Advertisement

Tripura ಸವಾಲು ಗೆದ್ದ ಕರ್ನಾಟಕ : 29 ರನ್‌ ಗೆಲುವು ,’ಸಿ’ ವಿಭಾಗದಲ್ಲಿ ಅಗ್ರಸ್ಥಾನ

11:07 PM Jan 29, 2024 | Team Udayavani |

ಅಗರ್ತಲಾ: ಭಾರೀ ಹೋರಾಟ ನೀಡಿದ ಆತಿಥೇಯ ತ್ರಿಪುರವನ್ನು 29 ರನ್ನುಗಳಿಂದ ಮಣಿಸಿದ ಕರ್ನಾಟಕ, “ಸಿ’ ವಿಭಾಗದ ರಣಜಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

Advertisement

ಗೆಲುವಿಗೆ 193 ರನ್‌ ಗುರಿ ಪಡೆದಿದ್ದ ತ್ರಿಪುರ, 3ನೇ ದಿನದಾಟದ ಅಂತ್ಯಕ್ಕೆ 3ಕ್ಕೆ 59 ರನ್‌ ಗಳಿಸಿ ಹೋರಾಟವೊಂದನ್ನು ಜಾರಿಯಲ್ಲಿರಿಸಿತ್ತು. ಆದರೆ ಸೋಮವಾರ 163ಕ್ಕೆ ಆಲೌಟ್‌ ಆಯಿತು.

ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡು ನಿಂತಿದ್ದ ಸುದೀಪ್‌ ಚಟರ್ಜಿ ಕರ್ನಾಟಕಕ್ಕೆ ಕಂಟಕವಾಗುವ ಎಲ್ಲ ಸಾಧ್ಯತೆ ಇತ್ತು. ಆದರೆ ಅವರಿಗೆ ಇನ್ನೊಂದು ತುದಿಯಲ್ಲಿ ಯಾರಿಂದಲೂ ಸೂಕ್ತ ಬೆಂಬಲ ಸಿಗಲಿಲ್ಲ. ಸುದೀಪ್‌ ಪಂದ್ಯದಲ್ಲೇ ಸರ್ವಾಧಿಕ 82 ರನ್‌ ಮಾಡಿದರು (144 ಎಸೆತ, 10 ಬೌಂಡರಿ). ಇವರು ಅಂತಿಮ ವಿಕೆಟ್‌ ರೂಪದಲ್ಲಿ ಪೆವಿಲಿಯನ್‌ ಸೇರಿಕೊಳ್ಳುವುದರೊಂದಿಗೆ ಕರ್ನಾಟಕದ ಗೆಲುವು ಮೊಳಗಲ್ಪಟ್ಟಿತು.

ಮೂಲತಃ ಕರ್ನಾಟಕದವರಾದ ಗಣೇಶ್‌ ಸತೀಶ್‌ ಮತ್ತು ವೃದ್ಧಿಮಾನ್‌ ಸಾಹಾ ಮೇಲೆ ತ್ರಿಪುರ ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿತ್ತು. ಆದರೆ ಗಣೇಶ್‌ ಸತೀಶ್‌ 22 ರನ್ನಿಗೆ ಆಟ ಮುಗಿಸಿದರೆ, ಸಾಹಾ ಖಾತೆಯನ್ನೇ ತೆರೆಯಲಿಲ್ಲ.
ಕರ್ನಾಟಕದ ಪರ ವಿದ್ವತ್‌ ಕಾವೇರಪ್ಪ 44ಕ್ಕೆ 4 ವಿಕೆಟ್‌ ಉರುಳಿಸಿ ಹೆಚ್ಚಿನ ಯಶಸ್ಸು ಸಾಧಿಸಿದರು. ವಿಜಯ್‌ಕುಮಾರ್‌ ವೈಶಾಖ್‌ 3 ವಿಕೆಟ್‌ ಕೆಡವಿದರು.

ಒಟ್ಟು 72 ರನ್‌ ಹಾಗೂ 5 ವಿಕೆಟ್‌ ಸಾಧನೆಯೊಂದಿಗೆ ಆಲ್‌ರೌಂಡ್‌ ಪ್ರದರ್ಶನವಿತ್ತ ವಿಜಯ್‌ಕುಮಾರ್‌ ವೈಶಾಖ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Advertisement

ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ರೈಲ್ವೇಸ್‌ ವಿರುದ್ಧ ಆಡಲಿದೆ. ಈ ಮುಖಾಮುಖೀ ಫೆ. 2ರಂದು ಸೂರತ್‌ನಲ್ಲಿ ಆರಂಭವಾಗಲಿದೆ.

2 ಜಯ, 15 ಅಂಕ
ಇದು 4 ಪಂದ್ಯಗಳಲ್ಲಿ ಕರ್ನಾಟಕ ಸಾಧಿಸಿದ 2ನೇ ಗೆಲುವು. ಗುಜರಾತ್‌ ವಿರುದ್ಧ ಎಡವಿದರೆ, ಗೋವಾ ವಿರುದ್ಧ ಡ್ರಾ ಸಾಧಿಸಿತ್ತು. ಇದರೊಂದಿಗೆ ಕರ್ನಾಟಕದ ಅಂಕ 15ಕ್ಕೆ ಏರಿದೆ. ತಮಿಳುನಾಡು ಕೂಡ 15 ಅಂಕ ಹೊಂದಿದೆ. ಆದರೆ ರನ್‌ರೇಟ್‌ನಲ್ಲಿ ಮುಂದಿರುವ ಕರ್ನಾಟಕ “ಸಿ’ ವಿಭಾಗದ ಅಗ್ರಸ್ಥಾನದ ಗೌರವ ಸಂಪಾದಿಸಿದೆ (1.236). ತಮಿಳುನಾಡು ದ್ವಿತೀಯ ಸ್ಥಾನದಲ್ಲಿದೆ (0.768).

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-241 ಮತ್ತು 151. ತ್ರಿಪುರ-200 ಮತ್ತು 163 (ಸುದೀಪ್‌ ಚಟರ್ಜಿ 82, ಗಣೇಶ್‌ ಸತೀಶ್‌ 22, ಶ್ರೀದಾಮ್‌ ಪಾಲ್‌ 21, ವಿದ್ವತ್‌ ಕಾವೇರಪ್ಪ 44ಕ್ಕೆ 4, ವಿಜಯ್‌ಕುಮಾರ್‌ ವೈಶಾಖ್‌ 62ಕ್ಕೆ 3).
ಪಂದ್ಯಶ್ರೇಷ್ಠ: ವಿಜಯ್‌ಕುಮಾರ್‌ ವೈಶಾಖ್‌.

ವರಲ್ಲೇ ಎಡವಿದ ಮುಂಬಯಿ
ಮುಂಬಯಿ: ಆತಿಥೇಯ ಮುಂಬಯಿ “ಬಿ’ ವಿಭಾಗದ ರಣಜಿ ಮುಖಾಮುಖೀಯಲ್ಲಿ ಉತ್ತರ ಪ್ರದೇಶ ವಿರುದ್ಧ 2 ವಿಕೆಟ್‌ಗಳ ಸೋಲನುಭವಿಸಿದೆ.

ಗೆಲುವಿಗೆ 195 ರನ್‌ ಗಳಿಸಬೇಕಿದ್ದ ಉತ್ತರಪ್ರದೇಶ 8 ವಿಕೆಟ್‌ ನಷ್ಟದಲ್ಲಿ ಗುರಿ ಮುಟ್ಟಿತು. ಆರ್ಯನ್‌ ಜುಯಲ್‌ (76) ಮತ್ತು ಕರಣ್‌ ಶರ್ಮ (ಔಟಾಗದೆ 67) ಅವರ ಬ್ಯಾಟಿಂಗ್‌ ಸಾಹಸದಿಂದ ಯುಪಿ ರೋಚಕ ಜಯ ಸಾಧಿಸಿತು. 149ಕ್ಕೆ 6 ವಿಕೆಟ್‌ ಬಿದ್ದಾಗ ಮುಂಬಯಿ ಮುಂದೆ ಗೆಲುವಿನ ಅವಕಾಶವಿತ್ತು. ಆದರೆ ಕರಣ್‌ ಶರ್ಮ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡು ತಂಡವನ್ನು ದಡ ಸೇರಿಸಿದರು. ಮುಂಬಯಿ ತವರಿನ “ವಾಂಖೇಡೆ ಸ್ಟೇಡಿಯಂ’ನಲ್ಲೇ ಸೋಲಿಗೆ ತುತ್ತಾಯಿತು.

ಸಂಕ್ಷಿಪ್ತ ಸ್ಕೋರ್‌: ಮುಂಬಯಿ-198 ಮತ್ತು 320. ಯುಪಿ-324 ಮತ್ತು 8 ವಿಕೆಟಿಗೆ 195.

Advertisement

Udayavani is now on Telegram. Click here to join our channel and stay updated with the latest news.

Next