Advertisement

ಸಿಎಂ ಬೊಮ್ಮಾಯಿ ಸಂಧಾನ: ಕರ್ನಾಟಕ ಬಂದ್ ಇಲ್ಲ

08:09 AM Dec 31, 2021 | Team Udayavani |

ಬೆಂಗಳೂರು:  ಕರ್ನಾಟಕ ಬಂದ್​ ಹಿಂಪಡೆಯುವಂತೆ ವಾಟಾಳ್ ನಾಗರಾಜ್ ಅವರ ಮನವೊಲಿಸುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ. ಸಿಎಂ ಭೇಟಿ ಬಳಿಕ ಮಾತನಾಡಿರುವ ವಾಟಾಳ್​ ನಾಗರಾಜ್​, ನಾಳೆಯ ಕರ್ನಾಟಕ ಬಂದ್​ ಮುಂದೂಡಲು ನಿರ್ಧಾರ ಮಾಡಲಾಗಿದೆ. ಎಂಇಎಸ್​ ಸಂಘಟನೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ ಹಿನ್ನೆಲೆ ಬಂದ್​ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

Advertisement

ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ನಾವು ಮುಖ್ಯಮಂತ್ರಿಗೆ ಗಡುವು ಕೊಟ್ಟಿಲ್ಲ. ನೀವು ಎಂಇಎಸ್ ನಿಷೇಧ ಮಾಡಲೇಬೇಕು ಅಂತ ಹೇಳಿದ್ದೇವೆ. ನನಗೆ ಈ ಸಲ ಬಂದ್ ಹಿಂಪಡೆಯಲು ಇಷ್ಟವೇ ಇರಲಿಲ್ಲ. ನಾಳೆ ಬಂದ್ ಇಲ್ಲ, ಆದರೆ, ಜನವರಿ 22ಕ್ಕೆ ಕರ್ನಾಟಕ ಬಂದ್ ಮಾಡುತ್ತೇವೆ.  ಮುಖ್ಯಮಂತ್ರಿಯವರು ಎರಡು ಬಾರಿ ಮನವಿ ಮಾಡಿ ನಮ್ಮನ್ನು ಕರೆಸಿದ್ದರು. ಕಾನೂನು ಪ್ರಕಾರ ಎಂಇಎಸ್ ನಿಷೇಧಕ್ಕೆ ಏನೆಲ್ಲಾ ಮಾಡಬೇಕೋ ಅದನ್ನು ಮಾಡ್ತೀನಿ. ಬಂದ್ ಕರೆ ಹಿಂದೆ ಪಡೀರಿ ಅಂತ ಮುಖ್ಯಮಂತ್ರಿ ಹೇಳಿದರು. ಅವರ ಮಾತಿಗೆ ಗೌರವ ಕೊಟ್ಟು, ನಾವು ಒಂದು ತೀರ್ಮಾನ ತೆಗೆದುಕೊಂಡೆವು. ನಾಳೆ ಬಂದ್ ಮಾಡಿದ್ರೆ ಹೊಸವರ್ಷಾಚರಣೆಗೆ ತೊಂದರೆ ಆಗುತ್ತೆ ಅಂತ ಹೇಳಿದ್ರು. ಚಲನಚಿತ್ರ ವಾಣಿಜ್ಯ ಮಂಡಳಿಯವರು ಮೂರು ಚಿತ್ರ ಬಿಡುಗಡೆ ಆಗುತ್ತೆ, ನಮ್ಮ ಬೆಂಬಲ ಇಲ್ಲ ಎಂದು ಹೇಳಿದರು ಎಂದಿದ್ದಾರೆ.

ನನ್ನ ಮೇಲೆ ನಿರಂತರ ಒತ್ತಡ ಇತ್ತು. ಇಂಥ ಒತ್ತಡ ಯಾವತ್ತೂ ಆಗಿರಲಿಲ್ಲ. ಒತ್ತಡದಿಂದ ನನಗೆ ಮಾನಸಿಕವಾಗಿ ಬೇಸರವಾಯ್ತು. ನಾವು ಮಾಡೋಕೆ ಹೊರಟಿರೋದು, ಕನ್ನಡ ನಾಡು ನುಡಿ ಹಾಗೂ ಬಾವುಟಕ್ಕೆ ಅನ್ಯಾಯ ಆಗಿದೆ, ಬೆಂಕಿ ಇಟ್ಟಿದ್ದಾರೆ. ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿದ್ದಾರೆ. ಬಸವಣ್ಣನಿಗೆ ಅವಮಾನ ಆಗಿದೆ ಅಂತ ನಾವು ಬಂದ್ ಮಾಡಲು ಹೊರಟಿದ್ವಿ. ಯಾರ ವಿರುದ್ಧವೂ ಅಲ್ಲ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

‘ನಾವು ನಿಮ್ಮ ಜೊತೆ ಇದ್ದೀನಿ. ಬಂದ್ ಮಾಡಬೇಡಿ’ ಅಂತ ಮುಖ್ಯಮಂತ್ರಿಗಳು ಪ್ರೀತಿ ಮತ್ತು ಅಭಿಮಾನದಿಂದ ಹೇಳಿದರು. ಬಂದ್ ಮಾಡಿದರೆ ರಾಜ್ಯಕ್ಕೆ ಏನೋ ಅನಾಹುತ ಆಗುತ್ತೆ ನಮ್ಮ ಮೇಲೆ ದಬ್ಬಾಳಿಕೆಯ ಮಾತುಗಳೆಲ್ಲ ಬಂದವು. ಯಾರ ಮಾತಿಗೂ ತಲೆ ಕೆಡಿಸಿಕೊಂಡಿರಲಿಲ್ಲ. ಇವತ್ತು ಬೆಳಿಗ್ಗೆಯಿಂದಲೂ ನಮ್ಮ ಒಕ್ಕೂಟದವರು ಬಂದ್ ಬೇಡ ಅಂತ ಒತ್ತಡ ತಂದಿದ್ರು. ಅವರ ಮಾತಿಗೂ ಬೆಲೆ ಕೊಡಬೇಕಾಯಿತು, ಮುಖ್ಯಮಂತ್ರಿಗಳ ಮಾತಿಗೂ ಬೆಲೆ ಕೊಡಬೇಕಾಯಿತು. ಹೀಗಾಗಿ ನಾಳೆ ನಡೆಯಬೇಕಾದ ಬಂದ್ ನಡೆಯುವುದಿಲ್ಲ. ಮುಖ್ಯಮಂತ್ರಿಗಳ ಮಾತಿಗೆ ಬೆಲೆ ಕೊಟ್ಟು ಬಂದ್ ಹಿಂದೆ ಪಡೆದಿದ್ದೇವೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ಎಂಇಎಸ್​ ನಿಷೇಧದ ಬಗ್ಗೆ ಪರಿಶೀಲಿಸುತ್ತೇವೆಸಿಎಂ ಬೊಮ್ಮಾಯಿ:

Advertisement

ವಾಟಾಳ್ ನಾಗರಾಜ್ ಜೊತೆಗೆ ಮಾತನಾಡಿದ್ದೇವೆ. ಕನ್ನಡ ರಕ್ಷಣೆ ಬಗ್ಗೆ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕನ್ನಡದ ರಕ್ಷಣೆಗಾಗಿ ನಮ್ಮ ಸರ್ಕಾರ ನಿಮ್ಮ ಜೊತೆಗೆ ಗಟ್ಟಿಯಾಗಿ ನಿಲ್ಲುತ್ತದೆ ಅಂತ ಹೇಳಿದ್ದಾರೆ. ನನ್ನ ಮನವಿಗೆ ಸ್ಪಂದಿಸಿ, ಬಂದ್ ಕರೆ ಹಿಂಪಡೆದಿರುವ ಅವರ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಎಂಇಎಸ್ ನಿಷೇಧದ ಬಗ್ಗೆ ಕಾನೂನು ಪ್ರಕಾರ ಪರಿಶೀಲಿಸುತ್ತಿದ್ದೇವೆ. ಈ ಹಿಂದೆಯೂ ಈ ಮಾತು ಹೇಳಿದ್ದೆ. ಈಗ ಮತ್ತೊಮ್ಮೆ ಪುನರುಚ್ಚರಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಂದ್ ಮುಂದೂಡಿಕೆಯಾಗಿದೆಯೇ ವಿನಃ ವಾಪಾಸ್ ಪಡೆದಿಲ್ಲ:
ನಾವು ಕರ್ನಾಟಕ ಬಂದ್ ಹಿಂಪಡೆದಿಲ್ಲ, ಮುಂದೂಡಿದ್ದೇವೆ. ಮುಂದೆ ಯಾವ ದಿನ ಕರ್ನಾಟಕ ಬಂದ್ ಆಚರಿಸುತ್ತೇವೆಂಬ ದಿನಾಂಕವನ್ನು ತಿಳಿಸ್ತೇವೆ. ಇನ್ನೆರೆಡು ದಿನಗಳಲ್ಲಿ ಸಭೆ ಕರೆದು ಹೋರಾಟ ಹೇಗೆ ಮಾಡಬೇಕು ಎಂಬ ತೀರ್ಮಾನ ಪ್ರಕಟಿಸುತ್ತೇನೆ ಎಂದು ಕನ್ನಡಪರ ಸಂಘಟನೆಯ ನಾಯಕ ಕೆ. ಆರ್​. ಕುಮಾರ್ ಹೇಳಿದ್ದಾರೆ. ಅಲ್ಲದೆ, ಕನ್ನಡಪರ ಸಂಘಟನೆಗಳ ಒಕ್ಕೂಟ 250ಕ್ಕೂ ಹೆಚ್ಚು ಸಂಘಟನೆಗಳು ನಾಳೆಯ ಬಂದ್​ಗೂ ಬೆಂಬಲ ನೀಡಿದ್ದೆವು. ಅವರು ಮುಂದೆ ದಿನಾಂಕ ನಿಗದಿ ಮಾಡಿದರೂ ನಮ್ಮ ಬೆಂಬಲ ಇರುತ್ತೆ. ಎಂಇಎಸ್ ನಿಷೇಧ ಮಾಡದಿದ್ದರೆ ಜನವರಿ 22ರಂದು ಬಂದ್ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next