ಬೆಂಗಳೂರು : ರಾಜ್ಯ ಸರಕಾರದ ಸುಮಾರು ಆರು ಲಕ್ಷ ನೌಕರರಿಗೆ ಲಾಭವಾಗುವ ರೀತಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ನೌಕರರ ಮೂಲ ವೇತನವನ್ನು ಶೇ.1.75ರಷ್ಟು ಹೆಚ್ಚಿಸುವ ಮೂಲಕ ಸಿಹಿ ಸುದ್ದಿ ನೀಡಿದೆ.
ಆದರೆ ರಾಜ್ಯ ಸರಕಾರಿ ನೌಕರರ ಸಂಘ, ಶೇ.4.25ರ ಮೂಲ ವೇತನ ಹೆಚ್ಚಳಕ್ಕೆ ಮನವಿ ಮಾಡಿಕೊಂಡಿತ್ತು. ಹಾಗೆ ಮಾಡಿದಲ್ಲಿ ರಾಜ್ಯ ಸರಕಾರದ ಬೊಕ್ಕಸಕ್ಕೆ ಭಾರಿ ಹೊರೆ ಬರುವ ಸಾಧ್ಯತೆಯನ್ನು ಮನಗಂಡ ಸಮ್ಮಿಶ್ರ ಸರಕಾರ ಶೇ.1.75ರ ಹೆಚ್ಚಳಕ್ಕೆ ಮನಸ್ಸು ಮಾಡಿತು ಎಂದು ಮೂಲಗಳು ತಿಳಿಸಿವೆ.
ಹಾಗಿದ್ದರೂ ಶೇ.1.75ರ ತುಟ್ಟಿ ಭತ್ಯೆ ಹೆಚ್ಚಳದಿಂದ ರಾಜ್ಯ ಸರಕಾರದ ಬೊಕ್ಕಸಕ್ಕೆ ಸುಮಾರು 560 ಕೋಟಿ ರೂ. ಹೆಚ್ಚಿನ ಹೊರೆ ಬರಲಿದೆ ಎನ್ನಲಾಗಿದೆ.
ಈ ಹಿಂದೆ ವೇತನ ಆಯೋಗದ ಶಿಫಾರಸಿನ ಪ್ರಕಾರ ರಾಜ್ಯ ಸರಕಾರಿ ನೌಕರರ ವೇತನವನ್ನು ಪರಿಷ್ಕರಿಸಲಾಗಿತ್ತು. ಆಗ ಶೇ.45.25 ರಷ್ಟಿದ್ದ ತುಟ್ಟಿ ಭತ್ಯೆಯನ್ನು ಮೂಲ ವೇತನದಲ್ಲಿ ವಿಲಯನಗೊಳಿಸಲಾಗಿತ್ತು. ಪರಿಣಾಮವಾಗಿ ತುಟ್ಟಿ ಭತ್ಯೆ ಶೂನ್ಯವಾಗಿತ್ತು.
ಈಗ ನೀಡಲಾಗಿರುವ ತುಟ್ಟಿ ಭತ್ಯೆಯ ಮೂರು ತಿಂಗಳ ಹಿಂಬಾಕಿ ನಗದು ರೂಪದಲ್ಲಿ ನೌಕರರಿಗೆ ಪಾವತಿಯಾಗಲಿದೆ.