Advertisement
“ಕರ್ನಾಟಕ ವಿಕಾಸ ವಾಹಿನಿ’ ಯಾತ್ರೆಗೆ ವಿಶೇಷ ಬಸ್ ಸಿದ್ಧಗೊಂಡಿದ್ದು, ನವೆಂಬರ್ 7ರಿಂದ ಚಾಮುಂಡೇಶ್ವರಿ ಕ್ಷೇತ್ರದಿಂದ ಚಾಲನೆ ದೊರೆಯಲಿದೆ. ಯಾತ್ರೆಯ ನಾಯಕತ್ವ ವಹಿಸಲಿರುವ ಎಚ್.ಡಿ.ಕುಮಾರಸ್ವಾಮಿ ಯಾತ್ರೆ ಜತೆಗೆ ಗ್ರಾಮವಾಸ್ತವ್ಯ ನಡೆಸುವುದು ವಿಶೇಷ. ಜೆಪಿ ನಗರ ನಿವಾಸದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ,ಮುಂಬರುವ ವಿಧಾನಸಭೆ ಚುನಾವಣಾ ಪ್ರಚಾರ ಯಾತ್ರೆಗೆ “ಕರ್ನಾಟಕ ವಿಕಾಸ ವಾಹಿನಿ’ ಎಂದು ನಾಮಕರಣ ಮಾಡಲಾಗಿದ್ದು, ರಾಜ್ಯದ 224 ಕ್ಷೇತ್ರಗಳಲ್ಲಿ ಸಂಚರಿಸಲಿದೆ ಎಂದು ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಯಾತ್ರೆಗೆ ಚಾಲನೆ ದೊರೆಯಲಿದ್ದು, ಚಾಮುಂಡೇಶ್ವರಿ ಕ್ಷೇತ್ರದ ನಂತರ ಕೆ.ಆರ್.ನಗರ, ಹೊಳೇನರಸೀಪುರ, ಹಾಸನ, ಬೇಲೂರು ಮಾರ್ಗವಾಗಿ ಚಿಕ್ಕಮಗಳೂರಿಗೆ ತಲುಪಿ ಅಂದು ಸಂಜೆ ಬೃಹತ್ ಸಮಾವೇಶ ಮಾಡಲಾಗುವುದು. ಅದೇ ದಿನ ಅಲ್ಲಿ ಗ್ರಾಮವಾಸ್ತವ್ಯ ಮಾಡಲಾಗುವುದು. ಮರುದಿನ ನ.8ರಂದು ತರೀಕೆರೆಯಲ್ಲಿ ಬಹಿರಂಗ ಸಭೆ ನಡೆಸಿ ಸಂಜೆ ಶಿವಮೊಗ್ಗದಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಲಿ ದ್ದೇನೆ. ನಂತರ ರಾತ್ರಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭೆ ಕ್ಷೇತ್ರದಲ್ಲಿ ಗ್ರಾಮವಾಸ್ತವ್ಯ ಮಾಡಲಾಗುವುದು ಎಂದು ಹೇಳಿದರು. ನ.9ರಂದು ಚೆನ್ನಗಿರಿಯಲ್ಲಿ ಬಹಿರಂಗ ಸಮಾವೇಶ, ಸಂಜೆ ಹರಿಹರ ಕ್ಷೇತ್ರದಲ್ಲಿ ಸಭೆ ನಡೆಸಿ ಬೆಂಗಳೂರಿಗೆ ವಾಪಸ್ಸಾಗಲಾಗುವುದು. ಮೊದಲ ಹಂತದ ಪ್ರವಾಸ ಮೂರು ದಿನ ನಡೆಯಲಿದೆ. ನ.13ಕ್ಕೆ ಬೆಳಗಾವಿಯಲ್ಲಿ ಆಯೋಜಿಸಿರುವ ರೈತ ಸಮಾವೇಶದಲ್ಲಿ 1 ಲಕ್ಷ ರೈತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
Related Articles
Advertisement
ಇಂದು ಕೋರ್ ಕಮಿಟಿ ಸಭೆ: ಶನಿವಾರ ಜೆಡಿಎಸ್ ಕೋರ್ ಕಮಿಟಿ ಸಭೆ ನಡೆಯಲಿದ್ದು, ಯಾತ್ರೆ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚಿಸಿ ಕೆಲವು ಪ್ರಮುಖ ತೀರ್ಮಾನ ಕೈಗೊಳ್ಳಲುವ ಸಾಧ್ಯತೆಯಿದೆ.
ಟಿ.ಬಿ.ಜಯಚಂದ್ರ ಭೇಟಿ: ಕಾನೂನು ಸಚಿವ ಟಿ.ಬಿ.ಜಯಚಂದ್ರ ಶುಕ್ರವಾರ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ನೈಸ್ ಸಂಸ್ಥೆ ಹಗರಣಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ವರದಿ ಕುರಿತ ಮುಂದಿನ ಕ್ರಮದ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚಿಸಲಾಯಿತು ಎಂದು ಹೇಳಲಾಗಿದೆ.
ಕನ್ನಡ ರಾಜ್ಯೋತ್ಸವಕ್ಕೆಬಿಜೆಪಿ ಕೊಡುಗೆ ಏನು?ಕನ್ನಡ ರಾಜ್ಯೋತ್ಸವಕ್ಕೆ ಅಮಿತ್ ಶಾ ಕೊಡುಗೆಯೇನು, ನರೇಂದ್ರಮೋದಿ ರಾಜ್ಯೋತ್ಸವ ಪ್ರಯುಕ್ತ ಯಾವ ಯೋಜನೆ
ಘೋಷಿಸಿದ್ದಾರೆ ಎಂಬುದನ್ನು ಬಿಜೆಪಿಯವರು ಹೇಳಿದರೆ ಸೂಕ್ತ. ಬಿಜೆಪಿಯವರು 1 ಲಕ್ಷ ಕೋಟಿ ರೂ. ಲೂಟಿ ಹೊಡೆದಿದ್ದಾರೆ ಎಂದು ಸಿದ್ದರಾಮಯ್ಯ ಹೇಳ್ತಾರೆ. ಆದರೆ, ಯಾರೂ ಯಾರ ಮೇಲೂ ಕ್ರಮ ಕೈಗೊಂಡಿಲ್ಲ. ನಾಲ್ಕು ವರ್ಷಗಳಿಂದ ಸುಮ್ಮನಿದ್ದ ಕಾಂಗ್ರೆಸ್ ನಾಯಕರು ಇದೀಗ ಅಶೋಕ್, ಶೋಭಾ ವಿರುದ್ಧ ಪ್ರತಿಭಟನೆಗೆ ಮುಂದಾಗಿರುವುದು ಯಾಕೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.