ಜಮ್ಮು: ರಣಜಿ ಟ್ರೋಫಿ ಪಂದ್ಯಾವಳಿಯ ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯ ಮಂದ ಬೆಳಕಿನ ಕಾರಣ ಆರಂಭವಾಗಿಲ್ಲ. ಹೀಗಾಗಿ ಮೊದಲ ದಿನದ ಅರ್ಧ ದಿನ ಯಾವುದೇ ಪಂದ್ಯವಿಲ್ಲದೆ ನಷ್ಟವಾಗಿದೆ. ಮಂದ ಬೆಳಕಿನ ಕಾರಣ ಟಾಸ್ ಕೂಡಾ ಸಾಧ್ಯವಾಗಿಲ್ಲ.
ಜಮ್ಮುವಿನ ಗಾಂಧಿ ಸ್ಮಾರಕ ವಿಜ್ಞಾನ ಕಾಲೇಜಿನ ಮೈದಾನದಲ್ಲಿ ಉಭಯ ತಂಡಗಳು ಸೆಣಸಾಡಲು ಸಜ್ಜಾಗಿದೆ. ಇದು ನಾಕೌಟ್ ಪಂದ್ಯವಾದ ಕಾರಣ ಈ ಪಂದ್ಯ ಗೆದ್ದ ತಂಡ ಸೆಮಿ ಫೈನಲ್ ಪ್ರವೇಶಿಸಲಿದೆ.
ಕಿವೀಸ್ ಪ್ರವಾಸದಲ್ಲಿದ್ದ ಮನೀಷ್ ಪಾಂಡೆ ಕರ್ನಾಟಕ ತಂಡವನ್ನು ಕೂಡಿಕೊಂಡಿದ್ದು, ತಂಡಕ್ಕೆ ಹೊಸ ಶಕ್ತಿ ನೀಡಿದೆ.
ಜಮ್ಮು ಕಾಶ್ಮೀರ ತಂಡ ಕೂಡಾ ಬಲಿಷ್ಠವಾಗಿದ್ದು, ನಾಯಕ ಪರ್ವೇಜ್ ರಸೂಲ್ ಉತ್ತಮ ಫಾರ್ಮಿನಲ್ಲಿದ್ದಾರೆ. ಮತ್ತೋರ್ವ ಆಟಗಾರ ಅಬ್ದುಲ್ ಸಮದ್ ಕೂಟದಲ್ಲಿ 547 ರನ್ ಗಳಿಸಿ ಭರ್ಜರಿ ಫಾರ್ಮಿನಲ್ಲಿದ್ದಾರೆ. ಇವರು ಕರ್ನಾಟಕ ತಂಡಕ್ಕೆ ತಡೆಯಾಗುವ ಸಾಧ್ಯತೆಯಿದೆ.
ಒಂದು ವೇಳೆ ಐದು ದಿನಗಳ ಈ ಪಂದ್ಯ ರದ್ದಾದರೆ ಲೀಗ್ ಪ್ರದರ್ಶನದ ಆಧಾರದಲ್ಲಿ ಜಮ್ಮು ಕಾಶ್ಮೀರ ಸೆಮಿಫೈನಲ್ ಗೆ ಎಂಟ್ರಿ ಕೊಡಲಿದೆ.