Advertisement
ರಾಜ್ಯದಲ್ಲಿ ಆನ್‌ಲೈನ್ ಜೂಜು ಅಥವಾ ಬೆಟ್ಟಿಂಗ್‌ಗೆ ನಿಷೇಧ ಹೇರಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಕರ್ನಾಟಕ ಪೊಲೀಸ್ ಕಾಯ್ದೆ, 1963ಕ್ಕೆ ತಿದ್ದುಪಡಿ ತರಲಾಗುತ್ತದೆ. ಕಂಪ್ಯೂಟರ್ ಡಿವೈಸ್, ಮೊಬೈಲ್, ಮೊಬೈಲ್ ಆ್ಯಪ್, ಎಲೆಕ್ಟ್ರಾನಿಕ್ ಸಾಧನ ಬಳಸಿ ಆನ್‌ಲೈನ್ ಮೂಲಕ ಹಣದ ವ್ಯವಹಾರ ನಡೆಸುವ ಜೂಜಾಟವನ್ನು ನಿಷೇಧಿಸಲು ನಿರ್ಧರಿಸಲಾಗಿದೆ. ಆದರೆ ಲಾಟರಿ ಅಥವಾ ಕುದುರೆ ರೇಸ್ ಮೇಲೆ ಬೆಟ್ಟಿಂಗ್ ಮಾಡುವುದು ಈ ನಿಷೇಧದ ವ್ಯಾಪ್ತಿಗೆ ಬರುವುದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.
Related Articles
Advertisement
ಗ್ಯಾಂಬ್ಲಿಂಗ್ (ಜೂಜು) ಎಂದರೆ, ಆನ್‌ಲೈನ್ ಮೂಲಕ ಗೇಮ್ ಆಡುವುದು, ಬೆಟ್ಟಿಂಗ್, ಟೋಕನ್ ಮೂಲಕ ಹಣದ ಆಟ ಆಡುವುದು, ಎಲೆಕ್ಟ್ರಾನಿಕ್ ಮನಿ, ಯಾವುದೇ ಆಟಕ್ಕೆ ಆನ್‌ಲೈನ್ ಮೂಲಕ ಹಣದ ವರ್ಗಾವಣೆ ಮಾಡುವುದಕ್ಕೆ ನಿಷೇಧವಿರಲಿದೆ. ನೇರವಾಗಿ ಅಥವಾ ಪರೋಕ್ಷವಾಗಿ ಆಟಗಳಿಗೆ ಹಣ ವರ್ಗಾವಣೆ ಮಾಡುವುದನ್ನು ನಿರ್ಬಂಧಿಸಲಾಗುತ್ತದೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.
ಶಿಕ್ಷೆ ಪ್ರಮಾಣವೂ ಹೆಚ್ಚಳ :
ಕರ್ನಾಟಕ ಪೊಲಿಸ್ ಕಾಯ್ದೆ ಸೆಕ್ಸನ್ 2ಕ್ಕೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ. ಈಗಿರುವ ಕಾಯ್ದೆಯಲ್ಲಿ ಆನ್‌ಲೈನ್ ಗ್ಯಾಂಬ್ಲಿಂಗ್ ನಿಷೇಧಕ್ಕೆ ಅವಕಾಶ ಇರಲಿಲ್ಲ. ಹೀಗಾಗಿ ತಿದ್ದುಪಡಿ ಮೂಲಕ ಅವುಗಳಿಗೆ ನಿಷೇಧ ಹೇರಲಾಗುತ್ತದೆ. ಶಿಕ್ಷೆಯ ಪ್ರಮಾಣವನ್ನೂ ಹೆಚ್ಚಳ ಮಾಡಲು ಸಂಪುಟ ನಿರ್ಧರಿಸಿದೆ. ಸೆಕ್ಸನ್ 78ಎ/3 ಪ್ರಕಾರ, ಈಗಿರುವ ಒಂದು ತಿಂಗಳ ಜೈಲು ಶಿಕ್ಷೆ ಪ್ರಮಾಣವನ್ನು 6 ತಿಂಗಳುಗಳಿಗೆ ವಿಸ್ತರಿಸುವುದು, ಒಂದು ವರ್ಷದ ಶಿಕ್ಷೆ 3 ವರ್ಷಕ್ಕೆ ಹೆಚ್ಚಳ, ಈಗಿರುವ 500 ರೂ. ದಂಡ 10 ಸಾವಿರ ರೂ.ಗೆ ಹೆಚ್ಚಳ, ಈಗಿರುವ 1,000 ರೂ. ದಂಡವನ್ನು 1 ಲಕ್ಷ ರೂ.ಗೆ ಹೆಚ್ಚಳ ಮಾಡಲು ತೀರ್ಮಾನಿಸಲಾಗುತ್ತದೆ.
ಕೇರಳ, ತ. ನಾಡಿನಲ್ಲಿ ನಿಷೇಧ :
ತಮಿಳುನಾಡಿನಲ್ಲಿ ಕಳೆದ ವರ್ಷದ ನವೆಂಬರ್‌ನಲ್ಲೇ ಆನ್‌ಲೈನ್ ಜೂಜಿಗೆ ನಿಷೇಧ ಹೇರಿ ಅಧ್ಯಾದೇಶ ಜಾರಿ ಮಾಡಲಾಗಿದೆ. ಕೇರಳದಲ್ಲಿ ಪ್ರಸಕ್ತ ವರ್ಷದ ಆರಂಭದಲ್ಲೇ ಇದಕ್ಕೆ ನಿಷೇಧ ಹೇರಲಾಗಿದೆ. ಮೊದಲಿಗೆ ಆಯಾ ರಾಜ್ಯಗಳಲ್ಲಿ ಜೂಜಿಗೆ ಸಂಬಂಧಿಸಿ ಪ್ರತ್ಯೇಕ ಕಾನೂನುಗಳಿದ್ದವು. ಒಂದು ರಾಜ್ಯದಲ್ಲಿ ಜೂಜು ಅಪರಾಧವಾಗಿದ್ದರೆ, ಮತ್ತೂಂದರಲ್ಲಿ ಕಾನೂನುಬದ್ಧವಾಗಿತ್ತು. ಅನಂತರ, ಕೇಂದ್ರ ಸರಕಾರವೇ “ಸಾರ್ವಜನಿಕ ಜೂಜು ಕಾಯ್ದೆ, 1867′ ಜಾರಿ ಮಾಡಿತ್ತು. ಬಳಿಕ ಉತ್ತರಪ್ರದೇಶ, ಮಧ್ಯಪ್ರದೇಶ, ಪಂಜಾಬ್‌ನಂಥ ಕೆಲವು ರಾಜ್ಯಗಳು ಇದೇ ಕಾಯ್ದೆಯನ್ನು ಜಾರಿ ಮಾಡಿದವು. ಆದರೆ ಅವುಗಳಲ್ಲಿ ಆನ್‌ಲೈನ್ ಜೂಜು ಕುರಿತು ಪ್ರಸ್ತಾವವಿರಲಿಲ್ಲ. ಮೊದಲಿಗೆ ಈ ಕುರಿತ ಉಲ್ಲೇಖವಿರುವ ಕಾನೂನು ಜಾರಿ ಮಾಡಿದ್ದು ಸಿಕ್ಕಿಂ ಮತ್ತು ನಾಗಾಲ್ಯಾಂಡ್. ಗೋವಾದಲ್ಲಿ ಸರಕಾರಿ ಪ್ರಾಯೋಜಿತ ಕ್ಯಾಸಿನೋಗಳಲ್ಲಿ ಜೂಜಿಗೆ ಅವಕಾಶವಿದೆ.
ಏನಿದು ಆನ್‌ಲೈನ್ ಜೂಜು? :
ಇಂಟರ್ನೆಟ್ ಮೂಲಕ ಕ್ರೀಡೆ ಅಥವಾ ಕ್ಯಾಸಿನೋಗಳ ಮೇಲೆ ಬೆಟ್ಟಿಂಗ್ ಮಾಡುವುದನ್ನು ಆನ್ ಲೈನ್ ಜೂಜು ಅಥವಾ ಇ-ಗ್ಯಾಂಬ್ಲಿಂಗ್ ಎಂದು ಕರೆಯು ತ್ತಾರೆ.
ಯಾವೆಲ್ಲ ಗ್ಯಾಂಬ್ಲಿಂಗ್?
ಪೋಕರ್, ಕುದುರೆ ರೇಸ್, ಕ್ಯಾಸಿನೋ ಸ್ಲಾಟ್‌ಗಳು, ಬ್ಲ್ಯಾಕ್‌ಜ್ಯಾಕ್, ರೋಲೆಟ್, ಕ್ರೀಡಾ ಬೆಟ್ಟಿಂಗ್ (ಕ್ರಿಕೆಟ್, ಬಾಸ್ಕೆಟ್‌ಬಾಲ್, ಫುಟ್ಬಾಲ್ ಇತ್ಯಾದಿ).