Advertisement

ಶತಕ ದಾಟಿದವರು ಜೇಷ್ಠತೆ ಪಟ್ಟಿಗೆ

10:17 AM Aug 27, 2019 | Team Udayavani |

ಬೆಂಗಳೂರು: ಸಾಮಾನ್ಯವಾಗಿ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ನೌಕರರು ಬಡ್ತಿಗಾಗಿ ಇನ್ನಿಲ್ಲದ ಕಸರತ್ತು ನಡೆಸಬೇಕು. ಆದರೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ (ಕೆಎಸ್‌ಆರ್‌ಟಿಸಿ) ಶತಮಾನದ ಹಿಂದೆ ಕಾರ್ಯನಿರ್ವಹಿಸಿದ ಮತ್ತು ಮುಂದೆ ಕಾರ್ಯನಿರ್ವಹಿಸಲಿರುವವರಿಗೆಲ್ಲಾ ಬಡ್ತಿ ಭಾಗ್ಯ ಸಿಗಲಿದೆ!

Advertisement

1900ರ ಆರಂಭದಲ್ಲಿ ಜನಿಸಿ, ನಂತರದಲ್ಲಿ ನಿಗಮದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು ಹಾಗೂ 2019-20ರ ನಂತರ ಹುಟ್ಟಲಿರುವವರಿಗೆಲ್ಲಾ ಜೇಷ್ಠತಾ ಪಟ್ಟಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ. ಪಟ್ಟಿ ಪ್ರಕಾರ ನೂರಾರು ನೌಕರರ ಜನ್ಮದಿನಾಂಕ 1904ರಿಂದ 1920ರ ಆಸುಪಾಸು ಇದೆ. ಅವರಿಗೆ ಈಗ ನೂರು ವರ್ಷ ತುಂಬಿದೆ. ಇನ್ನು ಕೆಲವರು 2011ರಿಂದ 2019ರ ಅವಧಿಯಲ್ಲಿ ಹುಟ್ಟಿದವರೂ ಇದ್ದಾರೆ. ಅಂದರೆ ಅವರಿಗೆಲ್ಲಾ ಗರಿಷ್ಠ 18ರಿಂದ ಕನಿಷ್ಠ ಒಂದು ವರ್ಷ ಇರಬಹುದು. 2023 ಮತ್ತು 2029ರ ಜನ್ಮದಿನಾಂಕವನ್ನೂ ನಮೂದಿಸಿ, ಜೇಷ್ಠತೆಗೆ ಅರ್ಹರಾದ ನೌಕರರ ಹೆಸರನ್ನೂ ಉಲ್ಲೇಖೀಸಲಾಗಿದೆ.

ಕೆಎಸ್‌ಆರ್‌ಟಿಸಿ ಪ್ರಕಟಿಸಿರುವ ಪರಿಷ್ಕೃತ- ಅಂತಿಮ ಪಟ್ಟಿಯಲ್ಲೇ ಈ ಚಮತ್ಕಾರ ನಡೆದಿದೆ. ಬಿ.ಕೆ. ಪವಿತ್ರ ಮತ್ತು ಇತರರು ವಿರುದ್ಧ ಯೂನಿಯನ್‌ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಹಾಗೂ ಅದನ್ನು ಆಧರಿಸಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಅನ್ವಯ 1978ರಿಂದ ಈವರೆಗಿನ ಅವಧಿಯ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಿದೆ. ವಿಚಿತ್ರವೆಂದರೆ ಇನ್ನೂ ಸಾರಿಗೆ ನಿಗಮವೇ ಅಸ್ತಿತ್ವಕ್ಕೆ ಬಂದಿರದ ದಿನಗಳಲ್ಲೇ ಈ ‘ಫ‌ಲಾನುಭವಿ’ಗಳು ನೇಮಕಗೊಂಡಿದ್ದಲ್ಲದೆ, ನೈಜ ಮತ್ತು ಅರ್ಹತಾ ದಿನಾಂಕವನ್ನೂ ಪ್ರಕಟಿಸಲಾಗಿದೆ. ಪರಿಷ್ಕೃತ ಪಟ್ಟಿಗೆ ಹೆಚ್ಚಾಗಿ ಆಕ್ಷೇಪಣೆ ಬಾರದ ಹಿನ್ನೆಲೆಯಲ್ಲಿ ಅಂತಿಮ ಪಟ್ಟಿ ಹೆಚ್ಚು-ಕಡಿಮೆ ಯಥಾವತ್ತಾಗಿ ಪ್ರಕಟಗೊಂಡಿದೆ.

1978ರಿಂದ ಈವರೆಗೆ ಸೇವೆ ಸಲ್ಲಿಸಿದವರೆಲ್ಲರನ್ನೂ ಒಳಗೊಂಡ ಪಟ್ಟಿ ಇದಾಗಿದ್ದರಿಂದ, ಆ ಸಿಬ್ಬಂದಿಯ ಜನ್ಮದಿನಾಂಕ, ನೈಜ ಮತ್ತು ಅರ್ಹತಾ ದಿನಾಂಕವನ್ನೂ ಪ್ರಕಟಿಸಲಾಗಿದೆ.

ಮುಂದಿನ ದಿನಗಳಲ್ಲಿ ಸಿಬ್ಬಂದಿಗೆ ನೀಡಲಾಗುವ ಬಡ್ತಿ ವೇಳೆ ನಿಗಮವು ಪಟ್ಟಿಯನ್ನೇ ಪರಿಗಣಿಸಲಿದೆ ಎಂದು ಆಡಳಿತ ಅಧಿಕಾರಿಯೊಬ್ಬರು ‘ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ. ಅದರಂತೆ ಉಗ್ರಾಣ ರಕ್ಷಕ, ಉಗ್ರಾಣ ಅಧೀಕ್ಷಕ, ಸಹಾಯಕ ಸಂಚಾರ ಅಧೀಕ್ಷಕ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಕಾರ್ಯನಿರ್ವ ಹಿಸಿದವರಿಗೆ ಈ ಭಾಗ್ಯ ದೊರಕಿದೆ.

Advertisement

ಆದರೆ, ಈ ಪಟ್ಟಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಪೇಚೆಗೆ ಸಿಲುಕಿಸಿದೆ. ದಿನವಿಡೀ ಅವರೆಲ್ಲಾ ಪಟ್ಟಿಯಲ್ಲಿ ತಮ್ಮ ಹೆಸರು ಎಷ್ಟನೇ ಸ್ಥಾನದಲ್ಲಿದೆ ಎಂದು ತಡಕಾಡುತ್ತಿದ್ದಾರೆ. ಕೆಲವು ಹುಡುಕುವಲ್ಲಿ ಯಶಸ್ವಿಯಾಗಿದ್ದರೆ, ಇನ್ನು ಹಲವರು ಪ್ರಯತ್ನ ಮುಂದುವರಿಸಿದ್ದಾರೆ.

ಅಂದಹಾಗೆ, ನಿಗಮದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಅಂತಿಮ ಜೇಷ್ಠತಾ ಪಟ್ಟಿಯಲ್ಲಿ ಸುಮಾರು 12ರಿಂದ 13 ವಿಭಾಗಗಳಿದ್ದು, ಆಯಾ ವಿಭಾಗವಾರು ದರ್ಜೆ-1, 2 ಮತ್ತು 3ರಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಪ್ರತ್ಯೇಕ ಪಟ್ಟಿ ಇದೆ. ಅದರಲ್ಲಿ ಈ ಅಧ್ವಾನಗಳನ್ನು ಕಾಣಬಹುದು.

ಪಾರದರ್ಶಕತೆ ಅನುಮಾನ?: ಜೇಷ್ಠತಾ ಪಟ್ಟಿಯೇ ಹೀಗೆ ಗೊಂದಲಮಯವಾಗಿದೆ. ಇನ್ನು ಇದರ ಪ್ರಕಾರ ಮುಂದಿನ ದಿನಗಳಲ್ಲಿ ನೀಡಲಿರುವ ಬಡ್ತಿ ಎಷ್ಟರಮಟ್ಟಿಗೆ ಪಾರದರ್ಶಕವಾಗಿರುತ್ತದೆ ಎಂಬ ಅನುಮಾನ ಸಿಬ್ಬಂದಿಯಿಂದ ವ್ಯಕ್ತವಾಗುತ್ತಿದೆ.

‘ರಾಜ್ಯದ ಜೇಷ್ಠತಾ ಪಟ್ಟಿ ಇದಾಗಿದೆ. ಇದರಲ್ಲಿ ಯಾರು ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಸ್ಪಷ್ಟತೆ ಇಲ್ಲ. ಅಲ್ಲದೆ, ಪಟ್ಟಿಯಲ್ಲಿ ನಮಗೆ ನೀಡಿರುವ ಸ್ಥಾನಮಾನ ಎಷ್ಟು ಸರಿ ಇದೆ ಎಂಬುದು ಗೊತ್ತಿಲ್ಲ. ಬಡ್ತಿ ನೀಡುವಾಗ, ನಮ್ಮ ದಾಖಲೆಗಳೆಲ್ಲವನ್ನೂ ಕಳುಹಿಸಿರು ತ್ತೇವೆ. ಆದರೆ, ನಮಗೆ ಬಡ್ತಿ ನೀಡುವವರಿಗೆ ಮಾತ್ರ ಇದೆಲ್ಲದರ ಮಾಹಿತಿ ಇರುತ್ತದೆ. ಯಾವ ಆಧಾರದಲ್ಲಿ ಬಡ್ತಿ ನೀಡುತ್ತಿದ್ದಾರೆ ಎಂಬುದು ಹೇಗೆ ಗೊತ್ತಾಗುತ್ತದೆ? ಹಾಗಾಗಿ, ಇಡೀ ಪ್ರಕ್ರಿಯೆ ಅನುಮಾನಗಳಿಗೆ ಅವಕಾಶ ಮಾಡಿಕೊಡುತ್ತಿದೆ’ ಎಂದು ಹೆಸರು ಹೇಳಲಿಚ್ಛಿಸದ ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ‘ಉದಯವಾಣಿ’ಗೆ ತಿಳಿಸಿದರು.

ಈ ಪ್ರಕ್ರಿಯೆ ಅಗತ್ಯ-ಅನಿವಾರ್ಯ?
ನೇರ ನೇಮಕಾತಿ, ಬಡ್ತಿ ಪ್ರಮಾಣಗಳಲ್ಲಿ ವೃಂದ ನಿರ್ವಹಣೆ ಸಲುವಾಗಿ ಈ ರೀತಿಯ ಪ್ರಕ್ರಿಯೆ ಅನುಸರಿಸುವುದು ಅನಿವಾರ್ಯ ಮತ್ತು ಅತ್ಯವಶ್ಯಕ. ಇದನ್ನು ಎಲ್ಲ ಇಲಾಖೆಗಳೂ ಅಳವಡಿಸಿಕೊಂಡಿರುತ್ತವೆ. ಕೂಡ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ನಿವೃತ್ತರಾದವರು, ನಿಧನರಾದವರೂ ಸೇರಿದಂತೆ ಎಲ್ಲರನ್ನೂ ಪಟ್ಟಿ ಒಳಗೊಂಡಿರಬೇಕಾಗುತ್ತದೆ. ಇಲ್ಲವಾದರೆ, ಕೆಲವರು ಅವಕಾಶಗಳಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ. ಇನ್ನು ಆ ಕಾಲದಲ್ಲಿ ಕೆಎಸ್‌ಆರ್‌ಟಿಸಿ ಅಸ್ತಿತ್ವದಲ್ಲಿ ಇಲ್ಲದಿರಬಹುದು. ಆದರೆ, ಮೈಸೂರು ಸರ್ಕಾರದ ಸಾರಿಗೆ ಪ್ರಾಧಿಕಾರ ಇತ್ತು. ಆ ಅವಧಿಯಲ್ಲಿ ಕೆಲಸ ಮಾಡಿದವರನ್ನೂ ಇಲ್ಲಿ ಸೇರಿಸಬೇಕಾಗುತ್ತದೆ. ಮೇಲ್ನೋಟಕ್ಕೆ ಗೊಂದಲ ಎನಿಸಿದರೂ, ಈ ಪ್ರಕ್ರಿಯೆ ಅನಿವಾರ್ಯ ಎಂದು ಸ್ಪಷ್ಟಪಡಿಸಿದ್ದಾರೆ.

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next