ಹಿರಿಯೂರು: ತೇರುಮಲ್ಲೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ರಾತ್ರಿ ಕರ್ಪೂರದಾರತಿ ಕಾರ್ಯಕ್ರಮ ನಡೆಯಿತು. ರಾತ್ರಿ 9ಗಂಟೆ ವೇಳೆಗೆ ತೇರುಮಲ್ಲೇಶ್ವರ, ಚಂದ್ರಮೌಳೇಶ್ವರ ಹಾಗೂ ಉಮಾ ಮಹೇಶ್ವರಸ್ವಾಮಿ ರಥಾವರೋಹಣದ ನಂತರ ಈ ಕಾರ್ಯಕ್ರಮ ಜರುಗಿತು. ದೇವಸ್ಥಾನದ ಒಳ ಆವರಣದಲ್ಲಿರುವ ಸುಮಾರು 56 ಅಡಿ ಎತ್ತರದ ಕಲ್ಲು ಕಂಬದ ಮೇಲೆ ಜಗದೀಶ್ ಎಂಬುವವರು ಹತ್ತಿ ಕಂಬದ ಸುತ್ತ ಇರುವ
ಎಂಟು ಕಬ್ಬಿಣದ ಸೌಟುಗಳಿಗೆ ಬತ್ತಿ, ಎಣ್ಣೆ ಹಾಕಿ ಕರ್ಪೂರ ಬಳಸಿ ದೀಪ ಹಚ್ಚಿದರು. ಇದಾದ ತಕ್ಷಣ ದೀಪಸ್ತಂಭದ ಸುತ್ತ ನೆರೆದಿದ್ದ ಸಾವಿರಾರು ಭಕ್ತರು ಕರ್ಪೂರವನ್ನು ಹಚ್ಚಿ ಸಂತಸ ಪಟ್ಟರು.
ಹಿಂದೆ ನಾಡನ್ನು ಆಳುತ್ತಿದ್ದ ದೊರೆಗಳು ಕರ್ಪೂರದ ಆರತಿ ಕಾರ್ಯಕ್ರಮವನ್ನು ಶೌರ್ಯದ ಪ್ರತೀಕವೆಂದೇ ಪರಿಗಣಿಸಿದ್ದರು. ವಿಧೀರ ಪುರುಷರು 56 ಅಡಿ ಎತ್ತರದ ದೀಪಸ್ತಂಭವನ್ನು ಚಕಚಕನೆ ಏರಿ ಕರ್ಪೂರ ಹಚ್ಚಿ ನೆರದಿದ್ದ ಹೆಂಗಳೆಯರ ಮನ ಗೆಲ್ಲುವುದು ವಾಡಿಕೆಯಾಗಿತ್ತು. ಕಾರ್ತಿಕ ಮಾಸ ಹಾಗೂ ಜಾತ್ರೆಯ ಸಂದರ್ಭದಲ್ಲಿ ಕರ್ಪೂರ ಹಚ್ಚುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ.
ಕಂಬದ ಮೇಲಿನ ದೀಪ ಹಲವಾರು ಮೈಲು ದೂರ ಕಾಣುತ್ತದೆ. ದೂರದ ಗ್ರಾಮಗಳ ಗ್ರಾಮಸ್ಥರು ದೂರದಿಂದಲೇ ಕರ್ಪೂದಾರತಿಯ ಬೆಳಕನ್ನು ನೋಡಿ ದೇವರಿಗೆ ಕೈ ಮುಗಿಯುತ್ತಾರೆ. ವಿಶೇಷವಾಗಿ ಬಬ್ಬೂರು ಹಾಗೂ ಸುತ್ತಮುತ್ತಲಿನ ಗ್ರಾಮದ ಮಹಿಳೆಯರು ಆರತಿ ಮಾಡಲು ಬರುತ್ತಾರೆ. ದೇವರಿಗೆ ಮೊದಲ ಮೂರು ಆರತಿ ಮಾಡಲು ಹರಾಜಿನ ಮೂಲಕ ಹಣ ಪಡೆಯುತ್ತಾರೆ.
ಈ ಬಾರಿ ಮೊದಲನೆ ಆರತಿಯನ್ನು 1.29 ಲಕ್ಷ ರೂ. ಗಳಿಗೆ ನಗರಸಭೆ ಸದಸ್ಯ ಈ. ಮಂಜುನಾಥ್, ಎರಡನೇ ಆರತಿಯನ್ನು 55 ಸಾವಿರ ರೂ. ಗಳಿಗೆ ಎಪಿಎಂಸಿ ಮಾಜಿ ಅಧ್ಯಕ್ಷ ಈರಲಿಂಗೇಗೌಡ ಹಾಗೂ ಮೂರನೇ ಆರತಿಯನ್ನು ಜಿಪಂ ಸದಸ್ಯ ಪಾಪಣ್ಣ 45 ಸಾವಿರ ರೂ.ಗಳಿಗೆ ಪಡೆದು ದೇವರಿಗೆ ಪೂಜೆ ಸಲ್ಲಿಸಿದರು. ನಂತರ ಸುಮಂಗಲಿಯರು ಸಾಲಿಗಿ ನಿಂತು ಆರತಿ ಬೆಳಗಿದರು.