ಬೆಂಗಳೂರು: ಕೋವಿಡ್ ಸೋಂಕು ನಿಯಂತ್ರಣ, ವಾರಾಂತ್ಯ ಕರ್ಫ್ಯೂ ಮುಂದುವರೆಸುವ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರು ಭಿನ್ನ ಭಿನ್ನವಾಗಿ ಗೊಂದಲಕಾರಿ ಹೇಳಿಕೆಗಳನ್ನು ನೀಡುತ್ತಿದ್ದು, ಇದರಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಮತ್ತು ಸರ್ಕಾರದ ಕಾರ್ಯವೈಖರಿ ಬಗ್ಗೆ ವಿಶ್ವಾಸವಿಲ್ಲ ಎಂಬುದನ್ನು ಬಿಜೆಪಿ ನಾಯಕರೇ ಬಹಿರಂಗವಾಗಿ ಹೇಳುತ್ತಿದ್ದಾರೆ. ಇದು ಅರಾಜಕತೆಯ ಆಡಳಿತ ವೈಖರಿಗೆ ನಿದರ್ಶನವಾಗಿದೆ. ಸರ್ಕಾರವನ್ನು ಹಾದಿ ಬೀದಿಯಲ್ಲಿ ಜನತೆ ವ್ಯಂಗ್ಯಮಾಡುವ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾರಾಂತ್ಯ ಕರ್ಫ‍್ಯೂ ರದ್ದುಗೊಳಿಸುವಂತೆ ಒತ್ತಾಯಿಸಿದ್ದು, ಇದಕ್ಕೆ ಪೂರಕವಾಗಿ ಸಂಸದ ಪ್ರತಾಪ್ ಸಿಂಹ ಇದೀಗ ಜನರ ಸಮಸ್ಯೆಗಳ ಬಗ್ಗೆ ಜ್ಙಾನೋದಯವಾದವರಂತೆ ಹುಚ್ಚೆದ್ದು ಕುಣಿಯುತ್ತಿದ್ದಾರೆ. ವೀರಾವೇಶದಿಂದ ಸರ್ಕಾರಕ್ಕೆ ಬುದ್ದಿ ಮಾತು ಹೇಳಿ ತಮ್ಮ ದ್ವಿಮುಖ ನೀತಿಯನ್ನು ಬಹಿರಂಗವಾಗಿ ತೋರ್ಪಡಿಸಿಕೊಂಡಿದ್ದಾರೆ. ಸಚಿವರಾದ ಆರ್. ಅಶೋಕ್, ಕೆ. ಸುಧಾಕರ್ ಒಂದೊಂದು ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದು, ಇದರಿಂದ ಜನತೆ ಗೊಂದಲಕ್ಕೆ ಒಳಗಾಗಿದ್ದಾರೆ ಎಂದು ರಕ್ಷಾ ರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ರಕ್ಷಾ ರಾಮಯ್ಯ, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳಿಕೆ ನೀಡುತ್ತಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಕ್ಕಾಪಾಲಾಗಿದ್ದಾರೆ. ಇದರಿಂದ ಸರ್ಕಾರದ ನಾಯಕತ್ವಕ್ಕೆ ನೆಲೆಯೂ ಇಲ್ಲ, ಬೆಲೆಯೂ ಎಂಬುದು ಸಾಬೀತಾಗಿದೆ. ಮೇಕೆ ದಾಟು ಪಾದಯಾತ್ರೆಗೆ ತಡೆಯೊಡ್ಡುವ ಏಕೈಕ ಉದ್ದೇಶದಿಂದ ವಾರಾಂತ್ಯದ ಕರ್ಫ್ಯೂ, ನಿಷೇಧಾಜ್ಞೆ ಜಾರಿ ಮಾಡಿರುವುದು ಬಿಜೆಪಿ ನಾಯಕರ ಹೇಳಿಕೆಗಳಿಂದಲೇ ಸ್ಪಷ್ಟವಾಗಿದೆ. ಅಂಗೈ ಹುಣ‍್ಣಿಗೆ ಕನ್ನಡಿ ಬೇಕಾಗಿಲ್ಲ ಅಲ್ಲವೇ ಎಂದು ಮುಖ್ಯಮಂತ್ರಿ ಅವರನ್ನು ಕೆಪಿವೈಸಿಸಿ ಅಧ್ಯಕ್ಷರು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ಕ್ರಮಗಳಿಂದಾಗಿ ರಾಜ್ಯದಲ್ಲಿ ಸುಮಾರು 3 ಲಕ್ಷ ಸಣ‍್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚಲ್ಪಟ್ಟಿವೆ. ಪೀಣ್ಯಾ ಕೈಗಾರಿಕಾ ವಲಯದಲ್ಲಿ ಮೂರು ಸಾವಿರಕ್ಕೂ ಅಧಿಕ ಕೈಗಾರಿಕೆಗಳು ಬಂದ್ ಆಗಿವೆ. ಕೈಗಾರಿಕೆಗಳಿಗೆ ಪೂರೈಸುವ ಕಬ್ಬಿಣ ಮತ್ತಿತರ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಲಕ್ಷಾಂತರ ಮಂದಿ ಮನೆಗಳನ್ನು ಕಟ್ಟಲಾಗದೇ ಅರ್ಧಕ್ಕೆ ನಿಲ್ಲಿಸಿದ್ದಾರೆ. ಇವುಗಳ ಬೆಲೆ ನಿಯಂತ್ರಣಕ್ಕೆ ಯಾವುದೇ ಸರ್ಕಾರಗಳು ಈವರೆಗೆ ಒಂದೇ ಒಂದು ಸಭೆ ನಡೆಸಿಲ್ಲ. ಇದು ಇವರ ಜನಪರ ಆಡಳಿತ ಎಂದು ರಕ್ಷಾ ರಾಮಯ್ಯ ವ್ಯಂಗ್ಯವಾಡಿದ್ದಾರೆ.
ಇಷ್ಟೆಲ್ಲಾ ಅನಾಹುತ ಆದ ಮೇಲೆ ಇದೀಗ ಬಿಜೆಪಿ ನಾಯಕರಿಗೆ “ಜನರ ಜೀವ ಮತ್ತು ಜೀವನ ರಕ್ಷಿಸುವ” ಕುರಿತು ಕಾಳಜಿ ಬಂದಿರುವುದನ್ನು ನಿಜಕ್ಕೂ ಮೆಚ್ಚಬೇಕು. ಇನ್ನಾದರೂ ವೀಕ್ ಎಂಡ್ ಕರ್ಫ್ಯೂ, ಮತ್ತಿತರ ಅವೈಜ್ಞಾನಿಕ ಕ್ರಮಗಳ ಮೂಲಕ ಜನರನ್ನು ಶೋಷಣೆ ಮಾಡುವುದನ್ನು ಕೈಬಿಟ್ಟು ವೈಜ್ಞಾನಿಕ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಿ. ಜನರ ಆರೋಗ್ಯ ಮತ್ತು ಬದುಕಿನ ವಿಚಾರದಲ್ಲಿ ಚೆಲ್ಲಾಟ ಆಡುವುದನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.