Advertisement

ಕರ್ತಾರ್ಪುರ ಕಾರಿಡಾರ್‌ ಪಾಕ್‌-ಭಾರತದ ಧರ್ಮ ಮಾರ್ಗ!

09:50 AM Nov 11, 2019 | mahesh |

ದೇಶದ ಸಿಕ್ಖ್ ಸಮುದಾಯದ ಪಾಲಿಗಿದು ಅತ್ಯಂತ ಮಹತ್ವದ ದಿನ. ತಮ್ಮ ಪರಮೋಚ್ಚ ಧರ್ಮಗುರು ಗುರುನಾನಕರ 550ನೇ ಜಯಂತಿಯಂದು, ಪಾಕಿಸ್ಥಾನದ ಕರ್ತಾರ್ಪುರದಲ್ಲಿನ ದರ್ಬಾರ್‌ ಸಾಹಿಬ್‌ ಗುರುದ್ವಾರದ ದರ್ಶನ ಪಡೆಯುವ ಅವಕಾಶ ಅವರಿಗೆ ಕೊನೆಗೂ ಲಭ್ಯವಾಗಿದೆ. ಇದಕ್ಕೆ ದಾರಿ ಮಾಡಿಕೊಡುತ್ತಿದೆ, ಭಾರತ-ಪಾಕಿಸ್ಥಾನದ ನಡುವಿನ 4.2 ಕಿಲೋ ಮೀಟರ್‌ ಉದ್ದದ ಕರ್ತಾರ್ಪುರ ಕಾರಿಡಾರ್‌! ಗುರುನಾನಕರು ಲೀನವಾದ ಈ ಪ್ರದೇಶವು ದೇಶ ವಿಭಜನೆಯ ಸಮಯದಲ್ಲಿ ಪಾಕಿಸ್ಥಾನದ ಪಾಲಾಗಿಬಿಟ್ಟಿತ್ತು. ಅಂದಿನಿಂದಲೂ ದರ್ಬಾರ್‌ ಸಾಹೀಬ್‌ ದರ್ಶನಕ್ಕಾಗಿ ಸಿಖ್‌ ಸಮುದಾಯ ಹಾತೊರೆದದ್ದು ಅಷ್ಟಿಷ್ಟಲ್ಲ. ಭಾರತದ ಗಡಿಯಲ್ಲೇ ನಿಂತು ದುರ್ಬೀನಿನ ಮೂಲಕ ದರ್ಶನ ಮಾಡಬೇಕಿತ್ತು. ಇಂದು ಕರ್ತಾರ್ಪುರ
ಕಾರಿಡಾರ್‌ನ ಭಾರತೀಯ ಭಾಗದ ಉದ್ಘಾಟನೆಯನ್ನು ನರೇಂದ್ರ ಮೋದಿ ಮಾಡಿದರೆ, ಅತ್ತ ಪಾಕಿಸ್ಥಾನದ ಪ್ರಧಾನಿ ಇಮ್ರಾನ್‌ ಖಾನ್‌ ಪಾಕಿಸ್ಥಾನದಲ್ಲಿನ ಕಾರಿಡಾರ್‌ ಭಾಗಕ್ಕೆ ಗ್ರೀನ್‌ ಸಿಗ್ನಲ್‌ ಕೊಡಲಿದ್ದಾರೆ. ಈ ಐತಿಹಾಸಿಕ ಕ್ಷಣವು ಸಿಖ್‌ ಸಮುದಾಯದ ಪಾಲಿಗೆ ಅವಿಸ್ಮರಣೀಯವಾಗಲಿದೆ. ಆದರೆ ಇದೇ ವೇಳೆಯಲ್ಲೇ, ಪಾಕಿಸ್ಥಾನದ ಕುಕೃತ್ಯಗಳ ಅರಿವಿರುವ ಭಾರತಕ್ಕೆ, ಎಲ್ಲಿ ಪಾಕಿಸ್ಥಾನವು ಕರ್ತಾರ್ಪುರ ಕಾರಿಡಾರ್‌ ಅನ್ನು ಖಲಿಸ್ಥಾನಿ ಪ್ರತ್ಯೇಕತಾವಾದಕ್ಕೆ ಇಂಬು ಕೊಡುವ ವೇದಿಕೆಯಾಗಿ ಬಳಸಿಕೊಳ್ಳಲಿದೆಯೋ ಎಂಬ ಆತಂಕವೂ ಇದೆ…

Advertisement

ಕೇವಲ 3-4 ಕಿಲೋಮೀಟರ್‌ಗಳ ಅಂತರ
ಕರ್ತಾರ್ಪುರ ಪಾಕಿಸ್ತಾನದ ನಾರೇವಾಲ್‌ ಎಂಬ ಜಿಲ್ಲೆಯಲ್ಲಿನ ಪಟ್ಟಣ. ಕರ್ತಾರ್ಪುರದಲ್ಲಿನ ದರ್ಬಾರ್‌ ಸಾಹಿಬ್‌ ಗುರುದ್ವಾರ ರಾವಿ ನದಿಯ ದಂಡೆಯಲ್ಲಿ ಇದ್ದು, ಪಂಜಾಬ್‌ನ ಗುರುದಾಸ್‌ಪುರದ ರೈಲ್ವೇ ಸ್ಟೇಷನ್‌ನಿಂದ ಕೇವಲ 4 ಕಿ.ಮಿ ದೂರದಲ್ಲಿದೆ. ಪಾಕಿಸ್ತಾನದ ರಾಜಧಾನಿ ಲಾಹೋರ್‌ನಿಂದ 120 ಕಿಲೋಮೀಟರ್‌ ದೂರದಲ್ಲಿ ಇರುವ ಈ ಪ್ರದೇಶದಲ್ಲಿ ಗುರುನಾನಕರು ತಮ್ಮ ಕೊನೆಯ 18 ವರ್ಷಗಳನ್ನು ಕಳೆದರು. ಅಲ್ಲಿಯೇ ಹರಿಯುವ ರಾವಿ ನದಿಯಲ್ಲಿ ಅವರು ದೈವಾಧೀನರಾದರು. ಅವರು ಲೀನವಾದ ಸ್ಥಳದಲ್ಲೇ ದರ್ಬಾರ್‌ ಸಾಹಿಬ್‌ ಗುರುದ್ವಾರ ನಿರ್ಮಿಸಲಾಗಿದೆ. ಕರ್ತಾರ್ಪುರದಲ್ಲಿ ಪಂಜಾಬಿ ಭಾಷಿಕರ ಸಂಖ್ಯೆ 98 ಪ್ರತಿಶತದಷ್ಟಿದ್ದು, ಉಳಿದ 2 ಪ್ರತಿಶತ ಉರ್ದು ಭಾಷಿಕರಿದ್ದಾರೆ. ಆದರೆ ಬಹುಸಂಖ್ಯೆಯಲ್ಲಿ ಇರುವವರು ಮುಸಲ್ಮಾನರು ಎನ್ನುವುದು ಗಮನಾರ್ಹ. ವಿಭಜನೆಯ ಸಮಯದಲ್ಲಿ ಈ ಪ್ರದೇಶದಲ್ಲಿನ ಸಿಖ್ಬರೆಲ್ಲ ಭಾರತಕ್ಕೆ ವಲಸೆ ಬಂದರೆ, ಭಾರತದಿಂದ ಮುಸಲ್ಮಾನರು ಕರ್ತಾರ್ಪುರಕ್ಕೆ ವಲಸೆ ಹೋಗಿದ್ದರು.

ರ್ಯಾಡ್‌ಕ್ಲಿಫ್ ಮಾಡಿದ ಎಡವಟ್ಟು
1947ರಲ್ಲಿ, ದೇಶ ವಿಭಜನೆಯ ಸಮಯದಲ್ಲಿ ಬ್ರಿಟಿಷ್‌ ಅಧಿಕಾರಿ ರ್ಯಾಡ್‌ಕ್ಲಿಫ್ ಮಾಡಿದ ಎಡವಟ್ಟಿನಿಂದಾಗಿ ಕರ್ತಾರ್ಪುರ ಪಾಕ್‌ ಪಾಲಾಯಿತು. ಸಿಖ್ಬರ ಪವಿತ್ರ ಸ್ಥಳ ಭಾರತಕ್ಕೆ ಸಲ್ಲಬೇಕು ಎಂಬ ಪ್ರಜ್ಞೆ ಇಲ್ಲದೇ ಆತ ಎಳೆದ ಗೆರೆ(ರ್ಯಾಡ್‌ಕ್ಲಿಫ್ ಲೈನ್‌) ಈ ಪ್ರಮಾದಕ್ಕೆ ಕಾರಣ. “ಇಸ್ಲಾಮಿಕ್‌ ರಿಪಬ್ಲಿಕ್‌ ಆಫ್ ಪಾಕಿಸ್ಥಾನದ’ ಆಡಳಿತಗಾರರು ತಮ್ಮಲ್ಲಿನ ಎಲ್ಲಾ ಮುಸ್ಲಿಮೇತರ ಧರ್ಮಕ್ಷೇತ್ರಗಳಂತೆ, ದರ್ಬಾರ್‌ ಸಾಹೀಬ್‌ ಅನ್ನೂ ಕಡೆಗಣಿಸಿಬಿಟ್ಟರು. ಕಾಲಾಂತರದಲ್ಲಿ ಈ ಕಟ್ಟಡ ಹಾಳಾಗುತ್ತಾ ಬಂದಿತು. ಭಾರತದ ಗಡಿ ಭಾಗದಿಂದ ನೋಡಿ ದರ್ಶನ ಪಡೆಯುತ್ತಿದ್ದ ಸಿಖ್‌ ಸಮುದಾಯಕ್ಕೆ, ತಮ್ಮ ಪವಿತ್ರ ಕ್ಷೇತ್ರಕ್ಕೆ ಎದುರಾಗಿದ್ದ ದುಸ್ಥಿತಿ ನೋಡಿ ಅತೀವ ನೋವಾಗುತ್ತಿತ್ತು. ಈ ಕಾರಣಕ್ಕಾಗಿಯೇ, ಜಗತ್ತಿನ ಸಿಖ್‌ ಸಮುದಾಯ ಮತ್ತು ಭಾರತ ಸರ್ಕಾರ ಕರ್ತಾರ್ಪುರವನ್ನು ಸರಿಪಡಿಸುವಂತೆ ನಿರಂತರವಾಗಿ ಪಾಕಿಸ್ಥಾನಕ್ಕೆ ವಿನಂತಿಸುತ್ತಲೇ ಬಂದವು.

ಕೊನೆಗೂ 1995ರಲ್ಲಿ ಪಾಕಿಸ್ಥಾನಿ ಸರ್ಕಾರ ಗುರುದ್ವಾರವನ್ನು ಸರಿಪಡಿಸಲಾರಂಭಿಸಿತು. ಇನ್ನು ಭಾರತದ ಗುರುದಾಸಪುರದಲ್ಲಿನ ಡೇರಾಬಾಬಾ ನಾನಕ್‌ ಗುರುದ್ವಾರವನ್ನು ಕರ್ತಾರ್ಪುರದಲ್ಲಿನ ದರ್ಬಾರ್‌ ಸಾಹಿಬ್‌ಗ ಬೆಸೆಯುವ “ಕಾರಿಡಾರ್‌’ ನಿರ್ಮಾಣದ ಕನಸು ಮೊಳಕೆಯೊಡೆದದ್ದು 1999ರಲ್ಲಿ, ಅಂದರೆ, ವಾಜಪೇಯಿ ಅವರ ಆಡಳಿತದಲ್ಲಿ. ದೆಹಲಿ-ಲಾಹೋರ್‌ನ ನಡುವೆ ಬಸ್‌ ಸಂಚಾರ ಆರಂಭವಾದ ಸಮಯದಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್, ಭಾರತ ಪ್ರಧಾನಿ ವಾಜಪೇಯಿ ಈ ವಿಚಾರವಾಗಿ ಮಾತುಕತೆ ನಡೆಸಿದ್ದರು. ಮುಂದೆ ಜನರಲ್‌ ಪರ್ವೇಜ್‌ ಮುಷರ್ರಫ್ ಪಾಕ್‌ ಅಧ್ಯಕ್ಷರಾದ ನಂತರ ಪಾಕಿಸ್ಥಾನದ ಕಡೆಯಿಂದ ಕಾರಿಡಾರ್‌ ನಿರ್ಮಾಣ ಆರಂಭವಾಯಿತು. ಪಾಕಿಸ್ಥಾನದ ಬದಿಯ 50 ಪ್ರತಿಶತದಷ್ಟು ರಸ್ತೆ ಅವರ ಅವಧಿಯಲ್ಲಿ ಆಯಿತು. ಆದರೆ, ಇತ್ತ ಭಾರತ ಮಾತ್ರ ಈ ವಿಷಯದಲ್ಲಿ ಹಿಂಜರಿಯುತ್ತಲೇ ಬಂದಿತ್ತು.

ಪಾಕಿಸ್ಥಾನ ಕರ್ತಾರ್ಪುರ ಕಾರಿಡಾರ್‌ ಅನ್ನು ಖಲಿಸ್ಥಾನಿ ಪ್ರತ್ಯೇಕತಾವಾದಕ್ಕೆ ಬಳಸಿಕೊಳ್ಳಲಿದೆ ಎಂಬ ಆತಂಕ ಭಾರತಕ್ಕೆ. 2017ರಲ್ಲಿ ಈ ವಿಚಾರದಲ್ಲಿ ಪರಿಶೀಲನೆ ನಡೆಸಲು ಸಂಸದೀಯ ಸಮಿತಿಯನ್ನು ರಚಿಸಲಾಯಿತು. ಕಾಂಗ್ರೆಸ್‌ ಸಂಸದ ಶಶಿ ತರೂರ್‌ ನೇತೃತ್ವದ ಈ ಸಮಿತಿಯು, ಭದ್ರತಾ ಕಾರಣಗಳಿಗಾಗಿ ಹಾಗೂ ಪಾಕ್‌-ಭಾರತದ ನಡುವೆ ಸೃಷ್ಟಿಯಾದ ಬಿಕ್ಕಟ್ಟಿನ ವಿಚಾರವನ್ನು ಎದುರಿಟ್ಟು ಭಾರತದ ವತಿಯಿಂದ ಕಾರಿಡಾರ್‌ ನಿರ್ಮಾಣ ಬೇಡವೆಂದು ವರದಿ ಸಲ್ಲಿಸಿತ್ತು. ಕೊನೆಗೂ ಭಾರತದ ಕಡೆಯಿಂದ ಕಾರಿಡಾರ್‌ ನಿರ್ಮಾಣಕ್ಕೆ ಶಂಕುಸ್ಥಾಪನೆಯಾದದ್ದು 26 ನವೆಂಬರ್‌ 2018ರಲ್ಲಿ. ಕಳೆದ ತಿಂಗಳು(ಅಕ್ಟೋಬರ್‌ 31) ಭಾರತವು ತನ್ನ ಭಾಗದಲ್ಲಿನ ಕಾರಿಡಾರ್‌ ನಿರ್ಮಾಣ ಪೂರ್ಣಗೊಳಿಸಿದೆ.

Advertisement

ಇಷ್ಟು ದಿನ ದುರ್ಬೀನಿನಲ್ಲೇ ದರ್ಶನ
ಭಾರತದ ಈ ಬದಿಯಿಂದಲೂ ಬರಿಗಣ್ಣಿಗೆ ದರ್ಬಾರ್‌ ಸಾಹೀಬ್‌ ಕಾಣಿಸುತ್ತದೆ. ಇನ್ನೂ ಸ್ಪಷ್ಟವಾಗಿ ಕಾಣಿಸಬೇಕೆಂದು ದುರ್ಬೀನುಗಳನ್ನು ಅಳವಡಿಸಲಾಗಿದೆ. ಪವಿತ್ರ ದಿನಗಳಂದು ಸಿಖ್ಬರೆಲ್ಲ ದುನೀನಿನ ಮೂಲಕ ದರ್ಬಾರ್‌ ಸಾಹಿಬ್‌ ಗುರುದ್ವಾರದ ದರ್ಶನ ಮಾಡುತ್ತಾ ಬಂದಿದ್ದಾರೆ. ಭಾರತದಿಂದ ನೋಡುವವರಿಗೆ ಈ ಗುರುದ್ವಾರ ಸ್ಪಷ್ಟವಾಗಿ ಕಾಣಿಸಲೆಂಬ ಕಾರಣಕ್ಕೆ ಪಾಕಿಸ್ತಾನ‌ವು, ಗುರುದ್ವಾರದ ಸುತ್ತಮುತ್ತಲಿನ ಹುಲ್ಲು, ಕಂಟಿಗಳನ್ನು ಆಗಾಗ ಕತ್ತರಿಸಿ ಸ್ವತ್ಛಗೊಳಿಸುತ್ತಾ ಬಂದಿದೆ.

ಕ್ಯಾಪ್ಟನ್‌ ಅಮರಿಂದರ್‌ ಅಜ್ಜನಿಂದ ಪುನರ್‌ನಿರ್ಮಾಣ
1572ರಲ್ಲಿ ನಿರ್ಮಾಣವಾದ ಈ ಗುರುದ್ವಾರವು ಅಂದಿನಿಂದ ಹಲವಾರು ಬಾರಿ ರೂಪಾಂತರಗೊಳ್ಳುತ್ತಾ ಬಂದಿದೆ. 18ನೇ ಶತಮಾನದ ಸಿಖ್‌ ಸಾಮ್ರಾಜ್ಯದ ಮಹಾರಾಜ್‌ ರಣಜಿತ್‌ ಸಿಂಗ್‌ ಗುರುದ್ವಾರಕ್ಕೆ ಚಿನ್ನದ ಗೋಪುರ ಕಟ್ಟಿಸಿದ್ದರು, ಅಲ್ಲದೇ ಪಲ್ಲಕ್ಕಿಯನ್ನು ಸಮರ್ಪಿಸಿದ್ದರು. 1911ರಲ್ಲಿ ಹಿಂದೂ ಭಕ್ತಾದಿ ಲಾಲಾ ಶ್ಯಾಮ್‌ ದಾಸ್‌ ಎನ್ನುವವರು ಗುರುದ್ವಾರದ ಪುನಶ್ಚೇತನ ಮಾಡಿದ್ದರು. 1920ರಲ್ಲಿ ಈ ಗುರುದ್ವಾರಕ್ಕೆ ನವ ರೂಪ ಕೊಟ್ಟವರು ಪಟಿಯಾಲಾದ ಅಂದಿನ ಮಹಾರಾಜ ಭೂಪಿಂದಪ್‌ ಸಿಂಗ್‌. 1.35ಲಕ್ಷ ರೂಪಾಯಿ ವೆಚ್ಚದಲ್ಲಿ ಅವರು ಗುರುದ್ವಾರದ ಪುನರ್ನಿಮಾಣ ಮಾಡಿದ್ದಷ್ಟೇ ಅಲ್ಲದೇ, ಗಟ್ಟಿಮುಟ್ಟ ಕಾಂಪೌಂಡ್‌ ಕಟ್ಟಿದರು. ಈ ಕಾಂಪೌಂಡಿನಿಂದಾಗಿ 1920ರಲ್ಲಿ ಬಂದಪ್ಪಳಿಸಿದ ಮಹಾ ನೆರೆಯಿಂದಲೂ ಗುರುದ್ವಾರಕ್ಕೆ ತೊಂದರೆಯಾಗಲಿಲ್ಲ. ಅಂದಹಾಗೆ, ಮಹಾರಾಜ ಭೂಪಿಂದರ್‌ ಸಿಂಗ್‌ ಮತ್ಯಾರೂ ಅಲ್ಲ, ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರ ಅಜ್ಜ!

ಗೊಂದಲದ ನಡೆ
ಕರ್ತಾರ್ಪುರ ವಿಷಯದಲ್ಲಿ ಪಾಕಿಸ್ಥಾನ ಗೊಂದಲ ಹುಟ್ಟಿಸುತ್ತಿದೆ. “ಸಿಖ್‌ ಯಾತ್ರಾರ್ಥಿಗಳಿಗೆ ಪಾಸ್‌ಪೋರ್ಟ್‌ ಬೇಡ, ಗುರುತಿನ ಚೀಟಿ ಸಾಕು’ ಎಂದು ಇಮ್ರಾನ್‌ ಖಾನ್‌ ಟ್ವೀಟ್‌ ಮಾಡಿದ್ದ‌ರು. ಆದರೆ ಮರುದಿನವೇ ಪಾಕ್‌ ಮಿಲಿಟರಿ, ಎಲ್ಲರಿಗೂ ಪಾಸ್‌ಪೋರ್ಟ್‌ ಕಡ್ಡಾಯ ಎಂದಿತು(ಭಯದಿಂದಲೂ ಇರಬಹುದು). ಇದಕ್ಕಿಂತ, ಹೆಚ್ಚಾಗಿ ಭಾರತದಿಂದ ಹಲವಾರು ಪ್ರಮುಖರು ಕರ್ತಾರ್ಪುರಕ್ಕೆ ಹೋಗುತ್ತಿರುವುದರಿಂದ, ಅಲ್ಲಿನ ಸುರಕ್ಷಾ ವ್ಯವಸ್ಥೆ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳಲು ಭಾರತದಿಂದ ಹೋದ ಪರಿಶೀಲನಾ ತಂಡಕ್ಕೆ ಪಾಕಿಸ್ಥಾನ ಸರಿಯಾಗಿ ಸಹಕರಿಸುತ್ತಿಲ್ಲವಂತೆ. ಅಲ್ಲಿ ಭದ್ರತಾ ವ್ಯವಸ್ಥೆ, ತುರ್ತು ವೈದ್ಯಕೀಯ ಸೇವೆ ಹೇಗಿವೆ ಎನ್ನುವ ಬಗ್ಗೆಯೂ ಭಾರತಕ್ಕೆ ಪೂರ್ಣ ಮಾಹಿತಿ ಕೊಟ್ಟಿಲ್ಲ ಪಾಕ್‌. ಆದರೆ ಈ ಹೊತ್ತಲ್ಲಿ ಭಾರತದ ಕಣ್ಣು ಕೆಂಪಾಗಿಸುವಂಥ ಯಾವ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಪಾಕಿಸ್ಥಾನಕ್ಕೆ ಆಗುವುದಿಲ್ಲ. ಕೆಲವು ಪರಿಣತರ ಪ್ರಕಾರ, ಇಮ್ರಾನ್‌ ಸರ್ಕಾರ ನಿಜಕ್ಕೂ ಪ್ರಾಮಾಣಿಕತೆಯಿಂದ ಕಾರಿಡಾರ್‌ ಯೋಜನೆ ಮುಗಿಸಿದ್ದು, ಹಾಳಾಗಿರುವ ಪಾಕ್‌ನ ಇಮೇಜ್‌ ಅನ್ನು ಸರಿಪಡಿಸುವುದು ಅದರ ಉದ್ದೇಶ ಎನ್ನುತ್ತಾರೆ.

ಭಾರತಕ್ಕಿದೆ ಆತಂಕ
ಕರ್ತಾರ್ಪುರ ಕಾರಿಡಾರ್‌ ಅನ್ನು ಪಾಕಿಸ್ಥಾನ ಖಲಿಸ್ಥಾನಿ ಪ್ರತ್ಯೇಕತಾವಾದ ಬೆಳೆಸಲು ಬಳಸಿಕೊಳ್ಳಲಿದೆಯೇ? ಪಾಕಿಸ್ಥಾನಿ ಸರ್ಕಾರವು ಕರ್ತಾರ್ಪುರ ಕುರಿತು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಖಲಿಸ್ಥಾನಿ ಉಗ್ರ ಜರ್ನೈಲ್‌ ಸಿಂಗ್‌ ಭಿಂದ್ರನ್‌ವಾಲೇ ಮತ್ತು ಇತರೆ ಇಬ್ಬರು ಮೃತ ಉಗ್ರರ ಚಿತ್ರಗಳನ್ನು ಬಳಸಿಕೊಂಡ ನಂತರವಂತೂ ಈ ಪ್ರಶ್ನೆ ಭಾರತವನ್ನು ಬಹುವಾಗಿ ಕಾಡುತ್ತಿದೆ. ಇನ್ನು, ಪಂಜಾಬ್‌ ಸಿಎಂ ಕ್ಯಾ. ಅಮರಿಂದರ್‌ ಸಿಂಗ್‌ ಕೂಡ “” ಪಾಕಿಸ್ಥಾನವು ಸಿಖ್ಬರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ, ಪ್ರತ್ಯೇಕತಾವಾದಿಗಳನ್ನು ಬೆಳೆಸಲು ಯೋಚಿಸುತ್ತಿದೆ” ಎಂದು ಎಚ್ಚರಿಸುತ್ತಲೇ ಇದ್ದಾರೆ. ಇದಕ್ಕೆಲ್ಲ ಪುಷ್ಟಿ ನೀಡುವಂತೆ ಕಳೆದ ತಿಂಗಳಷ್ಟೇ ಖಲಿಸ್ಥಾನ್‌ ಪರ ಅಂತಾರಾಷ್ಟ್ರೀಯ ತೀವ್ರವಾದಿ ಸಂಘಟನೆ, ಎಸ್‌ಎಫ್ಜೆ(ಸಿಖ್‌ ಫಾರ್‌ ಜಸ್ಟಿಸ್‌) ಈಗ ಲಾಹೋರ್‌ನಲ್ಲಿ ಅಧಿಕೃತ ಕಚೇರಿಯನ್ನೂ ತೆರಿದಿದೆ ಎಂಬ ವರದಿಗಳೂ ಭಾರತದ ಆತಂಕವನ್ನು ಹೆಚ್ಚಿಸಿವೆ.

ದೇವ್‌ ಆನಂದ್‌ ತವರು
ಕರ್ತಾರ್ಪುರ ಇರುವುದು ಪಾಕಿಸ್ಥಾನದ ನಾರೇವಾಲ್‌ ಜಿಲ್ಲೆಯಲ್ಲಿ. ಈ ಪ್ರದೇಶವು ಅನೇಕ ಖ್ಯಾತನಾಮರ ತವರಾಗಿದೆ. ಬಾಲಿವುಡ್‌ನ‌ ಪ್ರಖ್ಯಾತ ನಟ “ದೇವ್‌ ಆನಂದ್‌’, ಪಂಜಾಬ್‌ನ ಪ್ರಖ್ಯಾತ ಕವಿ “ಶಿವ ಕುಮಾರ್‌ ಬಾದಲ್ವಿ’, ಭಾರತೀಯ ಸೇನೆಯ ಪರಮವೀರ ಚಕ್ರ ವಿಜಯಿ “ಗುರುಬಚ್ಚನ್‌ ಸಿಂಗ್‌ ಸಲಾರಿಯಾ’ ಮತ್ತು ಉರ್ದು ಭಾಷೆಯ ಪ್ರಖ್ಯಾತ ಕವಿ “ಫೈಜ್‌ ಅಹ್ಮದ್‌ ಫೈಜ್‌’ ನಾರೇವಾಲ್‌ ಜಿಲ್ಲೆಯವರು. ದೇವ್‌ ಆನಂದ್‌ ಅಂತೂ ತಮ್ಮ ಹುಟ್ಟು ನೆಲವನ್ನು ಪದೇ ಪದೆ ನೆನೆಯುತ್ತಿದ್ದರು.

ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next