Advertisement
ಸಿಡಬ್ಲ್ಯುಆರ್‌ಸಿ ಶಿಫಾರಸಿನ ಮೇರೆಗೆ ಇಂದು ‘ವಿಶೇಷ ತುರ್ತು ಸಭೆ’ ನಡೆಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನೀರು ಬಿಡುವ ಕುರಿತು ಸರಕಾರ ತನ್ನ ಕಾನೂನು ತಂಡದೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಲಿದೆ ಮತ್ತು ನೆಲದ ವಾಸ್ತವ ಪರಿಸ್ಥಿತಿಯನ್ನು ವಿವರಿಸಿ ಮತ್ತೊಮ್ಮೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದೆ ಎಂದರು.
Related Articles
Advertisement
”ದಿನಕ್ಕೆ 5 ಸಾವಿರ ಕ್ಯೂಸೆಕ್ ಬಿಡಬೇಕೋ ಬೇಡವೋ ಎಂಬ ಬಗ್ಗೆ ಕಾನೂನು ತಂಡದೊಂದಿಗೆ ಸಮಾಲೋಚನೆ ನಡೆಸುತ್ತೇವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದು, ಈ ಕುರಿತು ಕಾನೂನು ತಂಡದೊಂದಿಗೆ ಚರ್ಚಿಸಲು ಮತ್ತು ಅರ್ಜಿ ಸಲ್ಲಿಸುವ ಬಗ್ಗೆಯೂ ಚರ್ಚಿಸಿದ್ದಾರೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಸಿಎಂ ಹೇಳಿದ್ದಾರೆ.
ಶಿವಕುಮಾರ್ ಹೊರತುಪಡಿಸಿ ಜಲಸಂಪನ್ಮೂಲ ಸಚಿವ, ಕಾವೇರಿ ಕೊಳ್ಳದ ಸಚಿವರು, ಎಲ್ಲ ಪಕ್ಷಗಳ ಮಾಜಿ ಮುಖ್ಯಮಂತ್ರಿಗಳು, ರಾಜ್ಯ ಸಚಿವ ಸಂಪುಟದ ಹಿರಿಯ ಸಚಿವರು, ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರಿಗೆ ತುರ್ತು ಸಭೆಯಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿತ್ತು.
ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ,ಎಚ್.ಡಿ. ಕುಮಾರಸ್ವಾಮಿ ಪೂರ್ವ ನಿಗದಿತ ಕಾರ್ಯಕ್ರಮಗಳ ಕಾರಣದಿಂದ ಸಭೆಗೆ ಹಾಜರಾಗಲಿಲ್ಲ. ಸಂಸದರಾದ ಬಿಜೆಪಿಯ ಪ್ರತಾಪ್ ಸಿಂಹ, ಪಿ.ಸಿ. ಮೋಹನ್, ಶಿವಕುಮಾರ್ ಉದಾಸಿ, ಸುಮಲತಾ ಅಂಬರೀಶ್ ಭಾಗವಹಿಸಿದ್ದರು.
”ಸರ್ವಪಕ್ಷ ನಿಯೋಗ ತೆರಳಲು ಅನುವು ಮಾಡಿಕೊಡುವಂತೆ ಪ್ರಧಾನಮಂತ್ರಿಯವರ ಸಮಯ ಕೇಳಿ ಮತ್ತೊಮ್ಮೆ ಪತ್ರ ಬರೆಯಲಾಗುವುದು. ಸಂಸದರೂ ಹೋರಾಟ ಮಾಡುವ ಭರವಸೆ ನೀಡಿದ್ದಾರೆ.18 ರಿಂದ ಸಂಸತ್ ಅಧಿವೇಶನ ಪ್ರಾರಂಭವಾಗಲಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸಚಿವರು ಹಾಗೂ ಸಂಸದರೊಂದಿಗೆ ದೆಹಲಿಯಲ್ಲಿ ಸಭೆ ನಡೆಸಿ ಚರ್ಚಿಸಿ, ದೇಶದ ಗಮನ ಸೆಳೆಯಲಾಗುವುದು.ಇದಕ್ಕೆ ಎಲ್ಲರೂ ಸಹಮತಿ ಸೂಚಿಸಿದ್ದಾರೆ” ಎಂದು ಸಿಎಂ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.