Advertisement

ದೇಶದಲ್ಲೇ ಕರ್ನಾಟಕದ ನ್ಯಾಯಾಂಗ ವ್ಯವಸ್ಥೆ ಅತ್ಯುತ್ತಮ: ಬಸವರಾಜ ಬೊಮ್ಮಾಯಿ

01:28 PM Aug 21, 2022 | Team Udayavani |

ಹಾವೇರಿ: ದೇಶದಲ್ಲೇ ಕರ್ನಾಟಕದ ನ್ಯಾಯಾಂಗ ವ್ಯವಸ್ಥೆ ಅತ್ಯುತ್ತಮವಾಗಿದೆ. ನಮ್ಮ ಸರ್ಕಾರ 800 ಕೋಟಿ ರೂ. ಅನುದಾನವನ್ನು ನ್ಯಾಯಾಲಯಗಳ ಮೂಲಸೌಕರ್ಯಕ್ಕೆ ಮೀಸಲಿಟ್ಟಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಶಿಗ್ಗಾವಿ ಪಟ್ಟಣದಲ್ಲಿ ರವಿವಾರ ವಕೀಲರ ಸಂಘದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಬೇರೆ ಬೇರೆ ದೇಶಗಳಲ್ಲಿ ವ್ಯವಸ್ಥೆ ಬುಡಮೇಲಾಗಿರುವುದನ್ನು ಕಾಣುತ್ತೇವೆ. ಆದರೆ, ಭಾರತದಲ್ಲಿ ತತ್ವ, ಆದರ್ಶಗಳ ಬುನಾದಿ ಭದ್ರವಾಗಿರುವುದರಿಂದ ಪ್ರಜಾಪ್ರಭುತ್ವ ಜೀವಂತವಾಗಿದೆ. ಇಲ್ಲದಿದ್ದರೆ ಜನರಿಗೆ ನ್ಯಾಯ ಸಿಗುವುದಿರಲಿ, ಬದುಕಿಗೆ ಸಮಭಾವ ಸಿಗುವುದು ಕೂಡ ಕಷ್ಟವಾಗುತ್ತಿತ್ತು ಎಂದು ಹೇಳಿದರು.

ನಮ್ಮ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಬಲಿಷ್ಠ ಮತ್ತು ಉತ್ತಮವಾಗಿರುವ ಕಾರಣ ಪ್ರಜಾಪ್ರಭುತ್ವ ವ್ಯವಸ್ಥೆ ಜೀವಂತವಾಗಿದೆ. ಬಾಬಾ ಸಾಹೇಬ ಡಾ.ಬಿ.ಆರ್. ಅಂಬೇಡ್ಕರ್ ಅವರು ನ್ಯಾಯಾಂಗಕ್ಕೆ ವಿಶೇಷ ಸ್ಥಾನ, ಜವಾಬ್ದಾರಿ ಮತ್ತು ಅಧಿಕಾರ ನೀಡಿದ್ದಾರೆ. ನಾವು ಈಚೆಗೆ ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವ ಆಚರಿಸಿದ್ದೇವೆ. ಅದು 75ನೇ ಲೋಕತಂತ್ರ/ ಜನತಂತ್ರದ ಆಚರಣೆಯೂ ಆಗಿದೆ ಎಂದರು.

ನಮ್ಮಲ್ಲಿ ನ್ಯಾಯಾಂಗ ವ್ಯವಸ್ಥೆ ಉತ್ತಮವಾಗಿರುವ ಕಾರಣ ಬಂಡವಾಳ ಹೂಡಿಕೆಗೆ ಬಹುರಾಷ್ಟ್ರೀಯ ಕಂಪನಿಗಳು ಆಸಕ್ತಿ ತೋರುತ್ತಿವೆ. ನ್ಯಾಯಾಂಗ ಮತ್ತು ವಕೀಲರ ನಡುವಿನ‌ ವೃತ್ತಿ ಸಂಬಂಧ ಉತ್ತಮವಾಗಿದ್ದರೆ ಕಕ್ಷಿದಾರರಿಗೆ ಬೇಗ ನ್ಯಾಯ ಸಿಗುತ್ತದೆ ಎಂದರು.

Advertisement

ಇದನ್ನೂ ಓದಿ:ಕೆಲಸ ಅರಸಿ ಬಂದವಳನ್ನು ವೇಶ್ಯಾವಾಟಿಕೆಗೆ ದೂಡಿ,ಸಾಮೂಹಿಕ ಅತ್ಯಾಚಾರ: ಮಹಿಳೆ ಸೇರಿ ಮೂವರ ಬಂಧನ

ನನಗೂ ವಕೀಲ ವೃತ್ತಿಗೂ ಅವಿನಾಭಾವ ಸಂಬಂಧ ನ್ಯಾಯಾಂಗ ವ್ಯವಸ್ಥೆಯಲ್ಲಿ ನಿಖರತೆ ಇದ್ದಾಗ ಪ್ರಕರಣಗಳು ತ್ವರಿತ ಗತಿಯಲ್ಲಿ ವಿಲೇವಾರಿ ಆಗುತ್ತವೆ. ನನಗೂ ವಕೀಲ ವೃತ್ತಿಗೂ ಅವಿನಾಭಾವ ಸಂಬಂಧವಿದೆ. ನಮ್ಮ ತಂದೆ ಎಸ್.ಆರ್. ಬೊಮ್ಮಾಯಿ ವಕೀಲರಾಗಿದ್ದರು. ತಾಯಿ ತಂದೆ ಕೂಡ ವಕೀಲ ವೃತ್ತಿಯಲ್ಲಿದ್ದರು ಎಂದ ಅವರು, ಬಹು ದಿನಗಳ ಬೇಡಿಕೆಯಾಗಿದ್ದ ಶಿಗ್ಗಾವಿ ಮತ್ತು ಸವಣೂರು ತಾಲ್ಲೂಕಿನ ವಕೀಲರ ಸಂಘದ ಕಟ್ಟಡಗಳಿಗೆ ಅಡಿಗಲ್ಲು ಹಾಕಲಾಗಿದೆ ಎಂದು ಹೇಳಿದರು.

ಹೈಕೋರ್ಟ್ ನ್ಯಾಯಮೂರ್ತಿ ಸಚಿನ ಮುಗದುಮ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನ್ಯಾಯಾಧೀಶರಾದ ಯಾದವ ವನಮಾಲ ಆನಂದರಾವ್, ಕೃಷಿ ಸಚಿವ ಬಿ.ಸಿ.ಪಾಟೀಲ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಶಿಗ್ಗಾವಿ ವಕೀಲರ ಸಂಘದ ಅಧ್ಯಕ್ಷ ಎಂ.ಎಚ್.ಬೆಂಡಿಗೇರಿ ಹಾಗೂ ವಕೀಲರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next