Advertisement

Karnataka: ರಾಜ್ಯದಲ್ಲಿ ಮತ್ತೆ ಬಿರುಸಾದ ಹಿಜಾಬ್‌ ಸದ್ದು

11:16 PM Dec 23, 2023 | Team Udayavani |

ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ನಂಜನಗೂಡಿನಲ್ಲಿ ಹಿಜಾಬ್‌ ನಿಷೇಧ ವಾಪಸ್‌ ಪಡೆಯಲು ಸೂಚಿಸಿದ್ದೇನೆಂದು ಹೇಳಿರುವುದು ರಾಜಕೀಯ ತಿರುವು ಪಡೆದಿದೆ. ಕಾಂಗ್ರೆಸ್‌ ಶಾಸಕರು, ಸಚಿವರು ಸಿಎಂ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ವಿಪಕ್ಷ ಬಿಜೆಪಿ ಮುಖಂಡರು ಸಿಎಂ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಹಿಜಾಬ್‌ ನಿಷೇಧ ವಾಪಸ್‌ ಪಡೆದರೆ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್‌, ಹಿಂದೂಗಳು ಕೇಸರಿ ಶಾಲು ಹಾಕಿಕೊಂಡು ಬರಬಹುದು. ಇದರಿಂದ ಗೊಂದಲ ಸೃಷ್ಟಿಯಾದರೆ ಅದಕ್ಕೆ ಸಿದ್ದರಾಮಯ್ಯ ಅವರೇ ಹೊಣೆಯಾಗುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಹಿಜಾಬ್‌ ನಿಷೇಧ ವಾಪಸ್‌ ನಿರ್ಧಾರ ಸರಿ: ಬೋಸರಾಜು
ರಾಯಚೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಹೇಳಿಕೆ ನೀಡಿದರೂ ಸಂವಿಧಾನದ ಆಶಯಗಳ ಇತಿಮಿತಿಯೊಳಗೆ ಇರುತ್ತದೆ. ಹಿಜಾಬ್‌ ನಿಷೇಧ ಹಿಂಪಡೆಯುವ ನಿರ್ಧಾರದ ಹಿಂದೆಯೂ ಅವರ ಆಲೋಚನೆ ಸರಿಯಾಗಿರುತ್ತದೆ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯ ಮಂತ್ರಿಗಳು ಏನೇ ಮಾತನಾಡಿದರೂ ಸಂವಿಧಾನಕ್ಕೆ ಒಳಪಟ್ಟಿರುವ ವಿಷಯಗಳೇ ಇರುತ್ತವೆ ಎಂದರು.

ನಿಷೇಧ ರದ್ದು ತಪ್ಪಲ್ಲ: ತಿಮ್ಮಾಪುರ
ಬಾಗಲಕೋಟೆ: ಕಾಂಗ್ರೆಸ್‌ ಸರ್ವಜಾತಿಗಳನ್ನೂ ಸಮಾನ ದೃಷ್ಟಿಯಿಂದ ನೋಡುತ್ತದೆ. ಹಿಂದೂ ಧರ್ಮಕ್ಕೆ ನೀಡಿದಷ್ಟೇ ಮಹತ್ವವನ್ನು ಇಸ್ಲಾಂಧರ್ಮಕ್ಕೂ ನೀಡುತ್ತದೆ. ಹಿಜಾಬ್‌ ನಿಷೇಧ ಮೂಲಕ ಮುಸ್ಲಿಮರ ಸಾಂಸ್ಕೃತಿಕ ಆಚರಣೆ ಹತ್ತಿಕ್ಕುವ ಕೆಲಸವನ್ನು ಬಿಜೆಪಿ ಸರಕಾರ ಮಾಡಿತ್ತು. ಅದನ್ನು ಸರಿಪಡಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿರುವುದು ತಪ್ಪಲ್ಲ ಎಂದು ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ನಾವು ಯಾರನ್ನೂ ಓಲೈಕೆ ಮಾಡಲ್ಲ. ನಾವು ಎಲ್ಲ ಜಾತಿ, ಜನಾಂಗವನ್ನು ಪ್ರೀತಿಯಿಂದ ಕಾಣುತ್ತೇವೆ. ಸಂವಿಧಾನ ಹೇಳಿದಂತೆ ನಡೆಯುತ್ತೇವೆ. ಯಾರನ್ನೂ ಹತ್ತಿಕ್ಕಬಾರದು. ಬಿಜೆಪಿ ಸರಕಾರ ಮುಸ್ಲಿಮರನ್ನು ಹತ್ತಿಕ್ಕುವ ಕೆಲಸ ಮಾಡಿತ್ತು. ನಾವು ಯಾವ ಧರ್ಮದ ಆಚರಣೆಯನ್ನು ಹತ್ತಿಕ್ಕುವುದಿಲ್ಲ ಎಂದರು.

ಸಿದ್ದು ಹುಚ್ಚುದೊರೆ: ಈಶ್ವರಪ್ಪ
ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮಹಮ್ಮದ್‌ ಬಿನ್‌ ತುಘಲಕ್‌ ಹುಚ್ಚು ದೊರೆ ಆಗಿದ್ದಾರೆ. ಹಿಜಾಜ್‌ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಆದರೆ ಮುಸ್ಲಿಮರನ್ನು ತೃಪ್ತಿಪಡಿಸಬೇಕು ಎಂಬ ಕಾರಣಕ್ಕೆ ಕಾನೂನು, ಹೈಕೋರ್ಟ್‌, ಸಚಿವ ಸಂಪುಟ ಸದಸ್ಯರು ಯಾವುದನ್ನೂ ಲೆಕ್ಕಿಸದೇ ಸಿದ್ದರಾಮಯ್ಯ ಹಿಜಾಬ್‌ ನಿಷೇಧ ಹಿಂಪಡೆಯುವ ಮಾತನ್ನಾಡಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಕಿಡಿಕಾರಿದರು.

ನಮ್ಮ ಸರಕಾರದ ಚಿಂತನೆ ಬಗ್ಗೆ ಸಿಎಂ ಪ್ರಸ್ತಾವಿಸಿದ್ದಾರೆ. ಸರಕಾರದ ಆದೇಶ ಬಂದಾಗ ಎಲ್ಲವೂ ಗೊತ್ತಾಗಲಿದೆ. ಸರ್ವರಿಗೂ ನ್ಯಾಯ ಒದಗಿಸುವ ದೃಷ್ಟಿಯಿಂದ ಸಿಎಂ ಹೇಳಿದ್ದಾರೆಯೇ ಹೊರತು ಮತ್ತೇನೂ ಇಲ್ಲ. ಅನಾವಶ್ಯಕವಾಗಿ ಹಿಂದಿನ ಸರಕೀರ ಹಿಜಾಬ್‌ ವಿಚಾರವನ್ನು ವಿವಾದ ಮಾಡಿತ್ತು. ಅದನ್ನು ಸರಿಪಡಿಸಬೇಕೆಂಬುದಷ್ಟೇ ಸಿಎಂ ಸದುದ್ದೇಶ.
-ಎಚ್‌.ಕೆ. ಪಾಟೀಲ್‌, ಕಾನೂನು ಸಚಿವ

Advertisement

ಬಿಜೆಪಿ ಸರಕಾರ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್‌ ಅನ್ನು ನಿಷೇಧಿಸಿರಲಿಲ್ಲ. ಶಾಲಾ-ಕಾಲೇಜುಗಳಲ್ಲಿ ವಸ್ತ್ರಸಂಹಿತೆಯನ್ನು 1964ರ ಕಾಯ್ದೆಯಂತೆ ರೂಪಿಸಿತ್ತು. ಶಾಲೆ-ಕಾಲೇಜುಗಳಿಗೆ ಹಿಜಾಬ್‌ ಧರಿಸಿ ಬರುವ ಕುರಿತು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ವಿದ್ಯಾರ್ಥಿಗಳಲ್ಲಿ ಕೋಮುವಾದ ಬಿತ್ತುವ ಹುನ್ನಾರವಾಗಿದೆ. ಮತ ಓಲೈಕೆಗೆ ಕೋಮುವಾದಿ ನಿರ್ಣಯ ಕೈಗೊಂಡಿದ್ದಾರೆ.
-ಸಿ.ಟಿ.ರವಿ ಮಾಜಿ ಶಾಸಕ

ರಾಜ್ಯದಲ್ಲಿ ಬರ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರಕಾರ ವಿಫ‌ಲವಾಗಿರುವುದನ್ನು ಮರೆಮಾಚಿ ಜನರ ಗಮನವನ್ನು ಬೇರೆಡೆ ಸೆಳೆಯಲು ಹಿಜಾಬ್‌ ನಿಷೇಧವನ್ನು ಹಿಂಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
-ಛಲವಾದಿ ನಾರಾಯಣ ಸ್ವಾಮಿ, ವಿಧಾನ ಪರಿಷತ್‌ ಸದಸ್ಯ

ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧ ಹಿಂಪಡೆಯುವ ಹೇಳಿಕೆ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಸ್ಲಿಂ ತುಷ್ಟೀಕರಣಕ್ಕೆ ಮುಂದಾಗಿದ್ದಾರೆ. ಎರಡನೇ ಟಿಪ್ಪುಸುಲ್ತಾನ್‌ ಆಗಲು ಹೊರಟಿದ್ದಾರೆ.
-ಬಸನಗೌಡ ಪಾಟೀಲ್‌ ಯತ್ನಾಳ್‌, ಬಿಜೆಪಿ ಶಾಸಕ

ಶಾಲಾ, ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧ ರದ್ದು ವಿಷಯದಲ್ಲಿ ಮುಖ್ಯಮಂತ್ರಿ ಸರಿಯಾದ ತೀರ್ಮಾನ ತೆಗೆದುಕೊಂಡಿದ್ದಾರೆ. ದಂಗೆ ಎಬ್ಬಿಸುವ ಹೇಳಿಕೆ ಕೊಡುವುದೇ ಬಿಜೆಪಿಯವರ ಕೆಲಸ. ಮೂರು ಜನ ಸತ್ತರೆ ರಾಜಕೀಯ ಲಾಭ ಸಿಗುತ್ತದೆ ಎಂದು ಬಿಜೆಪಿಯವರು ಯೋಚಿಸುತ್ತಾರೆ.
– ದಿನೇಶ್‌ ಗುಂಡೂರಾವ್‌,ಆರೋಗ್ಯ ಸಚಿವ

ತಪ್ಪಲ್ಲ: ಶಿವರಾಜ್‌ ತಂಗಡಗಿ
ಕೊಪ್ಪಳ: ಬಿಜೆಪಿಯವರು ಜಾತಿ ರಾಜಕಾರಣಕ್ಕಾಗಿ ಹಿಜಾಬ್‌ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಹಿಜಾಬ್‌ ನಿಷೇಧ ಆದೇಶವನ್ನು ಹಿಂಪಡೆದರೆ ತಪ್ಪೇನು ಎಂದು ಹಿಂದುಳಿದ ವರ್ಗಗಳ ಖಾತೆ ಸಚಿವ ಶಿವರಾಜ್‌ ತಂಗಡಗಿ ಪ್ರಶ್ನಿಸಿದರು. ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಿಜಾಬ್‌ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸರಿಯಾಗಿಯೇ ಹೇಳಿದ್ದಾರೆ. ಹಿಂದೆ ಬಿಜೆಪಿ ಸರಕಾರ ಕೋಮುಗಲಭೆ ಸೃಷ್ಟಿಸುವುದಕ್ಕಾಗಿ ಹಿಜಾಬ್‌, ಹಲಾಲ್‌, ಜಟಕಾ ಮುಂತಾದ ವಿಚಾರಗಳನ್ನು ಮುಂದಿಟ್ಟು ಮಾತನಾಡುತ್ತಿತ್ತು. ಬಿಜೆಪಿ ನಿಷೇಧಿಸಿದ್ದ ಎಲ್ಲವನ್ನೂ ಕಾಂಗ್ರೆಸ್‌ ಸರಕಾರ ಹಿಂಪಡೆಯಲಿದೆ. ಹಿಜಾಬ್‌ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಏನೇ ತೀರ್ಪು ನೀಡಿದರೂ ಸ್ವಾಗತಿಸುತ್ತೇವೆ ಎಂದೂ ಅವರು ಹೇಳಿದರು.

ಸಂತೋಷ್‌ ಲಾಡ್‌ ಸಮರ್ಥನೆ
ಧಾರವಾಡ: ಹಿಜಾಬ್‌ ನಿಷೇಧ ಆದೇಶ ವಾಪಸ್‌ ಪಡೆಯುವ ಬಗ್ಗೆ ಮುಖ್ಯಮಂತ್ರಿ ಹೇಳಿಕೆ ಕಾನೂನಾತ್ಮಕವಾಗಿದೆ ಎಂದು ಸಚಿವ ಸಂತೋಷ ಲಾಡ್‌ ಹೇಳಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಹಿಜಾಬ್‌ಗ ವಿಪಕ್ಷಗಳು ವಿರೋಧಿಸುತ್ತವೆ. ಹಿಜಾಬ್‌ ನಿಷೇಧ ವಾಪಸ್‌ ಸಹಿತ ಇತರ ಕೆಲವು ವಿಷಯಗಳನ್ನು ಕಾನೂನಾತ್ಮಕವಾಗಿ ಪರಿಶೀಲಿಸುತ್ತೇವೆ. ಸಂವಿಧಾನಬದ್ಧವಾಗಿ ಯಾವ ರೀತಿ ಇರಬೇಕು ಎಂದಿದೆಯೋ ಅದೇ ರೀತಿಮಾಡಲು ಸಿಎಂ ಪರಿಶೀಲಿಸುತ್ತಿದ್ದಾರೆ ಎಂದರು.

ಮುತಾಲಿಕ್‌ ಖಂಡನೆ
ರಾಯಬಾಗ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಸ್ಲಿಂ ಮತಗಳಿಗಾಗಿ ಸಿಎಂ ಸಿದ್ದರಾಮಯ್ಯ ರಾಜಕೀಯ ಲಾಭ ಪಡೆಯಲು ವಿವಾದಾತ್ಮಕ ಹೇಳಿಕೆ ನೀಡಿರುವುದು ಖಂಡನೀಯ. ಕೂಡಲೇ ಅವರು ತಮ್ಮ ಹೇಳಿಕೆ ಹಿಂಪಡೆಯ ಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕಾರ್ಯ ಮಾಡುತ್ತಿರುವುದು ಸರಿಯಲ್ಲ. ಹಿಜಾಬ್‌ ನಿಷೇಧ ಹಿಂಪಡೆದು ವಿದ್ಯಾರ್ಥಿಗಳಲ್ಲಿ ಭೇದಭಾವ ಉಂಟು ಮಾಡುವುದು ಅವರಿಗೆ ಶೋಭೆ ತರುವುದಿಲ್ಲ. ಹಿಜಾಬ್‌ಗ ಮತ್ತೆ ಅವಕಾಶ ಕಲ್ಪಿಸಿದರೆ, ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬರುತ್ತಾರೆ ಎಂದು ಎಚ್ಚರಿಸಿದರು.

ಚುನಾವಣೆಗೂ ಮೊದಲೂ ಸಿದ್ದರಾಮಯ್ಯ ಅವರು ಹಿಜಾಬ್‌ ನಿಷೇಧಕ್ಕೆ ವಿರೋಧಿಸಿದ್ದರು. ಚುನಾವಣೆಗೂ ಅದಕ್ಕೂ ಸಂಬಂಧವಿಲ್ಲ. ಸಿಎಂ ಹೃದಯ ಶ್ರೀಮಂತಿಕೆ ತೋರಿದ್ದಾರೆ. ಅದು ಮುಂದಿನ ದಿನಗಳಲ್ಲಿ ಸಿಎಂ ಮಾರ್ಗದರ್ಶನದಲ್ಲಿ ಕಾನೂನಿನ ರೂಪ ಪಡೆದುಕೊಳ್ಳಲಿದೆ. ಬಿಜೆಪಿಯವರು ರಾಜಕಾರಣ ಮಾಡುವುದು ಬೇಡ.
-ಮಧು ಬಂಗಾರಪ್ಪ, ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next