Advertisement

ರಾಜ್ಯಾದ್ಯಂತ ಪ್ರಾಥಮಿಕ ಶಾಲೆಗಳಿಗೆ ನಾಳೆಯಿಂದಲೇ ಬೇಸಿಗೆ ರಜೆ ಪ್ರಾರಂಭ

09:56 AM Mar 14, 2020 | Hari Prasad |

ಬೆಂಗಳೂರು: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯುವ ಮುಂಜಾಗೂರಕತಾ ಕ್ರಮವಾಗಿ ರಾಜ್ಯಾದ್ಯಂತ ಇರುವ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಮಾರ್ಚ್ 14ರ ಶನಿವಾರದಿಂದಲೇ ಬೇಸಿಗೆ ರಜೆಯನ್ನು ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಇಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.

Advertisement

ಈ ಆದೇಶ ಮತ್ತು ಅದರಲ್ಲಿರುವ ಎಲ್ಲಾ ಸೂಚನೆಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಪಠ್ಯಕ್ರಮ/CBSC/ICSC/IGCSC/IB ಮುಂತಾದ ಪಠ್ಯಕ್ರಮದ ಎಲ್ಲಾ ಶಾಲೆಗಳಿಗೂ ಅನ್ವಯವಾಗುತ್ತದೆ.

1 ರಿಂದ 6ನೇ ತರಗತಿಯವರೆಗೆ ಎಲ್ಲಾ ಶಾಲೆಗಳಿಗೆ ದಿನಾಂಕ 14.03.2020ರಿಂದ ಜಾರಿಗೆ ಬರುವಂತೆ ತರಗತಿಗಳನ್ನು ಸ್ಥಗಿತಗೊಳಿಸುವುದು ಹಾಗೂ ಒಂದು ವೇಳೆ ಪರೀಕ್ಷೆಗಳು ನಡೆಯುತ್ತಿದ್ದಲ್ಲಿ ಅವುಗಳನ್ನು ಸಹ ಸ್ಥಗಿತಗೊಳಿಸಿ ಬೇಸಿಗೆ ರಜೆಯನ್ನು ಘೋಷಿಸಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಇನ್ನು 7 ರಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ 14.03.2020ರಿಂದ ಜಾರಿಗೆ ಬರುವಂತೆ ತರಗತಿಗಳನ್ನು ಪರೀಕ್ಷಾ ಪೂರ್ವ ಸಿದ್ಧತಾ ರಜೆಯ (ಸ್ಟಡೀ ಲೀವ್) ಮಾದರಿಯಲ್ಲಿ ಸ್ಥಗಿತಗೊಳಿಸಿ ಪರೀಕ್ಷಾ ದಿನಗಳಂದು ಮಾತ್ರ ಹಾಜರಾಗಲು ಸೂಚಿಸುವಂತೆ ಆದೇಶದಲ್ಲಿ ತಿಳಿಸಿಲಾಗಿದೆ. ಮತ್ತು ಈ ಪರೀಕ್ಷೆಗಳನ್ನು ಮಾರ್ಚ್ 23ರ ಒಳಗೆ ಕಡ್ಡಾಯವಾಗಿ ಮುಗಿಸಿ ಬಳಿಕ ಬೇಸಿಗೆ ರಜೆಯನ್ನು ನೀಡುವಂತೆ ಸೂಚಿಸಲಾಗಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಪೂರ್ವನಿರ್ಧಾರಿತ ವೇಳಾಪಟ್ಟಿಯಂತೆ ನಡೆಯಲಿವೆ. ದ್ವಿತೀಯ ಪಿ.ಯು. ಪರೀಕ್ಷೆಗಳು ಈಗಾಗಲೇ ಪ್ರಾರಂಭವಾಗಿದ್ದು ನಿಗದಿಯಾಗಿರುವ ವೇಳಾಪಟ್ಟಿಯಂತೆ ನಡೆಯಲಿದೆ.

Advertisement

1 ರಿಂದ 6ನೇ ತರಗತಿ ವಿದ್ಯಾರ್ಥಿಗಳು 2019-20ನೇ ಸಾಲಿನಲ್ಲಿ ತಾವು FA1, FA2, FA3, FA4, SA1 ಮತ್ತು SA2 (ದಿನಾಂಕ 13.032020ರವರೆಗೆ ನಡೆದ ಪರೀಕ್ಷೆಗಳ ಆಧಾರದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಶ್ರೇಣೀಕೃತ ಫಲಿತಾಂಶವನ್ನು ಪ್ರಕಟಿಸಿ ಮುಂದಿನ ತರಗತಿಗಳಿಗೆ ಬಡ್ತಿ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಬೇಸಿಗೆ ರಜೆಯ ನಂತರ 2020-21ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯಂತೆ ಶಾಲೆಗಳು ಪುನರಾರಂಭಗೊಳ್ಳಲಿವೆ.

ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಪರೀಕ್ಷೆ ಬರೆಯಲು ಅಪೇಕ್ಷಿಸಿದಲ್ಲಿ ಅದಕ್ಕೆ ಅವಕಾಶ ನೀಡುವಂತೆ ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಮತ್ತು ಪರೀಕ್ಷೆಗಳ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಶಾಲಾ ಮುಖ್ಯಸ್ಥರಿಗೆ ಸೂಚನೆಯನ್ನು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next