Advertisement

ಮುಕ್ತ ವಿವಿಯಲ್ಲಿ 15 ಕೋರ್ಸ್‌ಗಳಿಗಿಲ್ಲ ಮಾನ್ಯತೆ

06:00 AM Aug 11, 2018 | Team Udayavani |

ಮೈಸೂರು: ಯುಜಿಸಿ ಮಾನ್ಯತೆ ಇಲ್ಲದೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನೇ ಮಸುಕಾಗಿಸಿ, ಡೋಲಾಯಮಾನ ಸ್ಥಿತಿಯಲ್ಲಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯಕ್ಕೆ ವಿವಿ ಧನ ಸಹಾಯ ಆಯೋಗ (ಯುಜಿಸಿ) ಕಡೆಗೂ 2018-19ನೇ ಸಾಲಿನಿಂದ 2022-23ನೇ ಸಾಲಿನವರೆಗೆ ದೂರ ಶಿಕ್ಷಣ ಕ್ಷೇತ್ರದಲ್ಲಿ 17 ಕೋರ್ಸ್‌ಗಳಿಗೆ ಮಾತ್ರ ಅನುಮತಿ ನೀಡಿದೆ.

Advertisement

ಮುಕ್ತ ವಿವಿ ತನ್ನ ವ್ಯಾಪ್ತಿ ಮೀರಿ ಹೊರ ರಾಜ್ಯಗಳಲ್ಲಿ ಅಧ್ಯಯನ ಕೇಂದ್ರಗಳನ್ನು ತೆರೆದಿದೆ. ತಾಂತ್ರಿಕ ಕೋರ್ಸ್‌ಗಳನ್ನು ನಡೆಸುತ್ತಿದೆ ಎಂಬ ಕಾರಣಕ್ಕೆ 2015ರ ಜೂ.16ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿದ ಯುಜಿಸಿ 2012-13ರಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಮಾನ್ಯತೆ ಇಲ್ಲದಿರುವ ವಿಚಾರ ಬಹಿರಂಗಪಡಿಸಿತು. ಯುಜಿಸಿಯ ಈ ಪ್ರಕಟಣೆ ಮುಕ್ತ ವಿವಿಯಿಂದ ಪದವಿ, ಸ್ನಾತಕೋತ್ತರ ಪದವಿ ಪಡೆದಿದ್ದ ಹಲವರು ಸರ್ಕಾರಿ ನೌಕರಿ ಕಳೆದುಕೊಳ್ಳಬೇಕಾಯಿತು.

ಗೊಂದಲ ಮುಂದುವರಿಕೆ: ಪರಿಣಾಮ, ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಂದುವರಿಸಲಾಗದೆ ಅತಂತ್ರರಾಗಿದ್ದರು. ಸದ್ಯ 2018-19ನೇ ಸಾಲಿಗೆ ಯುಜಿಸಿ ಮಾನ್ಯತೆ ನೀಡಿದ್ದರೂ ನವೀಕರಣವಾಗದ ಅವಧಿಯಲ್ಲಿ ವಿವಿಧ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆದಿದ್ದ ಹಾಗೂ ಪದವಿ ಪಡೆದಿರುವ ವಿದ್ಯಾರ್ಥಿಗಳ ಭವಿಷ್ಯ ಏನು ಎಂಬುದು ಇನ್ನೂ ಇತ್ಯರ್ಥವಾಗಿಲ್ಲ. ಆದರೆ, ಕಳೆದ ಮೂರು ವರ್ಷಗಳಿಂದ ಯಾವುದೇ ಚಟುವಟಿಕೆ ಇಲ್ಲದೆ ಸ್ತಬ್ಧವಾಗಿದ್ದ ಮುಕ್ತ ವಿವಿಗೆ ಯುಜಿಸಿ ಜೀವ ನೀಡಿದಂತಾಗಿದೆ.
 
ಮುಕ್ತ ವಿವಿಯ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಸೇರಿದಂತೆ ಹಲವು ಅಧಿಕಾರಿಗಳು ಕಳೆದ ಎರಡೂವರೆ ವರ್ಷಗಳಿಂದ ದೆಹಲಿಗೆ ತೆರಳಿ ಯುಜಿಸಿಯ ಷರತ್ತುಗಳನ್ನೆಲ್ಲಾ ಪೂರೈಸಿದ ನಂತರ ವಿವಿ ಕೇಳಿದ್ದ 32 ಕೋರ್ಸ್‌ಗಳ ಪೈಕಿ ಬಿ.ಇಡಿ, ಎಂಎ (ಸಂಸ್ಕೃತ), ಎಂಬಿಎ, ಎಲ್‌ಎಲ್‌ಎಂ, ವಿಜ್ಞಾನ ವಿಭಾಗದ ಹಲವು ಕೋರ್ಸ್‌ಗಳನ್ನು ಹೊರತುಪಡಿಸಿ 17 ಕೋರ್ಸ್‌ಗಳಿಗೆ ಮಾನ್ಯತೆ ನೀಡಿ ಗುರುವಾರ ಅಧಿಸೂಚನೆ ಹೊರಡಿಸಿದೆ.

ಮಾನ್ಯತೆ ಪಡೆದ ಕೋರ್ಸ್‌ಗಳು: ಬಿಎ, ಬಿಕಾಂ,ಬಿಲಿಬ್‌, ಎಂಎ (ಪ್ರಾಚೀನ ಇತಿಹಾಸ ಮತ್ತು ಪ್ರಾಚ್ಯವಸ್ತು ಇತಿಹಾಸ), ಎಂಎ(ಅರ್ಥಶಾಸ್ತ್ರ), ಎಂಎ (ಇಂಗ್ಲಿಷ್‌), ಎಂಎ (ಹಿಂದಿ), ಎಂಎ (ಇತಿಹಾಸ), ಎಂಎ( ಪತ್ರಿಕೋದ್ಯಮ), ಎಂಎ (ಕನ್ನಡ), ಎಂಎ( ರಾಜ್ಯಶಾಸ್ತ್ರ), ಎಂಎ (ಸಾರ್ವಜನಿಕ ಆಡಳಿತ), ಎಂಎ( ಸಮಾಜಶಾಸ್ತ್ರ), ಎಂಎ( (ಉರ್ದು), ಎಂಕಾಂ, ಎಂಲಿಬ್‌, ಎಂಎಸ್ಸಿ (ಪರಿಸರ ವಿಜ್ಞಾನ).

ಮಾನ್ಯತೆ ಇಲ್ಲದ ಕೋರ್ಸ್‌ಗಳು: ಬಿ.ಇಡಿ, ಎಂಎ (ಸಂಸ್ಕೃತ), ಎಂಬಿಎ, ಎಲ್‌ಎಲ್‌ಎಂ, ವಿಜ್ಞಾನ ವಿಭಾಗದಲ್ಲಿ ಎಂಎಸ್ಸಿ (ಪರಿಸರ ವಿಜ್ಞಾನ) ಹೊರತುಪಡಿಸಿ ಮುಕ್ತ ವಿವಿ ಕೇಳಿದ್ದ ಎಂಎಸ್ಸಿ ಕೋರ್ಸ್‌ಗಳಾದ ಬಯೋ ಕೆಮಿಸ್ಟ್ರಿ, ಬಯೋ ಟೆಕ್ನಾಲಜಿ, ರಸಾಯನ ಶಾಸ್ತ್ರ, ಕ್ಲಿನಿಕಲ್‌ ನ್ಯೂಟ್ರಿಷನ್‌, ಕಂಪ್ಯೂಟರ್‌ ಸೈನ್ಸ್‌, ಭೂಗೋಳ ಶಾಸ್ತ್ರ, ಮಾಹಿತಿ ವಿಜ್ಞಾನ, ಗಣಿತ, ಮೈಕ್ರೋ ಬಯಾಲಜಿ, ಭೌತಶಾಸ್ತ್ರ, ಮನಃಶಾಸ್ತ್ರ, ಕೋರ್ಸ್‌ಗಳಿಗೆ ಮಾನ್ಯತೆ ನೀಡಲು ಯುಜಿಸಿ ನಿರಾಕರಿಸಿದೆ.

Advertisement

15 ದಿನಗಳಲ್ಲಿ ಪ್ರವೇಶ ಪ್ರಕ್ರಿಯೆ
ಯುಜಿಸಿ ಮಾನ್ಯತೆ ನೀಡಿರುವ ಕೋರ್ಸ್‌ಗಳಿಗೆ 15 ದಿನಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭಗೊಂಡು, ಅಕ್ಟೋಬರ್‌ ಒಳಗೆ ಪ್ರವೇಶಾತಿ ಮುಗಿಯಲಿದೆ ಎಂದು ಮುಕ್ತ ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದ್ದಾರೆ. ಕೋರ್ಸ್‌ಗಳ ಪ್ರಾಸ್ಪೆಕ್ಟಸ್‌ಅನ್ನು ಮುಕ್ತ ವಿವಿ ವೆಬ್‌ಸೈಟ್‌ಗೆ ಹಾಕಲಾಗುವುದು. ವೆಬ್‌ಸೈಟ್‌ನಿಂದಲೇ ಪ್ರಾಸ್ಪೆಕ್ಟಸ್‌ ಮತ್ತು ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ವಿವಿ ಕೇಳಿದ್ದ ಇನ್ನುಳಿದ ಕೋರ್ಸ್‌ಗಳಿಗೆ ಮಾನ್ಯತೆ ನೀಡುವ ಸಂಬಂಧ ಯುಜಿಸಿ ಕೋರ್ಸ್‌ವಾರು ವಿವರಣೆ ಕೇಳಿದೆ. ಒಂದು ತಿಂಗಳಲ್ಲಿ ಈ ವಿವರಣೆಗಳನ್ನು ಯುಜಿಸಿಗೆ ನೀಡಲಿದ್ದೇವೆ, ಹೀಗಾಗಿ ಕೇಳಿದ್ದ ಎಲ್ಲಾ ಕೋರ್ಸ್‌ಗಳಿಗೂ ಮಾನ್ಯತೆ ಸಿಗುವ ವಿಶ್ವಾಸವಿದೆ ಎಂದರು.

ಆಡಳಿತ ಕನ್ನಡ ಸೇರಿದಂತೆ ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿ ಮೂರು ವರ್ಷಗಳ ಹತ್ತು ಕೋರ್ಸ್‌ಗಳನ್ನು ಆರಂಭಿಸಲಾಗುವುದು.
– ಪ್ರೊ.ಶಿವಲಿಂಗಯ್ಯ, ಕುಲಪತಿ

– ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next