ಮುಂಬಯಿ: ಕರ್ನಾಟಕ ವಿಶ್ವ ಕರ್ಮ ಅಸೋಸಿಯೇಶನ್ ಮುಂಬಯಿ ಇದರ ವಾರ್ಷಿಕ ಕ್ರೀಡೋತ್ಸವವು ಡಿ. 17 ರಂದು ಬೆಳಗ್ಗೆ 7 ರಿಂದ ಕಾಂದಿವಲಿ ಪೂರ್ವದ ನ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಇದರ ಕ್ರೀಡಾಂಗಣದಲ್ಲಿ ವೈವಿಧ್ಯಮಯ ಕ್ರೀಡಾಸ್ಪರ್ಧೆಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಸದಾನಂದ ಆಚಾರ್ಯ ಕಲ್ಯಾಣಪುರ ಇವರ ಅಧ್ಯಕ್ಷತೆಯಲ್ಲಿ ನಡೆದ ಕ್ರೀಡೋತ್ಸವದ ಪ್ರಾರಂಭದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಕ್ರೀಡಾಕೂಟವನ್ನು ಉದ್ಯಮಿ ಉದಯ್ ಆಚಾರ್ಯ ಮೀರಾರೋಡ್ ಇವರು ದೀಪ ಬೆಳಗಿಸುವುದರೊಂದಿಗೆ ಚಾಲನೆ ನೀಡಿ ಮಾತನಾಡಿ, ವಿದ್ಯೆಯು ನಮಗೆ ಜ್ಞಾನವನ್ನು ನೀಡುತ್ತದೆ. ಆದರೆ ಕ್ರೀಡೆಯು ನಮಗೆ ಒಳ್ಳೆಯ ಆರೋಗ್ಯವನ್ನು ನೀಡುವಲ್ಲಿ ಸಹಕಾರಿಯಾಗುತ್ತದೆ. ಸಮಾಜ ಬಾಂಧವರು ಈ ಕ್ರೀಡಾಕೂಟದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿ ಎಲ್ಲ ಕ್ರೀಡಾಪಟುಗಳಿಗೆ ಶುಭಹಾರೈಸಿದರು.
ವೇದಿಕೆಯಲ್ಲಿ ಯುವ ವಿಭಾಗದ ಕಾರ್ಯಾಧ್ಯಕ್ಷರಾದ ಪ್ರದೀಪ್ ಆರ್. ಆಚಾರ್ಯ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶುಭಾ ಸುನಿಲ… ಆಚಾರ್ಯ, ಗೌರವ ಕಾರ್ಯದರ್ಶಿಗಳಾದ ಹರೀಶ್ ಆಚಾರ್ಯ ಮೀರಾರೋಡ್ ಇವರು ಉಪಸ್ಥಿತರಿದ್ದರು. ಸಮಾಜ ಬಾಂಧವರ ವಿವಿಧ ವಯೋಮಿತಿಗೆ ಅನುಗುಣವಾಗಿ ವಿವಿಧ ಕ್ರೀಡೆಗಳು ಹಾಗೂ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರುಗಳಾದ ಜಿ. ಟಿ. ಆಚಾರ್ಯ, ನಿಟ್ಟೆ ದಾಮೋದರ ಆಚಾರ್ಯ, ಎಂ. ಎ. ಆಚಾರ್ಯ ಹಾಗೂ ಹಿರಿಯ ಸದಸ್ಯರುಗಳು ಹಾಜರಿದ್ದರು. ಮುಂಜಾನೆಯಿಂದ ಮುಸ್ಸಂಜೆವರೆಗೆ ನಡೆದಂತಹ ಈ ಕ್ರೀಡಾಕೂಟದಲ್ಲಿ ಸುಮಾರು 400 ಕ್ಕೂ ಅಧಿಕ ಮಂದಿ ಸಮಾಜ ಬಾಂಧವರು ಭಾಗವಹಿಸಿದ್ದರು. ಸಂಜೆ ನಡೆದಂತಹ ಸಮಾರೋಪ ಸಮಾರಂಭದಲ್ಲಿ ಕ್ರೀಡಾವಿಜೇತರಿಗೆ ಪ್ರಮಾಣ ಪತ್ರ ಹಾಗೂ ಪದಕ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮವನ್ನು ಯುವ ವಿಭಾಗದ ಸದಸ್ಯ ಪ್ರಸಾದ್ ಆಚಾರ್ಯ ನಿರೂಪಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಯಿತು.