ಬಾಗಲಕೋಟೆ: ಸದ್ಯ ಅಧಿಕಾರದಲ್ಲಿ ಇರುವ ಬಿಜೆಪಿ ಸೇದಿ ಎಸೆದ ಬೀಡಿ ಇದ್ದಂತೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನ ಬಿಟ್ಟಾಗ, ಶೈವತ್ವ ಬಿಡಿ, ವೀರತ್ವ ಇಟ್ಟುಕೊಂಡು ಹೊರಬನ್ನಿ ಎಂದು ಹೇಳಿದ್ದೆ. ತಕ್ಷಣ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದರು. ಇಲ್ಲದಿದ್ದರೆ ಕೇಶವ ಕೃಪಾದವರು ಸಿಎಂ ಆಗುತ್ತಿದ್ದರು. ಯಡಿಯೂರಪ್ಪ ಅವರನ್ನು ಕೈಬಿಟ್ಟು, ಬಿಜೆಪಿ ವೀರತ್ವ ಕಳೆದುಕೊಂಡಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ವ್ಯಂಗ್ಯವಾಡಿದರು.
ನಗರದ ಜೆಡಿಎಸ್‌ಕಚೇರಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಯಾವಾಗ ಯಡಿಯೂರಪ್ಪ ಅವರನ್ನು ತೆಗೆದರೋ, ಆಗ ಬಿಜೆಪಿಯದ್ದು ಮುಗಿಯಿತು ಎಂದರು.
ಭಾರತದ ಇತಿಹಾಸದಲ್ಲೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕ ಬಿಜೆಪಿಗೆ ಮೊದಲ ಪ್ರಾಶಸ್ತ್ಯದ ಮತ ಹಾಕಿಸಿದ್ದು ಎಂದೂ ನೋಡಿಲ್ಲ. ಸೋನಿಯಾ ಗಾಂಧಿಗೆ ಪತ್ರ ಬರೆದರೂ ಈ ಬಗ್ಗೆ ಪ್ರತ್ಯುತ್ತರ ನೀಡಿಲ್ಲ. ಈ ಬಗ್ಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಎಲ್ಲೂ ಉತ್ತರ ಕೊಡುತ್ತಿಲ್ಲ.. ಹಾಗಾದರೆ ಬಿಜೆಪಿಯ ಬಿ ಟೀಮ್ ಯಾರು ಅಂತ ಜನ ತೀರ್ಮಾನ ಮಾಡುತ್ತಾರೆ ಎಂದರು.
ನನ್ನಿಂದ ಕಾಂಗ್ರೆಸ್‌ಗೆ ಹೆಲ್ಪ್ ಆಗಿಲ್ವಾ: ಒಂದು ರೂಪಾಯಿ ತೆಗೆದುಕೊಂಡರೆ ಚಿಲ್ಲರೆ ಎಷ್ಟು ಕೊಡಬೇಕು. ನೂರು ಪೈಸೆ ಮರಳಿ ಕೊಡಬೇಕು. ಕೇವಲ 25 ಪೈಸೆ ಚಿಲ್ಲರೆ ಕೊಟ್ಟರೆ ಹೇಗೆ ಎಂದು ತಮಗೆ ಸರಿಯಾದ ಸ್ಥಾನಮಾನ ಕೊಡದ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದರು. ಈಗ ನಾನು ಎಂಎಲ್‌ಸಿ ಸ್ಥಾನ ಬಿಟ್ಟೆ. ಹಾಗೆಯೇ ನೀವರೆಲ್ಲರೂ ಶಾಸಕರ ಸ್ಥಾನ ಬಿಡ್ರಿ ನೋಡೋಣ ಎಂದು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು. ಸಿದ್ದರಾಮಯ್ಯ ಅವರ ಆಯ್ಕೆಯಲ್ಲಿ ನನ್ನ ಪಾತ್ರವೂ ಇದೆ. ಅಲ್ಪ ಸಂಖ್ಯಾತರ ಮತಗಳು, ಕಾಂಗ್ರೆಸ್‌ಗೆ ಬಂದಿಲ್ವಾ. ನನ್ನನ್ನು ಇಷ್ಟಪಡುವ ಲಿಂಗಾಯಿತರು, ಬೇರೆ ಧರ್ಮದವರು ಮತ ಹಾಕಿಲ್ಲವೇ ಎಂದು ಪ್ರಶ್ನಿಸಿದ ಅವರು, ಮೂರು ವರ್ಷಕ್ಕೆ ಎಂಎಲ್ ಸಿ ಸ್ಥಾನ ಮುಖಕ್ಕೆ ಕೊಟ್ಟು ಬಂದೆ. ನಿಮ್ಮ ಎಂಎಲ್‌ಸಿ ನೀವೇ ಇಟ್ಟುಕೊಳ್ಳಿ ಎಂದು ತಲಾಕ್ ನೀಡಿ ಬಂದೆ ಎಂದರು. ಇಂದಿಗೂ ಸಿದ್ದರಾಮಯ್ಯ ಅವರ ಮೇಲೆ ಅಷ್ಟೆ ಪ್ರೀತಿ ಇದೆ. ಅವರನ್ನು ನೋಡಿದರೆ ತಬ್ಬಲಿ ನೀನಾದೆಯಾ ಮಗನೆ ಅಂತ ಅನುಕಂಪ ಇದೆ. ಸಿದ್ದರಾಮಯ್ಯ ಬಗ್ಗೆ ವ್ಯಂಗ್ಯವಾಡಿದರು.
ಗುಜರಾತ್ ರಾಜ್ಯದ ಜತೆ ಕರ್ನಾಟಕ ಚುನಾವಣೆ ನಡೆಯಲಿದೆ. ಜಿಪಂ, ತಾಪಂ ಚುನಾವಣೆಯನ್ನು ಬಿಜೆಪಿ ಸರ್ಕಾರ ನಡೆಸಲ್ಲ. ಗುಜರಾತ್ ಚುನಾವಣೆ ಟೈಂ ನಲ್ಲೇ ಕರ್ನಾಟಕ ಚುನಾವಣೆ ಮಾಡುತ್ತಾರೆ ಎಂದರು.
ಮಮತಾ ಬ್ಯಾನರ್ಜಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರೆ ಕೇಂದ್ರದಲ್ಲಿ ಯಾವಾಗಲೋ ಬದಲಾವಣೆ ಆಗುತ್ತಿತ್ತು. ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಅನ್ನುತ್ತದೆ. ಆದರೆ, ಬಾಕಿ ಎಲ್ಲ ಇಂಜಿನ್ ಫೇಲ್ ಆಗಿವೆ. ಕಾಂಗ್ರೆಸ್ ಪಕ್ಷದ ನಿಶ್ಯಕ್ತಿಯೇ ಬಿಜೆಪಿಗೆ ಅವಕಾಶ ಆಯಿತು. ಅಲ್ಲಿ ಮಾತನಾಡುವವರಿಗೆ ಅವಕಾಶ ಇಲ್ಲ. ಶರದ್ ಪವಾರ್, ಮಮತಾ ಬ್ಯಾನರ್ಜಿ, ಕೇಜ್ರಿವಾಲ್, ನಿತೀಶಕುಮಾರ್ ಇಂತವರಿಗೆ ಮುಂದೆ ಬಿಟ್ಟಿದ್ರೆ ಯಾವಾಗಲೋ ಬದಲಾವಣೆ ಆಗುತ್ತಿತ್ತು ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಏನಾಯಿತು. ಎಲ್ಲರೂ ಮುಗಿದ್ದು, ಆ ತಾಯಿ ಒಬ್ಬರನ್ನು ಏನು ಮಾಡಲು ಆಗಲ್ಲ. ಮಮತಾ ಬ್ಯಾನರ್ಜಿ ಪಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ರೆ ಭಾರತದ ಭವಿಷ್ಯವೇ ಬದಲಾಗುತ್ತಿತ್ತು. ಹೋಗಲಿ ಶರದ್ ಪವಾರ್, ಕಪಿಲ್ ಸಿಬಲ್ ಅಥವಾ ಸಚಿನ್ ಫೈಲಟ್ ಅವರಿಗೆ ಅವಕಾಶ ಕೊಡಬೇಕು. ಜನರಿಗೆ ಬದಲಾವಣೆ ಬೇಕಿದೆ. ಜೆಡಿಎಸ್ ತೃತೀಯ ರಂಗದಲ್ಲಿದೆ. ಮೊನ್ನೆ ತಾನೇ ದೇವೇಗೌಡರು ತೃತೀಯ ರಂಗದ ಸಭೆಗೆ ಹೋಗಿ ಬಂದಿದ್ದಾರೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಸಲೀಮ ಮೋಮಿನ್, ವೀರೇಂದ್ರ ಶೀಲವಂತ ಮುಂತಾದವರು ಉಪಸ್ಥಿತರಿದ್ದರು.