ಬಳ್ಳಾರಿ: 1902ರಲ್ಲಿ ಶಿವನ ಸಮುದ್ರದಲ್ಲಿ ಏಷ್ಯಾದಲ್ಲಿಯೇ ಪ್ರಥಮ ಬಾರಿಗೆ ವಿದ್ಯುತ್ ಯೋಜನೆ ಪ್ರಾರಂಭವಾಯಿತು. ತದನಂತರ ತುಂಗಾ, ಭದ್ರಾ, ಜಲವಿದ್ಯುತ್ ಕೇಂದ್ರಗಳು ಪ್ರಾರಂಭವಾದವಾಗಿದ್ದು, ಭಾರತ ದೇಶದಲ್ಲಿ ಮೊಟ್ಟ ಮೊದಲ ವಿದ್ಯುತ್ ನಿಗಮ ಪ್ರಾರಂಭಿಸಿದ ಹೆಗ್ಗಳಿಕೆ ಕರ್ನಾಟಕ ರಾಜ್ಯಕ್ಕೆ ಸಲ್ಲುತ್ತದೆ ಎಂದು ನಿವೃತ್ತ ಮುಖ್ಯ ಅಭಿಯಂತರ(ವಿದ್ಯುತ್) ಎಚ್. ರಾಮಕೃಷ್ಣರಾವ್ ಹೇಳಿದರು.
ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಕುಡತಿನಿಯ 50ನೇ ಸಂಸ್ಥಾಪನಾ ದಿನಾಚರಣೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನವೀಕರಿಸಬಹುದಾದ ಇಂಧನಗಳಾದ ನೀರು, ಗಾಳಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇದರಿಂದ ರಾಜ್ಯದ ಅರ್ಥಿಕ ಸಂಪನ್ಮೂಲಗಳನ್ನು ಒಟ್ಟಗೂಡಿಸಿ ಕೆಲಸ ಮಾಡಬೇಕಾಗಿದೆ ಎಂದರು.
ರಾಜ್ಯದಲ್ಲಿ ವಿದ್ಯುತ್ ತಯಾರಿಸುವುದಕ್ಕೆ ಸಾಕಷ್ಟು ಸಂಪನ್ಮೂಲಗಳು ಲಭ್ಯವಿದ್ದು ಅದನ್ನು ಬಳಸಿಕೊಂಡು ವಿದ್ಯುತ್ ತಯಾರಿಸಬೇಕಾದ ವಾತಾವರಣ ನಿರ್ಮಿಸಬೇಕು. ಇದಕ್ಕೆ ಸರ್ಕಾರಗಳು, ಸಾರ್ವಜನಿಕರ ಬೆಂಬಲ ಅಗತ್ಯವಾಗಿದೆ ಎಂದರು.
ಇದೇ ವೇಳೆ ನಿಗಮದಲ್ಲಿ 25 ವರ್ಷ ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ, 2018-19ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಉದ್ಯೋಗಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಪ್ರಭಾರಿ ಕಾರ್ಯನಿರ್ವಾಹಕ ನಿರ್ದೇಶಕ ನರೇಂದ್ರಕುಮಾರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸಹಾಯಕ ಟೆಕ್ನಿಷಿಯನ್ ಎ. ಜಯಶೀಲನ್, ಮುಖ್ಯ ಅಭಿಯಂತರ (ಕಾಮಗಾರಿ) ಎಚ್.ಆರ್. ಪ್ರೇಮನಾಥ, ಪ್ರಭಾರಿ ಮುಖ್ಯ ಅಭಿಯಂತರ(ಕಾಮಗಾರಿ) ಪಿ. ಉಮಾಪತಿ, ಉಪ ಪ್ರಧಾನ ಪ್ರಬಂಧಕ ಭೀಮರಾಯ ನಕ್ಕುಂದಿ ಸೇರಿ ಮತ್ತಿತರರು ಇದ್ದರು.