Advertisement

ಕೋಟ್ಯಂತರ ಜನರ ಜೀವನಾಡಿಯಾಗಿರುವ ಜನಪ್ರಿಯ KSRTC ಆರಂಭಗೊಂಡಿದ್ದು ಹೇಗೆ ?

09:55 AM Nov 20, 2019 | Mithun PG |

ಕರ್ನಾಟಕ ರಾಜ್ಯದ ಕೋಟ್ಯಂತರ ಜನರಿಗೆ ಸಮರ್ಪಕ ಸಾರಿಗೆ ಸೌಲಭ್ಯ ಒದಗಿಸುತ್ತಿರುವ ಕೀರ್ತಿ ಕೆ.ಎಸ್.ಆರ್.ಟಿ.ಸಿ ಗೆ ಸಲ್ಲುತ್ತದೆ. ಪ್ರತಿಯೊಬ್ಬರೂ ಒಂದಲ್ಲಾ ಒಂದು ದಿನ  ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಪ್ರಯಾಣ ಮಾಡಿಯೇ ಇರುತ್ತಾರೆ. ಶಾಲಾ ದಿನಗಳ ಪ್ರವಾಸಕ್ಕಾಗಿ, ರಜೆಯ ಮಜಾ ಕಳೆಯಲು ದೂರದೂರಿನ ಪ್ರಯಾಣಕ್ಕೆ, ಮದುವೆ ಸಮಾರಂಭಕ್ಕೆ ಈ ಬಸ್ ಹೇಳಿ ಮಾಡಿಸಿದಂತಿದೆ. ನಗರಗಳಿಂದ ಹಿಡಿದು ಹಳ್ಳಿಗಳವರೆಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿರುವ ಈ ಸಾರಿಗೆ ಸಂಸ್ಥೆಯು ಉದಯವಾದುದ್ದೇ ಒಂದು ರೋಚಕ ಕಥನ.

Advertisement

1948ರಲ್ಲಿ ಮೈಸೂರು ಪ್ರಾಂತ್ಯವನ್ನು, ಸಾರ್ವಜನಿಕರಿಗೆ ಸಮರ್ಪಕ ಸಾರಿಗೆ ಸಂಪರ್ಕ ಸೌಲಭ್ಯ ಒದಗಿಸಲು ಮೈಸೂರು ಸರ್ಕಾರ ರಸ್ತೆ ಸಾರಿಗೆ ಇಲಾಖೆ (MGRTD)ಯನ್ನು 120 ವಾಹನಗಳೊಂದಿಗೆ ಆರಂಭಮಾಡಿತು. ಇದು ಮೈಸೂರು ಸರ್ಕಾರದ ಒಂದು ಇಲಾಖೆಯಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೇ 1961ರಲ್ಲಿ ಇದನ್ನು ರಸ್ತೆ ಸಾರಿಗೆ ನಿಗಮ ಕಾಯ್ದೆಯ ಅನ್ವಯ ಸ್ವತಂತ್ರ ಸಂಸ್ಥೆಯನ್ನಾಗಿ ಪರಿವರ್ತಿಸಲಾಯಿತು. MGRTDಯ ಆಸ್ತಿ ಮತ್ತು ಋಣಭಾರವನ್ನು ಹೊಸ ಸಂಸ್ಥೆಗೆ ವರ್ಗಾಯಿಸಲಾಯಿತು ಮಾತ್ರವಲ್ಲದೆ ಸಂಸ್ಥೆಯನ್ನು ಎಂ.ಎಸ್.ಆರ್.ಟಿ.ಸಿ ಎಂದು ನಾಮಕರಣ ಮಾಡಲಾಯಿತು. ಇದರಿಂದಾಗಿ ಇಡೀ ರಾಜ್ಯಕ್ಕೆ ಒಂದೇ ಸಂಸ್ಥೆಯನ್ನು ಸ್ಥಾಪಿಸಿದಂತಾಗುತ್ತದೆ. ಭಾರತ ಸರ್ಕಾರವೂ ಕೂಡ ಈ ಸಂಸ್ಥೆಯಲ್ಲಿ ಹೂಡಿಕೆ ಹೊಂದಿದೆ.

ನವೆಂಬರ್ 1.1973ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ಮರುನಾಮಕರಣ ಮಾಡಲಾಗುತ್ತದೆ. ಅದರ ಜೊತೆಗೆ ಎಂ.ಎಸ್.ಆರ್.ಟಿ.ಸಿಯನ್ನು ಕೆ.ಎಸ್.ಆರ್.ಟಿ.ಸಿ ಎಂದು ಕರೆಯಲಾಗುತ್ತದೆ.  1997ರವರೆಗೂ ಕ.ರಾ.ರ.ಸಾ.ನಿಗಮವು 10,400 ಬಸ್ ಗಳನ್ನು 9500 ಮಾರ್ಗಗಳಲ್ಲಿ ನಡೆಸುತ್ತಿತ್ತು. 1997 ರಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನ್ನು(ಬಿಎಂಟಿಸಿ) ಸ್ವತಂತ್ರ ಸಂಸ್ಥೆಯನ್ನಾಗಿ ಮಾಡಲಾಯಿತು. ಇದು ಕ.ರಾ.ರ.ಸಾ.ನಿಗಮದ ಮೊದಲ ವಿಭಾಗೀಕರಣ. 1997ರಲ್ಲೇ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವನ್ನು ವಾಯುವ್ಯ ಕರ್ನಾಟಕದ ಸೇವೆಗೆಂದು ಪ್ರಾರಂಭಿಸಲಾಯಿತು. ಅದಾದ ನಂತರ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವನ್ನು ಈಶಾನ್ಯ ಕರ್ನಾಟಕದ ಸೇವೆಗೆಂದು ಆರಂಭಿಸಲಾಯಿತು.

ಕೆ.ಎಸ್.ಆರ್.ಟಿ.ಸಿ ಯ ಮುಖ್ಯ ಕಛೇರಿ ಬೆಂಗಳೂರಿನ ಶಾಂತಿನಗರದಲ್ಲಿದೆ. ಈ ಸಂಸ್ಥೆ ಕರ್ನಾಟಕದ 17 ಜಿಲ್ಲೆಯಲ್ಲಿ ತನ್ನ ಕಾರ್ಯ ವ್ಯಾಪ್ತಿಯನ್ನು ಹೊಂದಿದೆ. 16 ಕಾರ್ಯನಿರ್ವಹಣಾ ವಿಭಾಗ. 79 ಡಿಪೋಗಳು, ಗ್ರಾಮೀಣ ತರಬೇತಿ ಸಂಸ್ಥೆಗಳು,  ಮುದ್ರಣಾಲಯ ಮತ್ತು  ಆಸ್ಪತ್ರೆಯನ್ನು ಒಳಗೊಂಡಿದೆ.

ಕೆ.ಎಸ್.ಆರ್.ಟಿ.ಸಿಯಲ್ಲಿ 37 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಪ್ರತಿನಿತ್ಯ ಒಂದು ಊರಿಂದ ಮತ್ತೊಂದು ಊರಿಗೆ 74 ಲಕ್ಷ ಪ್ರಯಾಣಿಕರು ಇದರಲ್ಲಿ ಸಂಚರಿಸುತ್ತಾರೆ. ಮಾತ್ರವಲ್ಲದೆ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ಕೇರಳ, ಪುದುಚೇರಿ, ತಮಿಳುನಾಡು ಮಹಾರಾಷ್ಟ್ರ, ಗೋವಾ, ತೆಲಂಗಾಣದಲ್ಲಿ ಕೂಡ ಈ ಸಂಸ್ಥೆಯ ಬಸ್ ಗಳು ಸಂಚರಿಸುತ್ತದೆ.

Advertisement

2005ರಲ್ಲಿ ಕೆ.ಎಸ್.ಆರ್.ಟಿ.ಸಿ ವೋಲ್ವೋ ಬಸ್ ಗಳನ್ನು ಪರಿಚಯಿಸುತ್ತದೆ. ಭಾರತದಲ್ಲಿ ವೋಲ್ವೋ ಹವಾನಿಯಂತ್ರಿತ ಬಸ್ ಗಳನ್ನು ಮೊಟ್ಟಮೊದಲ ಬಾರಿಗೆ ಬಳಸಿದ್ದು ಮತ್ತು ಪರಿಚಯಿಸಿದ  ಹೆಗ್ಗಳಿಕೆ ಈ ಸಂಸ್ಥೆಗೆ ಸಲ್ಲುತ್ತದೆ. ಪ್ರಸ್ತುತ  ಟಾಟಾ, ವೋಲ್ವೋ, ಅಶೋಕ್ ಲೈಲ್ಯಾಂಡ್, ಐರಾವತ, ಮರ್ಸಿಡೀಸ್ ಬೆಂಜ್, ರಾಜಹಂಸ, ಶೀತಲ್, ಮಯೂರ, ಮೇಘದೂತ, ಅಂಬಾರಿ,ಪ್ಲೈ ಬಸ್ ಮುಂತಾದ ಹಲವು ಸೇವೆಗಳನ್ನು ಹೊಂದಿದೆ.

ವರದಿಯೊಂದರ ಪ್ರಕಾರ ದೇಶದಲ್ಲೇ ಅತೀ ಹೆಚ್ಚು ಗುಣಮಟ್ಟತೆಯನ್ನು ಹೊಂದಿದ ಬಸ್ ಇದಾಗಿದೆ. ಸಂಸ್ಥೆಯ ಅಷ್ಟು ಉದ್ಯೋಗಿಗಳು ರಾತ್ರಿ ಹಗಲೆನ್ನದೆ ಪ್ರಯಾಣಿಕರನ್ನು ಕರೆದೊಯ್ಯುತ್ತಾರೆ. ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ವೃದ್ಧರಿಗೆ, ಸೈನಿಕರಿಗೆ ಆಸನಗಳ ಕಾಯ್ದಿರುಸುವಿಕೆ ಸೌಲಭ್ಯಗಳು ಈ ಬಸ್ ನಲ್ಲಿ ಕಂಡುಬರುವುದು ವಿಶೇಷ. ಈ ರೀತಿ 1948 ರಿಂದ ಆರಂಭವಾದ ಈ ಸಾರಿಗೆ ಸಂಸ್ಥೆ ಇವತ್ತಿಗೂ ಹಲವಾರು ಭಾಗಗಳಲ್ಲಿ ಕೋಟ್ಯಂತರ ಜನರ ಜೀವನಾಡಿಯಾಗಿದೆ.

ಮಿಥುನ್ ಮೊಗೇರ

Advertisement

Udayavani is now on Telegram. Click here to join our channel and stay updated with the latest news.

Next