Advertisement

ಅಧಿವೇಶನ ಬಳಿಕ ಸರ್ಜರಿ?: ಸಂಪುಟ ಪುನಾರಚನೆ ಚಿಂತನೆಯಲ್ಲಿ ಯಡಿಯೂರಪ್ಪ

02:27 AM Aug 20, 2020 | Hari Prasad |

ಬೆಂಗಳೂರು: ಗಣೇಶ ಚತುರ್ಥಿ ವೇಳೆಗೆ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆಯಾಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ.

Advertisement

ಕೋವಿಡ್ 19 ಸೋಂಕು ಹಾವಳಿ ಹಾಗೂ ಸೆಪ್ಟಂಬರ್‌ನಲ್ಲಿ ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದ್ದು, ಸಚಿವಾಕಾಂಕ್ಷಿಗಳಿಗೆ ಕಾಯುವಿಕೆ ಅನಿವಾರ್ಯವಾಗಲಿದೆ.

ಚೌತಿ ವೇಳೆಗೆ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆಯಾಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಕೋವಿಡ್‌-19 ಕಾಣಿಸಿಕೊಂಡು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರೂ ಮಾಸಾಂತ್ಯದವರೆಗೆ ಸಂಪುಟ ಸಂಬಂಧ ದಿಲ್ಲಿ ಪ್ರವಾಸ ಕೈಗೊಳ್ಳುವ ಸಾಧ್ಯತೆ ಕಡಿಮೆ.

ಇನ್ನೊಂದೆಡೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಸ್ಪತ್ರೆಗೆ ದಾಖಲಾಗಿರುವುದರಿಂದ ರಾಜ್ಯದ ವಿಚಾರಗಳ ಬಗ್ಗೆ ಸದ್ಯಕ್ಕೆ ಅವಕಾಶ ಸಿಗುವ ಸಂಭವವಿಲ್ಲ.

Advertisement

ಕತ್ತಿ – ಸಿಎಂ ಭೇಟಿ
ಇತ್ತ ಸಚಿವಾಕಾಂಕ್ಷಿ ಉಮೇಶ್‌ ಕತ್ತಿ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಮಂಗಳವಾರ ಭೇಟಿಯಾಗಿದ್ದಾರೆ. ಮಾಜಿ ಸಂಸದ ರಮೇಶ್‌ ಕತ್ತಿ ಅವರಿಗೆ ರಾಜ್ಯಸಭಾ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಸಹೋದರ ಉಮೇಶ್‌ ಕತ್ತಿ ಅವರನ್ನು ಸಚಿವರನ್ನಾಗಿ ಮಾಡುವ ಅನಿವಾರ್ಯತೆ ಎದುರಾಗಿದೆ. ವಿಧಾನ ಪರಿಷತ್‌ ಸದಸ್ಯರಾದ ಆರ್‌. ಶಂಕರ್‌, ಎಂ.ಟಿ.ಬಿ. ನಾಗರಾಜ್‌, ಎಚ್‌. ವಿಶ್ವನಾಥ್‌, ಸಿ.ಪಿ. ಯೋಗೇಶ್ವರ್‌ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಇದರ ನಡುವೆ ಎಚ್‌. ವಿಶ್ವನಾಥ್‌, ಎಂ.ಟಿ.ಬಿ. ನಾಗರಾಜ್‌ ಹಾಗೂ ಆರ್‌. ಶಂಕರ್‌ ಅವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಹೈಕೋರ್ಟ್‌ನಲ್ಲಿ ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಪ್ರಕಾರ ಈ ಮೂವರು ಸಚಿವ ಹುದ್ದೆ ಪಡೆದುಕೊಳ್ಳಬೇಕಾದರೆ ಮರು ಆಯ್ಕೆಯಾಗಬೇಕು. ಆದರೆ ಈ ಮೂವರು ವಿಧಾನ ಪರಿಷತ್ತಿಗೆ ಪ್ರವೇಶ ಮಾಡಿರುವುದು ಮರು ಆಯ್ಕೆ ಎಂದು ಪರಿಗಣಿಸಲಾಗದು. ಈ ಮೂವರನ್ನು  ಸಂಪುಟಕ್ಕೆ ಸೇರಿಸಿದರೆ ಸುಪ್ರೀಂ ಕೋರ್ಟ್‌ ತೀರ್ಪಿನ ಉಲ್ಲಂಘನೆ ಆಗಲಿದೆ ಎಂಬುದು ಅವರ ವಾದ.

ಪುನಾರಚನೆಗೆ ಒಲವು
ಒಂದೊಮ್ಮೆ ಸಂಪುಟ ಸರ್ಜರಿ ಆಗಬೇಕಾದರೆ ವಿಸ್ತರಣೆಗಿಂತ ಪುನಾರಚನೆ ಸೂಕ್ತ ಎಂಬುದು ಯಡಿಯೂರಪ್ಪ ಅವರ ಲೆಕ್ಕಾಚಾರ. ಏಕೆಂದರೆ ಮೂರನೇ ಸುತ್ತಿನಲ್ಲೂ ವಿಸ್ತರಣೆಗೆ ಮುಂದಾದರೆ ವಲಸಿಗರಿಗೆ ಹೆಚ್ಚಿನ ಸ್ಥಾನ ಸಿಗಲಿದ್ದು, ಮೂಲ ಬಿಜೆಪಿಗರಲ್ಲಿ ಅಸಮಾಧಾನ ಮೂಡುವ ಸಾಧ್ಯತೆ ಇದೆ.

ಆ ಹಿನ್ನೆಲೆಯಲ್ಲಿ ಕೆಲ ಸಚಿವರನ್ನು ಕೈಬಿಟ್ಟು ಆ ಸ್ಥಾನಗಳನ್ನು ಮೂಲ ಬಿಜೆಪಿಗರಿಗೆ ಹಂಚಿಕೆ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಪಕ್ಷದ ನಾಯಕರು ಸದ್ಯದ ಪರಿಸ್ಥಿತಿಯಲ್ಲಿ ವಿಸ್ತರಣೆ ಸೂಕ್ತ ಎಂಬ ಚಿಂತನೆಯಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ.

ಹಲವು ಸಚಿವರು ದಿಲ್ಲಿಗೆ
ಹಲವು ಸಚಿವರು ದಿಲ್ಲಿಗೆ ದೌಡಾಯಿಸಿರುವುದು ಪಕ್ಷದಲ್ಲೇ ಚರ್ಚೆಗೆ ಗ್ರಾಸವಾಗಿದೆ. ಸಿ.ಟಿ. ರವಿ ಸೇರಿದಂತೆ ಕೆಲವು ಸಚಿವರು ಕೇಂದ್ರ ಸಚಿವರನ್ನು ಭೇಟಿಯಾಗಿ ಇಲಾಖಾ ಕೆಲಸ ಎನ್ನುತ್ತಿದ್ದಾರೆ. ಆದರೆ ಮತ್ತೊಂದು ಮೂಲಗಳ ಪ್ರಕಾರ, ಸಂಪುಟದಿಂದ ಕೈಬಿಡುವ ಭಯದಿಂದ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಹೋಗುತ್ತಿದ್ದಾರೆ ಎಂಬ ಮಾತುಗಳೂ ಕೇಳಿಸುತ್ತಿವೆ.

ಇನ್ನೊಂದೆಡೆ ಸಿ.ಪಿ. ಯೋಗೇಶ್ವರ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿದ್ದು, ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇತ್ತೀಚೆಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ ಕೂಡ ದಿಲ್ಲಿಗೆ ತೆರಳಿ ಹಿರಿಯ ನಾಯಕರನ್ನು ಭೇಟಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next