತ್ತು.
ಕರ್ತಾರ್‌ಪುರ್ ಕಾರಿಡಾರ್ ಭಾರತ – ಪಾಕಿಸ್ಥಾನ ನಡುವೆ ಸ್ನೇಹ ಸೇತುವಾಗುವುದಲ್ಲದೆ ಹಳೆಯ ಕಹಿ ನೆನಪುಗಳನ್ನು ಅದು ಅಳಿಸಿ ಹಾಕಲಿದೆ ಎಂದು ಸಿಧು ಹೇಳಿದರು.
“ಕರ್ತಾರ್‌ಪುರ್ ಗುರುದ್ವಾರ ದರ್ಬಾರ್ ಸಾಹಿಬ್‌ನಲ್ಲಿ ಪ್ರಾರ್ಥನೆ ಸಲ್ಲಿಸುವ ಹಕ್ಕನ್ನು ಸಿಕ್ಖ ಸಮುದಾಯದವರಿಗೆ ಬಹಳ ದೀರ್ಘ ಕಾಲದಿಂದ ನಿರಾಕರಿಸಲಾಗಿದೆ. ಆದರೆ ಇನ್ನು ಮುಂದು ಹಾಗಾಗುವುದಿಲ್ಲ’ ಎಂದು ಸಿಧುಹೇಳಿದರು.