Advertisement

ಕೋಟಾದಲ್ಲಿ ಸಿಲುಕಿದ್ದ ರಾಜ್ಯದ ವಿದ್ಯಾರ್ಥಿಗಳು ತವರಿನತ್ತ

11:26 AM Apr 30, 2020 | Suhan S |

ಹುಬ್ಬಳ್ಳಿ: ಐಐಟಿ, ನೀಟ್‌ ಪರೀಕ್ಷೆಗಳ ತರಬೇತಿಗಾಗಿ ತೆರಳಿ ರಾಜಸ್ತಾನದ ಕೋಟಾದಲ್ಲಿ ಸಿಲುಕಿಕೊಂಡು ಊಟಕ್ಕೂ ಪರದಾಡುತ್ತಿದ್ದ ರಾಜ್ಯದ ವಿದ್ಯಾರ್ಥಿಗಳಿಗೆ ಮರಳಿ ತಮ್ಮ ಗೂಡು ಸೇರುವ ಭಾಗ್ಯ ದೊರೆತಿದೆ. ಕರ್ನಾಟಕ ಸರಕಾರದ ಮನವಿಗೆ ಸ್ಪಂದಿಸಿರುವ ರಾಜಸ್ಥಾನ ಸರಕಾರ 162 ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯ ಹಾಗೂ ಭದ್ರತೆ ಕಲ್ಪಿಸಿ ಬುಧವಾರ ಬೆಳಿಗ್ಗೆ ರಾಜ್ಯಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದೆ.

Advertisement

ರಾಜಸ್ಥಾನದ ಕೋಟಾದಲ್ಲಿ ಸೋಂಕಿತರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಕೋಟಾ ಸೀಲ್‌ಡೌನ್‌ ಆಗಿತ್ತು. ಇದರಿಂದಾಗಿ ವಿವಿಧ ಹಾಸ್ಟೆಲ್‌ ಹಾಗೂ ಪಿಜಿಗಳಲ್ಲಿ ತಂಗಿದ್ದ ವಿದ್ಯಾರ್ಥಿಗಳು ಒಪ್ಪತ್ತಿನ ಊಟಕ್ಕೂ ತೊಂದರೆ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ದಿನ ಕಳೆದಂತೆ ಪರಿಸ್ಥಿತಿ ಬಿಗಡಾಯಿಸುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಕರ್ನಾಟಕ ಸರಕಾರಕ್ಕೆ ಮನವಿ ಮಾಡಿ ತಮ್ಮನ್ನು ರಾಜ್ಯಕ್ಕೆ ಕರೆಯಿಸಿಕೊಳ್ಳುವಂತೆ ಅಳಲು ತೋಡಿಕೊಂಡಿದ್ದರು. ಪಿಎಂ, ಸಿಎಂ ಸೇರಿದಂತೆ ಹಲವು ಜನಪ್ರತಿನಿಧಿಗಳಿಗೆ ಟ್ವೀಟ್‌ ಮೂಲಕ ಮನವಿ ಮಾಡಿದ್ದರು. ಕೋಟಾದಲ್ಲಿ ರಾಜ್ಯದ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಂಕಷ್ಟದ ಕುರಿತು “ಉದಯವಾಣಿ’ ರಾಜ್ಯ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು.

ಸ್ಪಂದಿಸಿದ ಸರಕಾರ: ವಿದ್ಯಾರ್ಥಿಗಳ ಸಂಕಷ್ಟಕ್ಕೆ ಸ್ಪಂದಿಸಿದ ರಾಜ್ಯ ಸರಕಾರ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ರಾಜಸ್ಥಾನ ಸರಕಾರದೊಂದಿಗೆ ಪತ್ರ ವ್ಯವಹಾರ ಮಾಡಿ ನಿರಂತರ ಸಂಪರ್ಕ ಸಾಧಿಸಿ 162 ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಕರೆಯಿಸಿಕೊಳ್ಳುವ ಪ್ರಯತ್ನ ಮಾಡಿದೆ. ಅಲ್ಲಿರುವ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಕರೆಯಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯ ಮಾಡುವಂತೆ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್‌.ಯು. ತಳವಾರ ಅವರಿಗೆ ಜವಾಬ್ದಾರಿ ವಹಿಸಲಾಗಿತ್ತು. ನಿರಂತರ ಸಂಪರ್ಕದ ಪರಿಣಾಮ ಅಲ್ಲಿನ ಸರಕಾರ ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಿ, ಸುಮಾರು 8 ಐಷಾರಾಮಿ ಬಸ್‌ಗಳ ಮೂಲಕ ಕಳುಹಿಸಿಕೊಟ್ಟಿದ್ದು, ಬುಧವಾರ ಬೆಳಿಗ್ಗೆ ಎಲ್ಲಾ ವಿದ್ಯಾರ್ಥಿಗಳು ಕೋಟದಿಂದ ಹೊರಟಿದ್ದಾರೆ. ಪ್ರತಿಯೊಂದು ಬಸ್ಸಿನಲ್ಲಿ ಭದ್ರತೆಗಾಗಿ ಅಲ್ಲಿನ ಪೊಲೀಸ್‌ ಸಿಬ್ಬಂದಿ ಇದ್ದಾರೆ. ಅಗತ್ಯವಾದ ನೀರು, ಆಹಾರ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ನೀಡಲಾಗಿದೆ. ಸರಕಾರದ ಆದೇಶದ ಪ್ರಕಾರ ವಿದ್ಯಾರ್ಥಿಗಳು ಬಸ್‌ ಪ್ರಯಾಣದ ವೆಚ್ಚ ಭರಿಸಿದ್ದಾರೆ.

ಎರಡು ಜಿಲ್ಲೆಗಳಿಗೆ ಮಾತ್ರ: ರಾಜ್ಯದ ವಿವಿಧ ಜಿಲ್ಲೆಯ ವಿದ್ಯಾರ್ಥಿಗಳು ಕೋಟಾದಿಂದ ಬರುತ್ತಿದ್ದು, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಳಗಾವಿಗೆ-97 ಹಾಗೂ ಬೆಂಗಳೂರಿಗೆ-65 ವಿದ್ಯಾರ್ಥಿಗಳನ್ನು ತಲುಪಿಸಲಾಗುತ್ತಿದೆ. ಅಲ್ಲಿಂದ ವಿದ್ಯಾರ್ಥಿಗಳನ್ನು ಅವರ ತವರು ಜಿಲ್ಲೆಗಳಿಗೆ ಕಳುಹಿಸುವ ವ್ಯವಸ್ಥೆಯನ್ನು ಅಲ್ಲಿನ ಜಿಲ್ಲಾಡಳಿತ ಕೈಗೊಳ್ಳಲಿದೆ. ಸೋಂಕು ಹೆಚ್ಚಾಗುತ್ತಿರುವ ರಾಜ್ಯದಿಂದ ಸುರಕ್ಷಿತವಾದ ಸ್ಥಳಗಳಿಗೆ ತಮ್ಮ ಮಕ್ಕಳು ತಲುಪಲಿದ್ದಾರೆ ಎನ್ನುವ ಸಮಾಧಾನ ಪಾಲಕರಲ್ಲಿ ಮೂಡಿದೆ.

ಬೆಳಗಾವಿ, ಬೆಂಗಳೂರಲ್ಲಿ ಕ್ವಾರಂಟೈನ್‌!: ಈಗಾಗಲೇ ರಾಜಸ್ಥಾನ ಸರಕಾರ ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಿದ್ದು, ನಿಯಾಮವಳಿ ಪ್ರಕಾರ ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ಮತ್ತೂಮ್ಮೆ ಎಲ್ಲಾ ವಿದ್ಯಾರ್ಥಿಗಳ

Advertisement

ಆರೋಗ್ಯ ತಪಾಸಣೆ ನಡೆಯಲಿದೆ. ಆರೋಗ್ಯ ಇಲಾಖೆ ಶಿಷ್ಠಾಚಾರದ ಪ್ರಕಾರ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿಯನ್ನು ಎ,ಬಿ,ಸಿ ಮಾದರಿಯಲ್ಲಿ ವಿಂಗಡಣೆ ಮಾಡಲಿದ್ದು, ಸಿ ಕೆಟಗರಿ (ಆರೋಗ್ಯ ಪೂರ್ಣ)ಯಲ್ಲಿದ್ದರೆ ಕನಿಷ್ಠ 12 ದಿನ ಆಯಾ ಜಿಲ್ಲೆಗಳಲ್ಲಿ ಕ್ವಾರಂಟೈನ್‌ ಮಾಡಬಹುದು ಎನ್ನಲಾಗುತ್ತಿದೆ. ಈ ಕುರಿತು ಬೆಳಗಾವಿಯ ಜಿಲ್ಲಾಧಿಕಾರಿ, ಬೆಂಗಳೂರಿನ ಬಿಬಿಎಂಪಿ ಆಯುಕ್ತರು ನಿರ್ಧಾರ ಕೈಗೊಳ್ಳಲಿದ್ದಾರೆ. ಬಹುತೇಕ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದೆ ಎನ್ನುವ ಕಾರಣದಿಂದ ಇಲ್ಲಿಗೆ ಕರೆಸಲಾಗುತ್ತಿದ್ದು, ಆರೋಗ್ಯ ಇಲಾಖೆಯ ನಿಯಮಾವಳಿ ಪ್ರಕಾರ ಮುಂದಿನ ಪ್ರಕ್ರಿಯೆ ನಡೆಯಲಿದೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್‌.ಯು. ತಳವಾರ ತಿಳಿಸಿದ್ದಾರೆ.

ಸಂಕಷ್ಟಕ್ಕೆ ಸಿಲುಕಿದ್ದ ನಮ್ಮ ಪರಿಸ್ಥಿತಿಯನ್ನು ಅರಿತ ನಮ್ಮ ಕರ್ನಾಟಕ ಸರಕಾರ ಸೂಕ್ತ ನಿರ್ಧಾರ ಕೈಗೊಂಡು ನಮ್ಮನ್ನು ಕರೆಯಿಸಿಕೊಂಡಿದೆ. ರಾಜಸ್ಥಾನ ಸರಕಾರ ಎಲ್ಲಾ ವ್ಯವಸ್ಥೆಗ ‌ನ್ನು ನೀಡಿ ಸೂಕ್ತ ಭದ್ರತೆಯಲ್ಲಿ ನಮ್ಮ ರಾಜ್ಯಕ್ಕೆ ಕಳುಹಿಸುತ್ತಿದೆ. ಮುಂದೇ ಏನಾಗುತ್ತದೆ ಎನ್ನುವ ಚಿಂತೆಯಲ್ಲಿದ್ದ ನಮ್ಮ ನೆರವಿಗೆ ಆಗಮಿಸಿದ ಎರಡು ಸರಕಾರದ ಅಧಿಕಾರಿಗಳಿಗೆ ಎಲ್ಲಾ ವಿದ್ಯಾರ್ಥಿಗಳು, ಪಾಲಕರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. -ಸ್ನೇಹಾ ಪಾಟೀಲ, ಕೋಟಾದಲ್ಲಿ ಸಿಲುಕಿದ್ದ ವಿದ್ಯಾರ್ಥಿನಿ

ಕೋಟಾದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಕರೆಯಿಸಿಕೊಳ್ಳುವ ನಿಟ್ಟಿನಲ್ಲಿ ಎರಡು ರಾಜ್ಯದ ನಡುವೆ ಪತ್ರ ವ್ಯವಹಾರಗಳು ನಡೆದಿದ್ದವು. ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಈ ಕಾರ್ಯದ ಹೊಣೆ ನೀಡಿದ್ದರು. ವಿದ್ಯಾರ್ಥಿಗಳ, ಪಾಲಕರು ಕರೆ ಮಾಡಿ ಮಾಹಿತಿ ನೀಡಿದ್ದರು. ಇದೀಗ 162 ವಿದ್ಯಾರ್ಥಿಗಳು ರಾಜ್ಯಕ್ಕೆ ಬರುತ್ತಿದ್ದಾರೆ. ಅಲ್ಲಿ ಉಳಿದಿರುವ ವಿದ್ಯಾರ್ಥಿಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲ. -ಎಚ್‌.ಯು.ತಳವಾರ, ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next