ಮೈಸೂರು: ಈ ವರ್ಷದ ಅಂತಿಮ ಸೂರ್ಯಗ್ರಹಣ ಇಂದು ನಡೆಯಿತು. ಬಾನಂಗಳದಲ್ಲಿ ಸೂರ್ಯನ ಆಕರ್ಷಕ ಚಿತ್ತಾರ ಮೂಡಿಸಿದ್ದರೆ, ಇತ್ತ ಗ್ರಹಣದಿಂದಾಗಿ ರಣಜಿ ಪಂದ್ಯ ವಿಳಂಬವಾಯಿತು.
ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆಯುತ್ತಿರವ ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ನಡುವಿನ ರಣಜಿ ಪಂದ್ಯಾಟ ತಡವಾಗಿ ಆರಂಭವಾಯಿತು.
ಬೆಳಿಗ್ಗೆ 8.06ಕ್ಕೆ ಸೂರ್ಯಗ್ರಹಣ ಆರಂಭವಾಗಿತ್ತು. 11.11ಕ್ಕೆ ಗ್ರಹಣ ಮೋಕ್ಷವಾಗಿತ್ತು. ಹಾಗಾಗಿ 9.30ಕ್ಕೆ ಆರಂಭವಾಗಬೇಕಾದ ರಣಜಿ ಪಂದ್ಯ 11.15ಕ್ಕೆ ಆರಂಭಿಸಲಾಯಿತು. ಗ್ರಹಣ ಕಾಲದಲ್ಲಿ ಸೂರ್ಯನನ್ನು ನೋಡಬಾರದು ಎಂಬ ಕಾರಣ ಹೀಗೆ ಸಮಯ ಬದಲಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ.
ಕರ್ನಾಟಕ ಮೊದಲ ಇನ್ನಿಂಗ್ಸ್ ನಲ್ಲಿ 166 ರನ್ ಗಳಿಸಿದ್ದರೆ, ಎರಡನೇ ದಿನದ ಬ್ಯಾಟಿಂಗ್ ಆರಂಭಿಸಿದ ಹಿಮಾಚಲ ಪ್ರದೇಶ 26 ಓವರ್ ಅಂತ್ಯಕ್ಕೆ 46 ರನ್ ಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.