Advertisement

ಬಿಹಾರ ರಾಜ್ಯಸಭಾ ಚುನಾವಣೆ ರೇಸ್‌ನಲ್ಲಿ ಕನ್ನಡಿಗ; ಕುಂದಾಪುರದ ಅನಿಲ್‌ ಹೆಗ್ಡೆ JDU ಅಭ್ಯರ್ಥಿ

10:21 AM May 17, 2022 | Team Udayavani |

ಕುಂದಾಪುರ: ರಾಜ್ಯಸಭೆ ಉಪಚುನಾವಣೆಗೆ ಜನತಾ ದಳ ಯುನೈಟೆಡ್‌ (ಜೆಡಿಯು)ನಿಂದ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಕುಂದಾಪುರದ ಅನಿಲ್‌ ಹೆಗ್ಡೆ ಅವರನ್ನು ಕಣಕ್ಕಿಳಿಸಲಾಗಿದೆ. ಡಾ| ಮಹೇಂದ್ರ ಪ್ರಸಾದ್‌ ಅವರ ನಿಧನದ ನಂತರ ತೆರವಾದ ಸ್ಥಾನಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಲಾಲನ್‌ ಸಿಂಗ್‌ ಅನಿಲ್‌ ಹೆಗ್ಡೆ ಅವರ ಹೆಸರು ಘೋಷಿಸಿದ್ದು, ಮೇ 30ರಂದು ಚುನಾವಣಾ ಆಯೋಗ ಅಧಿಕೃತವಾಗಿ ಘೋಷಿಸಲಿದೆ. ಇವರ ಅವಧಿ 2024ರ ವರೆಗೆ ಇರಲಿದೆ.

Advertisement

ಜಾರ್ಜ್‌ ಅನುಯಾಯಿ: 38 ವರ್ಷಗಳ ಕಾಲ ಜಾರ್ಜ್‌ ಫೆರ್ನಾಂಡಿಸ್‌ ಅವರ ಕಾರ್ಯದರ್ಶಿಯಾಗಿದ್ದ ಅನಿಲ್‌ ಹೆಗ್ಡೆ ಕರ್ನಾಟಕದಲ್ಲಿ ಜನತಾದಳದಲ್ಲಿ ರಾಮಕೃಷ್ಣ ಹೆಗಡೆ, ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರೀಕರಾಗಿ ಪಕ್ಷದ ಸಂಘಟನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಜಾರ್ಜ್‌ ಜತೆಗೆ ವಿವಿಧ ಹೋರಾಟಗಳಲ್ಲಿ ತೊಡಗಿಸಿಕೊಂಡು ಉತ್ತರದ ಕಡೆ ಪಯಣ ಬೆಳೆಸಿದರು.

ಜಾರ್ಜ್‌ ಅವರ ಕಾರ್ಯದರ್ಶಿಯಾಗಿ ಅವರು ಬದುಕಿರುವವರೆಗೂ ನಿಷ್ಠರಾಗಿದ್ದರು. ಜಾರ್ಜ್‌ ಪಕ್ಷದ ಅಧ್ಯಕ್ಷರಾಗಿದ್ದಾಗ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಅನಿಲ್‌ ರಾ.ಪ್ರ. ಕಾರ್ಯದರ್ಶಿಯಾಗಿದ್ದರು. ಶರದ್‌ ಯಾದವ್‌ ಮತ್ತು ನಿತೀಶ್‌ ಕುಮಾರ್‌ ನಡುವಿನ ಸಂಬಂಧ ಹಳಸಿದಾಗ ಅನಿಲ್‌ ಹೆಗ್ಡೆ ಪಕ್ಷ ನಿಷ್ಠರಾಗಿ ಉಳಿದರು. ಕಳೆದ 12 ವರ್ಷಗಳಿಂದ ನಿತೀಶ್‌ ಕುಮಾರ್‌ ಅವರ ಜತೆಗೇ ಇದ್ದು ಜೆಡಿಯು ಬಿಹಾರ ರಾಜ್ಯ ಉಪಾಧ್ಯಕ್ಷರಾಗಿ ಈಗ ಪಕ್ಷದ ರಾಷ್ಟ್ರೀಯ ಚುನಾವಣಾ ಅಧಿಕಾರಿಯಾಗಿದ್ದಾರೆ.

ಇದನ್ನೂ ಓದಿ:ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿದ್ದು ಶಿವಲಿಂಗವಲ್ಲ; ಅದು ಫೌಂಟನ್: ಮಸೀದಿಯ ಆಡಳಿತ ಮಂಡಳಿ ವಾದ

ಪಕ್ಷ ಸಂಘಟನೆ ಮೇಲೆ ಬಲವಾದ ಹಿಡಿತ ಹೊಂದಿ ಚುನಾವಣಾ ಪ್ರಕ್ರಿಯೆಗಳಲ್ಲಿ ಪರಿಣತರಾಗಿದ್ದಾರೆ. ಪಕ್ಷದ ಎಲ್ಲ ದಾಖಲೆಗಳನ್ನು ಕ್ರಮಬದ್ಧವಾಗಿ ಇಡುವ ಜವಾಬ್ದಾರಿ ಅವರ ಮೇಲಿದೆ. ದಕ್ಷಿಣದವರಾದರೂ ಬಿಹಾರ ರಾಜಕೀಯದಲ್ಲಿ ಹಿಡಿತ ಇಟ್ಟುಕೊಂಡಿದ್ದಾರೆ.

Advertisement

ಕುಂದಾಪುರದವರು: 1960ರ ಮೇ 20ರಂದು ಕುಂದಾಪುರದ ಸಳ್ವಾಡಿಯಲ್ಲಿ ವಕೀಲ ದಿ| ಹಾಲಾಡಿ ನಾರಾಯಣ ಹೆಗ್ಡೆ ಹಾಗೂ ಮಹಿಳಾ ಒಕ್ಕೂಟದ ಅಧ್ಯಕ್ಷೆಯಾಗಿದ್ದ ಹೇಮಾವತಿ ಎನ್‌. ಹೆಗ್ಡೆ ದಂಪತಿಯ ಪುತ್ರರಾಗಿ ಅನಿಲ್‌ ಹೆಗ್ಡೆ ಜನಿಸಿದರು. ಅವರು ಪ್ರಸ್ತುತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಜಯಪ್ರಕಾಶ್‌ ಹೆಗ್ಡೆ ಅವರ ಚಿಕ್ಕಪ್ಪನ ಮಗ. ಬಿದ್ಕಲ್‌ ಕಟ್ಟೆಯಲ್ಲಿ ಪ್ರಾರಂಭಿಕ ವಿದ್ಯಾಭ್ಯಾಸ, ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ಮಾಡಿದ್ದಾರೆ. ಪುತ್ರನ ಅನಿರೀಕ್ಷಿತ ಆಯ್ಕೆಯಿಂದ ಖುಷಿಯಾಗಿದೆ ಎಂದು ತಾಯಿ ಹೇಮಾವತಿ ಎನ್‌. ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.

ಸರಳ ಜೀವನ: ಅನಿಲ್‌ ಹೆಗ್ಡೆ ದಿಲ್ಲಿಯ ಜೆಡಿಯು ಕೇಂದ್ರ ಕಚೇರಿಯಲ್ಲಿ ವಾಸಿಸುತ್ತಿದ್ದರು. 12 ವರ್ಷಗಳಿಂದ ಪಾಟ್ನಾ ಜೆಡಿಯು ಕಚೇರಿಯಲ್ಲಿ ವಾಸಿಸುತ್ತಿದ್ದಾರೆ. ಸ್ವಂತ ಮನೆಯೂ ಇಲ್ಲದ, ಮದುವೆಯೂ ಆಗದ ಅನಿಲ್‌ ಪಕ್ಷಕ್ಕಾಗಿಯೇ ಜೀವನ ಸವೆಸುತ್ತಿದ್ದಾರೆ. ಈ ಪ್ರಾಮಾಣಿಕತನ, ಸರಳತೆಯನ್ನು ಗಮನದಲ್ಲಿ ಇರಿಸಿಕೊಂಡು ಸಿಎಂ ನಿತೀಶ್‌ ಕುಮಾರ್‌ ರಾಜ್ಯಸಭಾ ಸದಸ್ಯರಾಗಿ ಕಣಕ್ಕೆ ಇಳಿಸಲು ನಿರ್ಧರಿಸಿದ್ದಾರೆ.

ಖಚಿತ ಗೆಲುವು: ಬಿಜೆಪಿಯ ಮಿತ್ರ ಪಕ್ಷವಾದ ಜೆಡಿ (ಯು) ಉಪಚುನಾವಣೆಯಲ್ಲಿ ಸ್ಥಾನ ಪಡೆಯುವುದು ಖಚಿತ. ಆಸ್ಕರ್‌ ಫೆರ್ನಾಂಡಿಸ್‌ ಬಳಿಕ ರಾಜ್ಯಸಭಾ ಸದಸ್ಯತ್ವ ಮತ್ತೂಮ್ಮೆ ಉಡುಪಿಗೆ ಒಲಿಯಲಿದೆ. ಅನಿಲ್‌ ಹೆಗ್ಡೆಯವರಿಗೆ ಟಿಕೆಟ್‌ ನೀಡಿರುವುದು ಪಕ್ಷದವರಿಗೂ ಆಶ್ಚರ್ಯ ತಂದಿದೆ. ಇದು ಸಂಘಟನೆ ಮತ್ತು ಪಕ್ಷಕ್ಕಾಗಿ ಮೌನವಾಗಿ ದುಡಿಯುತ್ತಿರುವ ವ್ಯಕ್ತಿಗೆ ಸಿಕ್ಕ ಪ್ರತಿಫಲವಾಗಿದೆ ಎನ್ನುತ್ತಾರೆ.

ಪಕ್ಷ ನಿಷ್ಠೆಯಿಂದ ಕೆಲಸ ಮಾಡಿದ್ದನ್ನು ಗುರುತಿಸಿದೆ. ಅನಿರೀಕ್ಷಿತವೂ ಹೌದು. ಮುಖ್ಯಮಂತ್ರಿಗಳು ಸೂಚಿಸಿದಾಗಲೇ ಗಮನಕ್ಕೆ ಬಂದದ್ದು. ಪಕ್ಷ ಸೂಚಿಸಿದ ಕೆಲಸ ಶ್ರದ್ಧೆಯಿಂದ ಮಾಡುತ್ತೇನೆ. ಕಳೆದ ತಿಂಗಳು ಕುಂದಾಪುರಕ್ಕೆ ಬಂದಿದ್ದು, ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಮತ್ತೆ ಆಗಮಿಸುವೆ.;- ಅನಿಲ್‌ ಹೆಗ್ಡೆ, ಜೆಡಿಯು ಅಭ್ಯರ್ಥಿ

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next