Advertisement
ಬಹಳ ಹಿಂದಿನಿಂದಲೂ ಗಂಡುಕಲೆ ಎಂದೇ ಪ್ರಚಲಿತದಲ್ಲಿದ್ದರೂ ಹೆಣ್ಣು ಕೂಡ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಬಲ್ಲಳು ಎಂದು ಇತ್ತೀಚೆಗೆ ಅನೇಕ ಮಹಿಳೆಯರು ಸಾಬೀತು ಪಡಿಸಿದ್ದಾರೆ. ಆದರೆ 1998ರ ಸುಮಾರಿನ ಆ ಕಾಲದಲ್ಲಿ ಹೆಣ್ಣು ಗೆಜ್ಜೆ ಕಟ್ಟಿ ಕುಣಿಯುವುದು ಸ್ವಲ್ಪ ಕಷ್ಟದ ಪರಿಸ್ಥಿಯೇ ಇತ್ತು. ಈ ಸವಾಲುಗಳ ಮಧ್ಯದಲ್ಲೇ ಬೆಂಗಳೂರಿನಂತಹ ಮಹಾನಗರದಲ್ಲಿ ಮಹಿಳೆಯರನ್ನು ಒಗ್ಗೂಡಿಸಿ, ತರಬೇತಿ ನೀಡಿ ಮಹಿಳೆಯರು ಯಕ್ಷಗಾನವನ್ನು ಮಾಡಬಲ್ಲರು ಎಂದು ತೋರಿಸಿ ಸಾಧಿಸಿದವರು ಶ್ರೀಮತಿ ಗೌರಿ ಕೆ.
Related Articles
Advertisement
ಹೆಜ್ಜೆ-ಗೆಜ್ಜೆಗಳ ಸಮ್ಮಿಲನ, ಗಾನ-ನಾಟ್ಯಗಳ ಸಂಚಲನ, ವೇಷಭೂಷಣಗಳ ಸಂಕಲನ, ಚಂಡೆ-ಮದ್ದಲೆಗಳ ಹೊಮ್ಮಿಲನದ ಈ ಯಕ್ಷಗಾನ ನಮ್ಮನ್ನು ಸೆಳೆಯುವಂತೆ ಮಾಡುತ್ತದೆ. ಪುರುಷರಿಗಷ್ಟೇ ಈ ಯಕ್ಷಗಾನ ಒಲಿಯುವುದು ಎನ್ನುವವರ ಎದುರು ಪುಂಡುವೇಷದಿಂದ ಹಿಡಿದು ರಾಜ ಗಾಂಭೀರ್ಯವಿರುವ ಎಲ್ಲಾ ರೀತಿ ಪಾತ್ರಗಳನ್ನು ಮಾಡಿ ತೋರಿಸಿದವರು. ನಾಟ್ಯದಿಂದ ಹಿಡಿದು ಸಂಭಾಷಣೆಯಲ್ಲೂ ಹೊಸ ಸಂಚಲನವನ್ನು ಮೂಡಿಸಿ, ಯಕ್ಷಪ್ರೇಮಿಗಳನ್ನು ಆಕರ್ಷಿಸಿದವರು.
ರಾಮಾಯಣ, ಮಹಾಭಾರತ, ಪುರಾಣಗಳ ಪ್ರಸಂಗಗಳನ್ನು ಪ್ರದರ್ಶಿಸಿದ್ದಲ್ಲದೇ, ಸಾಮಾಜಿಕ ಸಂದೇಶಗಳನ್ನೊಳಗೊಂಡ ಅನೇಕ ಪ್ರಸಂಗಗಳನ್ನು ರಚಿಸಿ, ಪ್ರದರ್ಶಿಸಿ ಉತ್ತಮ ಪ್ರತಿಕ್ರಿಯೆ ಪಡೆದಿದೆ ಈ ತಂಡ. ಕನ್ನಡ ಭಾಷೆಯಲ್ಲೇ ನಡೆಯುವ ಯಕ್ಷಗಾನವನ್ನು ಕನ್ನಡೇತರರು ನೋಡಲಿ ಎಂದು ಹಿಂದಿ, ಇಂಗ್ಲೀಷ್ ಭಾಷೆಯಲ್ಲೂ ಯಕ್ಷಗಾನವನ್ನು ಪ್ರದರ್ಶಿಸಿದ್ದಾರೆ. ಕೋಟ ಶಿವರಾಮ ಕಾರಂತರ ‘ಯಕ್ಷಗಾನ ಬ್ಯಾಲೆ’ ಎಂಬ ವಿಶೇಷ ಪ್ರಯೋಗವನ್ನು ಪ್ರದರ್ಶನ ರೂಪದಲ್ಲಿ ನೀಡಿ, ಯಕ್ಷ ಪ್ರೇಮಿಗಳಿಂದ ಭೇಷ್ ಎನಿಸಿಕೊಂಡಿದ್ದಾರೆ. ಯುವ ಪೀಳಿಗೆಗೆ ಯಕ್ಷಗಾನದ ಪರಿಚಯವಾಗಲಿ ಎಂಬ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಪ್ರದರ್ಶನ ನೀಡಿ, ಕಲೆಯನ್ನು ಬೆಳೆಸುವಲ್ಲಿ ಸಾಕ್ಷಿಯಾಗಿದ್ದಾರೆ.
ಇಲ್ಲಿ ಯಾರೂ ವೃತ್ತಿಪರ ಕಲಾವಿದರಿಲ್ಲ, ಎಲ್ಲರೂ ಕಲೆಯ ಮೇಲಿನ ಪ್ರೀತಿಯಿಂದ ಯಕ್ಷಗಾನವನ್ನು ಅಪ್ಪಿಕೊಂಡವರೇ ಇರೋದು. ತಮ್ಮ ವೃತ್ತಿಯಲ್ಲಿ ಬೇರೆ ಬೇರೆ ಸ್ಥಾನವನ್ನು ಹೊಂದಿದವರು, ಯಕ್ಷಗಾನದಲ್ಲೂ ತಮಗೆ ಕೊಟ್ಟ ಪಾತ್ರಕ್ಕೆ ಉತ್ತಮ ಸ್ಥಾನ ಕೊಟ್ಟು ಪಾತ್ರಕ್ಕೆ ಜೀವ ತುಂಬುವ ಮಹಿಳಾ ಮಣಿಗಳು ಅದೆಷ್ಟೋ ಇಲ್ಲಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ಕಡಲಿನಾಚೆಗೂ ಈ ಕರುನಾಡ ಕಲೆಯನ್ನು ಕೊಂಡೊಯ್ದಿದ್ದಾರೆ.
ಚೀನಾದ ನಂಜಿಂಗ್ ಸ್ಟೇಡಿಯಂ, ಅಮೇರಿಕಾದ ಅಕ್ಕ ಸಮ್ಮೇಳನ, ಲಾಸ್ ಎಂಜಲೀಸ್, ಜರ್ಮನಿಯ ಬರ್ಲಿನ್, ದುಬೈನ್ ನ ಇಂಡಿಯನ್ ಎಕ್ಸ್ಪೋ-2020 ಸೇರಿದಂತೆ, ಭಾರತದ ನಾನಾ ಭಾಗಗಳಲ್ಲೂ ಕಾರ್ಯಕ್ರಮ ನೀಡಿದ್ದಾರೆ. ಚಂಡೀಗಡ, ತಂಜಾವೂರು, ಒಡಿಸ್ಸಾ, ಚೆನೈ, ದೆಹಲಿ, ಶ್ರವಣಬೆಳಗೊಳ,ಮಂಡಿ, ಬೀದರ್, ಹಂಪಿ ಉತ್ಸವ, ಜಾನಪದ ಜಾತ್ರೆ, ಬೆಂಗಳೂರು ಹಬ್ಬ, ಕಿತ್ತೂರು ರಾಣಿ ಚೆನ್ನಮ್ಮ ಉತ್ಸವ, ಮೈಸೂರು ಉತ್ಸವ, ಅಖಿಲ ಕರ್ನಾಟಕ ಜೈನ ಮಹಿಳಾ ಉತ್ಸವ, ಸಹ್ಯಾದ್ರಿ ಉತ್ಸವ, ಸುವರ್ಣ ಕರ್ನಾಟಕ ಉತ್ಸವ, ಮಹಿಳಾ ಯಕ್ಷಗಾನ ಉತ್ಸವ, ಮೈಸೂರು ದಸರಾ ಹೀಗೆ ಬರೆಯುತ್ತಾ ಹೋದರೆ ಇವರು ನೀಡಿದ ಕಾರ್ಯಕ್ರಮದ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಸಾವಿರಕ್ಕೂ ಅಧಿಕ ಕಾರ್ಯಕ್ರಮ. ಅದು ಬೇರೆ ಬೇರೆ ರಾಜ್ಯ ಹಾಗೂ ದೇಶದಲ್ಲಿ ಎನ್ನುವುದು ಇವರ ಸಾಧನೆಯ ಮಟ್ಟವನ್ನು ಎತ್ತಿ ತೋರಿಸುತ್ತದೆ. ಇದಲ್ಲದೇ ಆಕಾಶವಾಣಿ, ದೂರದರ್ಶನದಲ್ಲೂ ಇವರ ಕಾರ್ಯಕ್ರಮ ಪ್ರಸಾರವಾಗಿ ವೀಕ್ಷಕರ ಮೆಚ್ಚುಗೆಯ ಮಾತಿಗೆ ಸಾಕ್ಷಿಯಾಗಿದೆ. ಗೌರಿ ಇವರ ಸಾಧನೆಗೆ ಸಂದ ಪ್ರಶಸ್ತಿ-ಪುರಸ್ಕಾರಗಳ ಪಟ್ಟಿ ಕೂಡ ಹೆಮ್ಮರವಾಗಿ ಬೆಳೆಯುತ್ತಲೇ ಇದೆ.
ಪಾರಂಪರಿಕ ರಂಗ ಕಲೆಗಳ ಅನನ್ಯತೆ, ನೈಜತೆ, ಶ್ರೇಷ್ಠತೆಗೆ ಯಾವುದೇ ಕುತ್ತು ಬಾರದಂತೆ ಪಾರಂಪರಿಕ ಪ್ರಸಂಗಕ್ಕೆ ಅನುಗುಣವಾದ ವೇಷಭೂಷಣಗಳನ್ನು ರಂಗದಲ್ಲಿ ವಿಜೃಂಭಿಸುವ ಚಾಕಚಕ್ಯತೆಯನ್ನು ಈ ಮಹಿಳಾ ತಂಡ ಹೊಂದಿದೆ. ಒಟ್ಟಿನಲ್ಲಿ ಮಹಿಳೆಯರು ಮನಸ್ಸು ಮಾಡಿದರೆ ಏನೂ ಕೂಡ ಸಾಧಿಸಬಹುದೆಂದು ತೋರಿಸುವಲ್ಲಿ ಕರ್ನಾಟಕ ಮಹಿಳಾ ಯಕ್ಷಗಾನ ತಂಡ ಕೂಡ ಸಾಕ್ಷಿಯಾಗಿದೆ. ಯಕ್ಷಗಾನಂ ಗೆಲ್ಗೆ ಎಂದು ಹೇಳುವುದು ಮಾತ್ರವಲ್ಲ, ಯಕ್ಷಗಾನ ಗಲ್ಲಿ-ಗಲ್ಲಿಗೆ ಪ್ರದರ್ಶನವಾದಾಗಲೇ ಈ ಕಲೆ ಇನ್ನಷ್ಟು ಬೆಳೆಯಲು ಸಾಧ್ಯವಾಗುತ್ತದೆ. ಕಲೆ ಬೆಳೆಯಬೇಕಾದರೆ ಕಲಾವಿದರು ಬೆಳೆಯಬೇಕು, ಕಲಾವಿದರು ಬೆಳೆಯಬೇಕಾದರೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿ ಅವರ ಪ್ರಶಂಸೆಯಿಂದ ಕಲಾವಿದ ಬೆಳೆಯಲು ಸಾಧ್ಯ. ಇಂತಹ ಕಲಾವಿದರ ಮೇಲೆ ನಿಮ್ಮೆಲ್ಲರ ಸಹಕಾರ, ಹಾರೈಕೆ ಸದಾ ಇರಲಿ..
ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಮಹಿಳೆಯರ ಸ್ಥಾನಮಾನ ಇಂದು ಪುರುಷರಿಗೆ ಸರಿ ಸಮಾನವಾಗಿದೆ. ಹಾಗಾಗಿ ಈಗೀನ ಸ್ಮರ್ಧಾತ್ಮಕ ಯುಗದಲ್ಲೀ ಬರೀ ಕೆಲಸದ ಒತ್ತಡ ಹಾಗೂ ಮನೆಯ ಜವಾಬ್ದಾರಿಗಳ ನಡುವೆ ಕುಗ್ಗದೇ, ಇಂತಹ ಕಲೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಮಹಿಳೆ ಇನ್ನಷ್ಟು ಬೆಳೆಯಬಹುದು. ಸ್ತ್ರೀ ಅಬಲೆ ಅಲ್ಲ, ಸಬಲೆ ಎನ್ನುವ ಸಾಲಿಗೆ ಅರ್ಥ ತುಂಬಲು ಸಾಧ್ಯ…
~ಲೇಖನ : ಚೈತ್ರ ರಾಜೇಶ್ ಕೋಟ