Advertisement

ರಣಜಿ: ಕರ್ನಾಟಕ ಸ್ಪಿನ್‌ ದಾಳಕ್ಕೆ ಉರುಳಿದ ಅಸ್ಸಾಂ

07:05 AM Oct 15, 2017 | |

ಮೈಸೂರು: ಮೊದಲ ದಿನವೇ ಅಸ್ಸಾಂಗೆ ಸ್ಪಿನ್‌ ರುಚಿ ತೋರಿಸಿದ ಕರ್ನಾಟಕ, 2017-18ನೇ ಸಾಲಿನ ರಣಜಿ ಋತುವನ್ನು ಬಹಳ ಸಂಭ್ರಮದಿಂದಲೇ ಆರಂಭಿಸಿದೆ. ಅಸ್ಸಾಂ ತಂಡದ ಮೊದಲ ಇನಿಂಗ್ಸ್‌ 145 ರನ್ನಿಗೆ ಮುಗಿದಿದ್ದು, ಜವಾಬಿತ್ತ ಕರ್ನಾಟಕ ವಿಕೆಟ್‌ ಮೊದಲ ದಿನದ ಆಟದ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 77ರನ್‌ ಮಾಡಿದೆ.

Advertisement

ಮೈಸೂರಿನಲ್ಲಿ ಶನಿವಾರ ಮೊದಲ್ಗೊಂಡ “ಎ’ ವಿಭಾಗದ ರಣಜಿ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ದುಕೊಂಡ ಕರ್ನಾಟಕ ಇದರಲ್ಲಿ ಭರ್ಜರಿ ಯಶಸ್ಸು ಸಾಧಿಸಿತು. ನಾಯಕ ಆರ್‌.ವಿನಯ್‌ ಕುಮಾರ್‌ ಅಸ್ಸಾಂ ಕುಸಿತಕ್ಕೆ ಮುಹೂರ್ತವಿರಿಸಿದ ಬಳಿಕ ಸ್ಪಿನ್‌ದ್ವಯರಾದ ಕೃಷ್ಣಪ್ಪ ಗೌತಮ್‌ ಮತ್ತು ಶ್ರೇಯಸ್‌ ಗೋಪಾಲ್‌ ಸೇರಿಕೊಂಡು ಪ್ರವಾಸಿಗರ ಮೇಲೆ ಸವಾರಿ ಮಾಡಿದರು. ಇವರ ಆಫ್ಸ್ಪಿನ್‌-ಲೆಗ್‌ಸ್ಪಿನ್‌ ದಾಳಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫ‌ಲಗೊಂಡ ಅಸ್ಸಾಂ 59.1 ಓವರ್‌ಗಳಲ್ಲಿ 145 ರನ್ನುಗಳ ಸಣ್ಣ ಮೊತ್ತಕ್ಕೆ ಲಾಗ ಹಾಕಿತು.

ಗೌತಮ್‌ 20 ರನ್ನಿಗೆ 4 ವಿಕೆಟ್‌ ಹಾರಿಸಿದರೆ, ಶ್ರೇಯಸ್‌ ಗೋಪಾಲ್‌ 43 ರನ್ನಿತ್ತು ಮೂವರನ್ನು ಪೆವಿಲಿಯನ್ನಿಗೆ ಅಟ್ಟಿದರು. ವಿನಯ್‌ ಕುಮಾರ್‌ 2 ವಿಕೆಟ್‌ ಕಿತ್ತರು. ಉಳಿದೊಂದು ವಿಕೆಟ್‌ ಸ್ಟುವರ್ಟ್‌ ಬಿನ್ನಿ ಪಾಲಾಯಿತು. ಮಿಥುನ್‌ ಮತ್ತು ಅರವಿಂದ್‌ಗೆ ವಿಕೆಟ್‌ ಲಭಿಸಲಿಲ್ಲ.

ಕರ್ನಾಟಕ ಎಚ್ಚರಿಕೆಯಿಂದ ಬ್ಯಾಟಿಂಗ್‌ ಆರಂಭಿಸಿದ್ದು, 30 ಓವರ್‌ಗಳ ಆಟದಲ್ಲಿ ಯಾವುದೇ ಹಾನಿಗೊಳಗಾಗದೆ 77 ರನ್‌ ಮಾಡಿದೆ. ಆರ್‌.ಸಮರ್ಥ್ 106 ಎಸೆತಗಳಿಂದ 47 ರನ್‌ ಹಾಗೂ ಮಾಯಾಂಕ್‌ ಅಗರ್ವಾಲ್‌ 78 ಎಸೆತಗಳಿಂದ 26 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇಬ್ಬರ ಬ್ಯಾಟಿನಿಂದಲೂ ತಲಾ 3 ಬೌಂಡರಿಗಳು ಬಂದಿವೆ. ದ್ವಿತೀಯ ದಿನದಾಟದಲ್ಲಿ ಕರ್ನಾಟಕ ಉತ್ತಮ ಮುನ್ನಡೆಯೊಂದಿಗೆ ಅಸ್ಸಾಂ ಮೇಲೆ ಒತ್ತಡ ಹೇರುವ ಯೋಜನೆಯಲ್ಲಿದೆ.

ಗೋಕುಲ್‌ ಏಕಾಂಗಿ ಹೋರಾಟ
ಇದಕ್ಕೂ ಮೊದಲು 1ನೇ ಇನಿಂಗ್ಸ್‌ನಲ್ಲಿ ಅಸ್ಸಾಂ ಪರ ಕರ್ನಾಟಕ ದಾಳಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಆಟಗಾರನೆಂದರೆ ನಾಯಕ ಗೋಕುಲ್‌ ಶರ್ಮ ಮಾತ್ರ. ಅವರು ಏಕಾಂಗಿಯಾಗಿ ಹೋರಾಡಿ ಇನಿಂಗ್ಸಿನ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು. 114 ಎಸೆತ ಎದುರಿಸಿ, 4 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ 55 ರನ್‌ ಹೊಡೆದರು. ಆದರೆ ಆವರಿಗೆ ಇನ್ನೊಂದು ತುದಿಯಿಂದ ಯಾರಿಂದಲೂ ಬೆಂಬಲ ಸಿಗಲಿಲ್ಲ.

Advertisement

9ನೇ ಓವರಿನಲ್ಲಿ ಪಲ್ಲವ್‌ ಕುಮಾರ್‌ ದಾಸ್‌ (15) ವಿಕೆಟ್‌ ಪತನದೊಂದಿಗೆ ಅಸ್ಸಾಂ ಕುಸಿತ ಮೊದಲ್ಗೊಂಡಿತು. ಎರಡೇ ಓವರ್‌ ಅಂತರದಲ್ಲಿ ಪ್ರೀತಂ ದೇವನಾಥ್‌ ಅವರನ್ನು ಬಿನ್ನಿ ಶೂನ್ಯಕ್ಕೆ ವಾಪಸ್‌ ಮಾಡಿದರು. ಒಂದಿಷ್ಟು ಹೋರಾಟದ ಸೂಚನೆ ನೀಡಿದ ಓಪನರ್‌ ದಾಸ್‌ 57ರ ಮೊತ್ತದಲ್ಲಿ ಪೆವಿಲಿಯನ್‌ ಸೇರಿಕೊಂಡರು. ಗೋಕುಲ್‌ ಶರ್ಮ ಹೊರತುಪಡಿಸಿದರೆ 26 ರನ್‌ ಮಾಡಿದ ರಿಷವ್‌ ಅವರದೇ ಹೆಚ್ಚಿನ ಗಳಿಕೆ.

ಈ ಹಂತದಲ್ಲಿ ಕರ್ನಾಟಕದ ಸ್ಪಿನ್‌ ಆಕ್ರಮಣ ತೀವ್ರಗೊಳ್ಳುತ್ತ ಹೋಯಿತು. 84 ರನ್ನಿಗೆ 7 ವಿಕೆಟ್‌ ಬಿತ್ತು. ಗೋಕುಲ್‌ ಶರ್ಮ ಪ್ರಯತ್ನದಿಂದ ತಂಡದ ಮೊತ್ತ ನೂರೈವತ್ತರ ಗಡಿ ಸಮೀಪಿಸಿತು.

ಸಂಕ್ಷಿಪ್ತ ಸ್ಕೋರ್‌:
ಅಸ್ಸಾಂ 1ನೇ ಇನಿಂಗ್ಸ್‌ 145 (ಗೋಕುಲ್‌ ಶರ್ಮ 55, ರಿಷವ್‌ ದಾಸ್‌ 26, ಕೆ.ಗೌತಮ್‌ 20ಕ್ಕೆ 4, ಶ್ರೇಯಸ್‌ ಗೋಪಾಲ್‌ 43ಕ್ಕೆ 3), ಕರ್ನಾಟಕ ವಿಕೆಟ್‌ ನಷ್ಟವಿಲ್ಲದೆ 77/0 (ಸಮರ್ಥ್ ಬ್ಯಾಟಿಂಗ್‌ 47, ಅಗರ್ವಾಲ್‌ ಬ್ಯಾಟಿಂಗ್‌ 26).

ರಣಜಿ ಇತರೆ ಪಂದ್ಯಗಳ ಸ್ಕೋರ್‌
 -ಚತ್ತೀಸ್‌ಗಢ ವಿರುದ್ಧ ಪಶ್ಚಿಮ ಬಂಗಾಳ 1ನೇ ಇನಿಂಗ್ಸ್‌ (283/2)
 -ರೈಲ್ವೇಸ್‌ ವಿರುದ್ಧ ದೆಹಲಿ 1ನೇ ಇನಿಂಗ್ಸ್‌ (318/6)
 -ಜಮ್ಮು ಕಾಶ್ಮೀರ ವಿರುದ್ಧ ಸೌರಾಷ್ಟ್ರ 1ನೇ ಇನಿಂಗ್ಸ್‌ (428/4)
-ಜಾಖಂಡ್‌ ವಿರುದ್ಧ ರಾಜಸ್ಥಾನ 1ನೇ ಇನಿಂಗ್ಸ್‌ (250/4)
- ಕೇರಳ 1ನೇ ಇನಿಂಗ್ಸ್‌ (208/10), ಗುಜರಾತ್‌ 1ನೇ ಇನಿಂಗ್ಸ್‌ (60/2)
-ಆಂಧ್ರ ವಿರುದ್ಧ ಬರೋಡ 1ನೇ ಇನಿಂಗ್ಸ್‌ (247/7)
-ಮುಂಬೈ ವಿರುದ್ಧ ಮಧ್ಯ ಪ್ರದೇಶ 1ನೇ ಇನಿಂಗ್ಸ್‌ (250/5)
 -ತಮಿಳುನಾಡು ವಿರುದ್ಧ ತ್ರಿಪುರ 1ನೇ ಇನಿಂಗ್ಸ್‌ (244/7)
-ಪಂಜಾಬ್‌ 1ನೇ ಇನಿಂಗ್ಸ್‌ (161/10), ವಿದರ್ಭ 1ನೇ ಇನಿಂಗ್ಸ್‌ (106/1)
-ಗೋವಾ 1ನೇ ಇನಿಂಗ್ಸ್‌ (255/10), ಹಿಮಾಚಲ 1ನೇ ಇನಿಂಗ್ಸ್‌ (2/0)

– ಸಿ.ದಿನೇಶ್‌

Advertisement

Udayavani is now on Telegram. Click here to join our channel and stay updated with the latest news.

Next