Advertisement

Karnataka; ಮೇ ಕೊನೇ ವಾರ ಮಕ್ಕಳ ಕೈಗೆ ಪಠ್ಯಪುಸ್ತಕ

10:14 PM Feb 10, 2024 | Team Udayavani |

ಬೆಂಗಳೂರು: ಕಳೆದ ವರ್ಷ ಎಪ್ರಿಲ್‌ನಲ್ಲೇ ಶಾಲಾ ಮಕ್ಕಳ ಕೈಗೆ ಮುಂದಿನ ತರಗತಿಯ ಪಠ್ಯ ಪುಸ್ತಕಗಳು ಸೇರಿದ್ದವು. ಆದರೆ ಈ ವರ್ಷ ಮೇ ತಿಂಗಳ ಕೊನೆಯ ವಾರ ಅಂದರೆ ಶಾಲೆ ಆರಂಭದ ಹಿಂದಿನ ವಾರವಷ್ಟೇ ಪಠ್ಯ ಪುಸ್ತಕಗಳು ಮಕ್ಕಳ ಕೈ ಸೇರಲಿವೆ.

Advertisement

ಜನವರಿ 2ನೇ ವಾರದಲ್ಲಿ ಸರಕಾರದ ಕೈ ಸೇರಬೇಕಾಗಿದ್ದ 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ಕನ್ನಡ ಮತ್ತು 6ರಿಂದ 10ನೇ ತರಗತಿ ಸಮಾಜ ವಿಜ್ಞಾನ ಪಠ್ಯಗಳ ಪಠ್ಯಗಳ ಪರಿಷ್ಕರಣೆಯ ವರದಿ ಇನ್ನೂ ಅಧಿಕೃತವಾಗಿ ಸರಕಾರಕ್ಕೆ ಸೇರಿಲ್ಲ. ಸಮಿತಿಯ ನೀಡಿದ ವರದಿಯ ಆಧಾರದಲ್ಲಿ ಪಠ್ಯ ಪುಸ್ತಕವನ್ನು ಪರಿಷ್ಕರಿಸಿ ಕರಡು ತಿದ್ದುಪಡಿ ಮಾಡಿ ಮುದ್ರಣಕ್ಕೆ ಕಳುಹಿಸಲು ಸಾಕಷ್ಟು ಸಮಯದ ಅಗತ್ಯ ಇರುವುದರಿಂದ ಪಠ್ಯ ಪುಸ್ತಕ ವಿತರಣೆ ಈ ವರ್ಷ ವಿಳಂಬವಾಗಲಿದೆ.

2023-24ರ ಸಾಲಿನಲ್ಲಿ ಪಠ್ಯ ಪುಸ್ತಕದ ಮುದ್ರಣದ ಟೆಂಡರ್‌ 2022ರ ಡಿಸೆಂಬರ್‌ ಹೊತ್ತಿಗೆ ಅಖೈರುಗೊಂಡಿತ್ತು. ಎಪ್ರಿಲ್‌ ಮೊದಲ ವಾರದಲ್ಲೇ ಪಠ್ಯ ಪುಸ್ತಕಗಳ ವಿತರಣೆ ಆರಂಭಗೊಂಡು ಆ ತಿಂಗಳ ಕೊನೆಯ ಹೊತ್ತಿಗೆ ಶೇ. 95ಕ್ಕಿಂತ ಹೆಚ್ಚು ಪಠ್ಯ ಪುಸ್ತಕಗಳು ಶಾಲೆ ಅಥವಾ ಮಕ್ಕಳ ಕೈ ಸೇರಿದ್ದವು. ಆದರೆ 2024-25ರ ಸಾಲಿನ ಟೆಂಡರ್‌ನ ಬಿಡ್ಡಿಂಗ್‌ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.

ಈ ವಿಳಂಬವನ್ನು ಕರ್ನಾಟಕ ಪಠ್ಯ ಪುಸ್ತಕ ಸಂಘದ ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಾರೆ. ಕಳೆದ ವರ್ಷ ನಾವು ಎಪ್ರಿಲ್‌ ಮೊದಲ ವಾರದಲ್ಲೇ ಪಠ್ಯ ಪುಸ್ತಕ ವಿತರಿಸಿದ್ದೇವು. ಆದರೆ ಶಾಲೆ ಆರಂಭಗೊಂಡಾಗ ಹಲವು ಮಕ್ಕಳು ಪುಸ್ತಕವನ್ನು ಹರಿದುಕೊಂಡು, ಕಳೆದುಕೊಂಡು ಶಾಲೆಗೆ ಬಂದಿದ್ದರು. ಆದ್ದರಿಂದ ಈ ವರ್ಷ ಶಾಲೆ ಆರಂಭಕ್ಕೆ ಕೆಲವು ದಿನ ಮುಂಚಿತವಾಗಿ ಪಠ್ಯ ಪುಸ್ತಕ ಹಂಚಿಕೆ ಮಾಡುವ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳುತ್ತಾರೆ.

ದಾಸ್ತಾನಿಗೆ ಸಮಸ್ಯೆ ಆಗಿತ್ತು
ಹಾಗೆಯೇ ಕಳೆದ ವರ್ಷ ವಿಧಾನಸಭಾ ಚುನಾವಣೆಯಿದ್ದ ಹಿನ್ನೆಲೆಯಲ್ಲಿ ಬಹುತೇಕ ಶಾಲೆಗಳು ಮತಕೇಂದ್ರಗಳಾಗಿ ಕಾರ್ಯನಿರ್ವಹಿಸಿದಾಗ ಅಲ್ಲಿ ಪಠ್ಯಪುಸ್ತಕಗಳ ದಾಸ್ತಾನಿಗೆ ಸಮಸ್ಯೆ ಆಗಿತ್ತು. ಈ ವರ್ಷವೂ ಲೋಕಸಭೆ ಚುನಾವಣೆಯಿದ್ದು ಮತ್ತೆ ಶಾಲೆಗಳು ಮತದಾನ ಕೇಂದ್ರಗಳಾಗಿ ಪರಿವರ್ತನೆ ಆಗಲಿವೆ. ಆಗ ಮತ್ತೆ ಪಠ್ಯ ಪುಸ್ತಕಗಳ ದಾಸ್ತಾನಿಗೆ ತೊಂದರೆ ಆಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯಗೊಂಡ ಬಳಿಕವೇ ಪಠ್ಯ ಪುಸ್ತಕ ವಿತರಿಸಿದರೆ ಸೂಕ್ತ ಎಂಬ ನಿರ್ಧರಿಸಲಾಗಿದೆ ಎಂದು ಸಂಘದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Advertisement

ಎಲ್ಲ ಪುಸ್ತಕಗಳೂ ಒಟ್ಟಿಗೆ ಮುದ್ರಣ
ಈ ವರ್ಷ ಶಾಲಾ ಮಕ್ಕಳ ಬ್ಯಾಗ್‌ ಹೊರೆಯನ್ನು ಕಡಿಮೆ ಮಾಡಲು ಪ್ರತಿ ವಿಷಯದ ಪಠ್ಯವನ್ನು ಎರಡು ಪ್ರತ್ಯೇಕ ಪುಸ್ತಕಗಳನ್ನಾಗಿ ವಿಭಾಗಿಸಲಾಗಿದ್ದರೂ ಎಲ್ಲ ಪುಸ್ತಕಗಳು ಒಟ್ಟಿಗೆ ಮುದ್ರಣಗೊಳ್ಳಲಿವೆ. ಶೈಕ್ಷಣಿಕ ವರ್ಷದ ಎರಡನೇ ಭಾಗದ ಪಠ್ಯ ಪುಸ್ತಕವನ್ನು ಮತ್ತೂಮ್ಮೆ ಮುದ್ರಿಸಲು ಮುಂದಾದರೆ ಮುದ್ರಣ ವೆಚ್ಚದ ಜತೆಗೆ ಸಾಗಣೆೆ ವೆಚ್ಚವೂ ಹೆಚ್ಚಳವಾಗಲಿದೆ. ಆದ್ದರಿಂದ ಎಲ್ಲ ಪುಸ್ತಕಗಳೂ ಒಟ್ಟಿಗೆ ಮುದ್ರಣಗೊಳ್ಳಲಿವೆ. ಕಳೆದ ವರ್ಷ ಶೈಕ್ಷಣಿಕ ಚಟುವಟಿಕೆಯ ಆರಂಭದಲ್ಲೇ ಮಕ್ಕಳ ಕೈಯಲ್ಲಿ ಪಠ್ಯ ಪುಸ್ತಕ ಇದ್ದಿದ್ದರಿಂದ ಶೈಕ್ಷಣಿಕ ಚಟುವಟಿಕೆ ಸುಗಮವಾಗಿ ಸಾಗಿತ್ತು. ಈ ವರ್ಷ ಮೇ ಅಂತ್ಯದೊಳಗೆ ಸರಕಾರ ಪಠ್ಯ ಪುಸ್ತಕ ವಿತರಿಸಲು ವಿಫ‌ಲವಾದರೆ ಶೈಕ್ಷಣಿಕ ಚಟುವಟಿಕೆ ಆರಂಭದಲ್ಲೇ ಹಳಿ ತಪ್ಪುವ ಸಾಧ್ಯತೆಯಿದೆ.

ಮಕ್ಕಳಿಗೆ ಡೈರಿ ವಿತರಣೆ
ಕರ್ನಾಟಕ ಪಠ್ಯಪುಸ್ತಕ ಸಂಘ 2024-25ನೇ ಸಾಲಿನ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, 4 ರಿಂದ 9ನೇ ತರಗತಿ ವರ್ಕ್‌ ಬುಕ್‌ ಮತ್ತು 1 ರಿಂದ 12ನೇ ತರಗತಿವರೆಗೆ ರಾಜ್ಯ ಪಠ್ಯಕ್ರಮ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಡೈರಿ ವಿತರಿಸುವ ಟೆಂಡರ್‌ ಕರೆದಿದೆ. ಪಠ್ಯಪುಸ್ತಕಗಳ 861 ಶೀರ್ಷಿಕೆ, 34 ವರ್ಕ್‌ಬುಕ್‌ ಮತ್ತು 2 ಡೈರಿ ಶೀರ್ಷಿಕೆ ಒಳಗೊಂಡಂತೆ ಸುಮಾರು 12.80 ಕೋಟಿ ಪುಸ್ತಕ ಮುದ್ರಣಕ್ಕೆ ಟೆಂಡರ್‌ ಕರೆದಿದೆ. 331 ಕೋಟಿ ರೂ.ಗಳ ಅಂದಾಜು ವೆಚ್ಚದ ಟೆಂಡರ್‌ಗೆ ಇದಾಗಿರಲಿದೆ. ಸದ್ಯ ತಾಂತ್ರಿಕ ಬಿಡ್‌ ಮುಕ್ತಾಯಗೊಂಡಿದ್ದು, ಹಣಕಾಸು ಬಿಡ್‌ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಸದ್ಯ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಮೇ ಕೊನೆಯ ವಾರದಲ್ಲಿ ಪಠ್ಯ ಪುಸ್ತಕ ವಿತರಿಸುತ್ತೇವೆ. ಶಾಲೆ ಪ್ರಾರಂಭದ ಹೊತ್ತಿಗೆ ಮಕ್ಕಳ ಕೈಯಲ್ಲಿ ಪಠ್ಯ ಪುಸ್ತಕ ಇರಲಿದೆ.
– ಎನ್‌. ಮಂಜುಶ್ರೀ, ಪಠ್ಯ ಪುಸ್ತಕ ಸಂಘದ ಮುಖ್ಯಸ್ಥೆ

-ರಾಕೇಶ್‌ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next