Advertisement

ಕರ್ನಾಟಕ ರಾಜ್ಯ ಮುಕ್ತ ವಿ.ವಿ. ಮುಚ್ಚುವುದಿಲ್ಲ

06:00 AM Oct 22, 2017 | |

ಮಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವನ್ನು ರಾಜ್ಯ ಸರಕಾರ ಮುಚ್ಚುವುದಿಲ್ಲ. ಅದರ ಪುನರ್‌ ವ್ಯವಸ್ಥೆಗಾಗಿ ರತ್ನಪ್ರಭಾ ನೇತೃತ್ವದ ಸಮಿತಿ ರಚಿಸಲಾಗಿದೆ. 3 ವರ್ಷಗಳ ಹಿಂದೆ ರದ್ದಾಗಿದ್ದ ಯು.ಜಿ.ಸಿ. ಮಾನ್ಯತೆಯನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಸಕಲ ಪ್ರಯತ್ನಗಳು ಮುಂದುವರಿದಿವೆ. ಮಾನ್ಯತೆ ನೀಡಲು ಯು.ಜಿ.ಸಿ. ಹಿಂದೇಟು ಹಾಕಿದರೆ ಕಾನೂನು ಹೋರಾಟ ಅನಿವಾರ್ಯವಾದೀತು ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯ ರೆಡ್ಡಿ ತಿಳಿಸಿದರು.

Advertisement

ಅವರು ಶನಿವಾರ ಮಂಗಳೂರಿನ ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು ಡಾ| ಪಿ. ದಯಾನಂದ ಪೈ – ಪಿ. ಸತೀಶ್‌ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಎಂಬುದಾಗಿ ಪುನರ್‌ ನಾಮಕರಣ ಮಾಡುವ ಕಾರ್ಯ ಹಾಗೂ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿ ಮಾತನಾಡಿದರು.

ಕರಾಮು ವಿ.ವಿಯಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಕೆಲವೊಂದು ಭ್ರಷ್ಟಾಚಾರ ಮತ್ತು ಕಾನೂನು ಬಾಹಿರ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಯುಜಿಸಿ ಈ ವಿ.ವಿ.ಯ ಮಾನ್ಯತೆಯನ್ನು ರದ್ದುಪಡಿಸಿತ್ತು. ಮುಕ್ತ ವಿ.ವಿ. ಆರಂಭಿಸಿದ ಎಂಜಿನಿಯರಿಂಗ್‌ ಕಾಲೇಜು ಮತ್ತು ಪಾರಾ ಮೆಡಿಕಲ್‌ ಕಾಲೇಜುಗಳಿಗೆ ಯುಜಿಸಿ ಮಾನ್ಯತೆ ನೀಡಿಲ್ಲ. ಇದರಿಂದ ಸುಮಾರು 3 ಲಕ್ಷ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದರು.

ಮಲತಾಯಿ ನೀತಿ ಆರೋಪ
ಮುಕ್ತ ವಿ.ವಿ. ವ್ಯಾಪ್ತಿಯನ್ನು ರಾಜ್ಯದ ಹೊರಗೆ ವಿಸ್ತರಿಸಿದ ಕ್ರಮಕ್ಕೆ ಯುಜಿಸಿ ಆಕ್ಷೇಪಿಸಿತ್ತು. ಈ ಹಿನ್ನೆಲೆಯಲ್ಲಿ ಸರಕಾರ ಕಾಯ್ದೆಗೆ ತಿದ್ದುಪಡಿ ತಂದು ವ್ಯಾಪ್ತಿಯನ್ನು ಕರ್ನಾಟಕ ರಾಜ್ಯಕ್ಕೆ ಸೀಮಿತಗೊಳಿಸಿದೆ. ಅಲ್ಲದೆ ಯುಜಿಸಿ ತಿಳಿಸಿದ ಇತರ ಕೆಲವು ಸಲಹೆಗಳನ್ನು ಪಾಲಿಸಿದೆ. ಹಾಗೆ ಯುಜಿಸಿ ಹೇಳಿದ್ದೆಲ್ಲವನ್ನೂ ಮಾಡಿ ಕಳೆದ 3 ವರ್ಷಗಳಲ್ಲಿ 16 ಬಾರಿ ರಾಜ್ಯ ಸರಕಾರದ ಅಧಿಕಾರಿಗಳು ಪುನರ್‌ ಮಾನ್ಯತೆಯನ್ನು ಒದಗಿಸುವಂತೆ ಯುಜಿಸಿ ಬಾಗಿಲು ತಟ್ಟಿದ್ದಾರೆ. ನಾನೇ ಖುದ್ದಾಗಿ ಕೇಂದ್ರ ಮಾನವ ಸಂಪದ ಖಾತೆಯ ಸಚಿವ ಪ್ರಕಾಶ್‌ ಜಾವಡೇಕರ್‌ ಅವರನ್ನು ಭೇಟಿಯಾಗಿ ಒತ್ತಾಯಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಇಷ್ಟೆಲ್ಲಾ ಮಾಡಿದರೂ ಯುಜಿಸಿ ಮಾನ್ಯತೆ ನೀಡುತ್ತಿಲ್ಲ. ಇದು ಕರ್ನಾಟಕದ ಬಗ್ಗೆ ಯುಜಿಸಿ ತಳೆಯುವ ಮಲತಾಯಿ ನೀತಿ ಎಂದು ಪರಿಗಣಿಸಬೇಕಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವರು ಆರೋಪಿಸಿದರು.

ನಾನು ಮತ್ತೂಮ್ಮೆ ಕೇಂದ್ರ ಮಾನವ ಸಂಪದ ಸಚಿವರನ್ನು ಭೇಟಿಯಾಗಿ ಒತ್ತಾಯಿಸುತ್ತೇನೆ. ಆಗಲೂ ಯುಜಿಸಿ ಸ್ಪಂದಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುವ ಬಗ್ಗೆ ಚಿಂತನೆ ಇದೆ ಎಂದರು.

Advertisement

650 ಕೋಟಿ ರೂ.
ಖಜಾನೆಯಲ್ಲಿದೆ
ಕರ್ನಾಟಕ ರಾಜ್ಯ ಮುಕ್ತ ವಿ.ವಿ.ಯಲ್ಲಿದ್ದ 650 ಕೋಟಿ ರೂ.ಗಳನ್ನು ಭದ್ರತೆ ದೃಷ್ಟಿಯಿಂದ ರಾಜ್ಯದ ಖಜಾನೆಯಲ್ಲಿ ಇರಿಸಲಾಗಿದೆ. ಇದರಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ. ಹಣವನ್ನು ನಾನು ಕೊಂಡುಹೋಗುವುದಿಲ್ಲ. ವಿಶ್ವ ವಿದ್ಯಾನಿಲಯದಲ್ಲಿ 999 ಅಧಿಕಾರಿ/ ಸಿಬಂದಿ ಇದ್ದು, ಅವರ ವೇತನ ಪಾವತಿಗೆ ವರ್ಷಕ್ಕೆ 50 ಕೋಟಿ ರೂ. ಖರ್ಚಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವರು ಹೇಳಿದರು.

ವಿಟಿಯು ಸ್ಥಿತಿ ಬಾರದಿರಲಿ
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ಖರ್ಚಾಗದೆ ಇದ್ದ 441 ಕೋಟಿ ರೂ.ಗಳನ್ನು ಆದಾಯ ತೆರಿಗೆ ಇಲಾಖೆ ಕೊಂಡುಹೋಗಿದೆ. ಅಂತಹುದೇ ಗತಿ ಕರ್ನಾಟಕ ಮುಕ್ತ ವಿ.ವಿ.ಗೆ ಬಾರದಿರಲಿ ಎಂದು ಈ ವಿ.ವಿ.ಯದಲ್ಲಿದ್ದ 650 ಕೋಟಿ ರೂ. ಗಳನ್ನು ಸರಕಾರದ ಖಜಾನೆಯಲ್ಲಿ ಇರಿಸಲಾಗಿದೆ. ಪರಿಸ್ಥಿತಿ ಹೀಗಿರುವಾಗ ಅದಕ್ಕೆ ವಿರೋಧ ಏಕೆ ಎಂದು ಅರ್ಥವಾಗುತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next