Advertisement

ಕೆ.ಎಸ್.ಸಿ.ಎ  ಕ್ರೀಡಾ ಸಂಸ್ಕೃತಿಯನ್ನು ಹುಟ್ಟುಹಾಕಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

09:09 AM Sep 10, 2021 | Team Udayavani |

ಬೆಂಗಳೂರು:ಕರ್ನಾಟಕ ರಾಜ್ಯ  ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾ ಸಂಸ್ಕೃತಿಯನ್ನು ಹುಟ್ಟುಹಾಕುವುದರ ಜೊತೆಗೆ ಇತರೆ ಕ್ರೀಡೆಗಳಿಗೂ ಆ ಸಂಸ್ಕೃತಿಯನ್ನು ಅನುಷ್ಠಾನಕ್ಕೆ ತರಲು ಪ್ರೇರಣೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಅವರು ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ಯೂನಿಪೋಲ್ ಫ್ಲಡ್ ಲೈಟಿಂಗ್ ಟವರ್ ಗಳನ್ನು  ಉದ್ಘಾಟಿಸಿ ಮಾತನಾಡುತ್ತಿದ್ದರು.

ಚಿನ್ನಸ್ವಾಮಿ ಕ್ರಿಕೆಟ್ ಮೈದಾನ ಇಷ್ಟು ಅಚ್ಚುಕಟ್ಟಾಗಿ ಇರುವುದನ್ನು ನೋಡಿ ಬಹಳಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅಚ್ಚುಕಟ್ಟುತನದ ಸಂಸ್ಕೃತಿ ಬೆಂಗಳೂರಿನಲ್ಲಿ ಫುಟ್ಬಾಲ್, ಹಾಕಿ ಕ್ರೀಡಾಂಗಣಗಳು  ಉತ್ತಮವಾಗಿ ರೂಪುಗೊಳ್ಳಲು ಕಾರಣವಾಗಿವೆ. ಇಡೀ ಕ್ರೀಡಾ ಕ್ಷೇತ್ರದಲ್ಲಿ  ಕೆ.ಎಸ್.ಸಿ.ಎ ತನ್ನ ಪ್ರಭಾವವನ್ನು ಬೀರಿದೆ. ಇದರ ಶ್ರೇಯಸ್ಸು  ಕೆ.ಎಸ್.ಸಿ.ಎ ಗೆ ಸೇರಬೇಕು ಎಂದರು.

ಕ್ರಿಕೆಟ್ ಪ್ರಪಂಚದಲ್ಲಿ  ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್  ಗೆ  ಭಾರತ ಮಾತ್ರವಲ್ಲದೆ ವಿವಿಧ ದೇಶಗಳಲ್ಲಿ  ವಿಶೇಷ ಸ್ಥಾನವಿದೆ ಎಂದರು.

ಕೆ.ಎಸ್.ಸಿ.ಎ ಗೆ ಬಹಳ ದೊಡ್ಡ ಇತಿಹಾಸವಿದೆ. ಕ್ರಿಕೆಟ್ ದಿಗ್ಗಜರೆಲ್ಲಾ ಇಲ್ಲಿ ಆಟ ಆಡಿದ್ದಾರೆ. ರೋಚಕ ಕ್ರಿಕೆಟ್ ಪಂದ್ಯಗಳನ್ನು ಕೆ.ಎಸ್.ಸಿ.ಎ ನಲ್ಲಿ ವೀಕ್ಷಿಸಿದ್ದನ್ನು ಸ್ಮರಿಸಿದ  ಮುಖ್ಯಮಂತ್ರಿಗಳು, ಇಂದು ಕ್ರೀಡಾಂಗಣದಲ್ಲಿ ಸರ್ವ ಸೌಲಭ್ಯಗಳೂ ಇವೆ. ಇಂದು ಯೂನಿಪೋಲ್ ನಿರ್ಮಿಸಿ ಅಂತಾರಾಷ್ಟ್ರೀಯ ಮಟ್ಟದ ಲೈಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.ಹಳೇ ಚಿತ್ರಗಳನ್ನು ಪ್ರದರ್ಶಿಸಿರುವುದು ಕ್ರಿಕೆಟ್ ಚರಿತ್ರೆಯನ್ನು ಸ್ಮರಿಸಿದಂತಾಗುತ್ತದೆ.  ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದರು. ರೋಜರ್ ಬಿನ್ನಿ ಅವರು ಕ್ರಿಕೆಟಿಗರಾಗಿ ಹಾಗೂ ಆಡಲಿತಗಾರರಾಗಿ ಅತ್ಯುತ್ತಮ ಕೊಡುಗೆ ನೀಡಿದ್ದಾರೆ ಎಂದರು.

Advertisement

ಕೆ.ಎಸ್.ಸಿ.ಎ ನಲ್ಲಿ ಆತ್ಮೀಯತೆ ಇದ್ದು, ಉತ್ತಮ ವಾತಾವರಣವಿದೆ. ಮಾಜಿ ಕ್ರಿಕೆಟಿಗರ ಬಗ್ಗೆ ಗೌರವ, ಮನ್ನಣೆ ಸಹ ಇರುವುದು ಒಂದು ಅತ್ಯುತ್ತಮ ಪರಂಪರೆ ಎಂದರು.

ಹುಬ್ಬಳ್ಳಿಯಲ್ಲಿ ಅತ್ಯುತ್ತಮ ಕ್ರೀಡಾಂಗಣ ನಿರ್ಮಾಣವಾಗಿದ್ದು, ಅಲ್ಲಿ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನು ಏರ್ಪಡಿಸುವುದನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು ಕೆ.ಎಸ್.ಸಿ.ಎ ಬ್ರಾಂಡ್ ಬೆಂಗಳೂರಿನ  ಮೌಲ್ಯವನ್ನು ಹೆಚ್ಚಿಸುತ್ತಿದೆ ಎಂದರು.

ಇದನ್ನೂ ಓದಿ:ಹೊಸ ಇತಿಹಾಸದತ್ತ ಟೀಮ್‌ ಇಂಡಿಯಾ

ಇಂಗ್ಲೆಂಡಿನ ಲಾರ್ಡ್ಸ್ ಕ್ರೀಡಾಂಗಣದವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಶುಲ್ಕ ವಿಧಿಸುವ ಮಾದರಿಯಲ್ಲಿಯೇ  ಕೆ.ಎಸ್.ಸಿ.ಎ ಕ್ರೀಡಾಂಗಣ ವೀಕ್ಷಣೆಗೆ ಶುಲ್ಕ ವಿಧಿಸಿದರೆ ಆದಾಯವೂ ಬರುತ್ತದೆ‌‌. ಕ್ರೀಡಾಂಗಣ ವನ್ನು  ಅತ್ಯುತ್ತಮವಾಗಿ ನಿರ್ವಹಿಸಿ,  ನವೀನ ಆಲೋಚನೆಗಳನ್ನು ಕಾರ್ಯಗತಗೊಳಿಸುವಂತಾಗಲಿ ಎಂದರು.

ಕ್ರೀಡಾ ಮತ್ತು ರೇಷ್ಮೆ ಸಚಿವ ನಾರಾಯಣಗೌಡ, ಮುನಿರತ್ನ, ಕೆ.ಎಸ್.ಸಿ.ಎ ಅಧ್ಯಕ್ಷ ರೋಜರ್ ಬಿನ್ನಿ,  ಕಾರ್ಯದರ್ಶಿ ಸಂತೋಷ್ ಮೆನನ್,  ವಿನಯ ಮೃತ್ಯುಂಜಯ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next