Advertisement
ಸಾಮಾನ್ಯವಾಗಿ ಗುರುವಾರ ನಡೆಯುತ್ತಿದ್ದ ಸಚಿವ ಸಂಪುಟ ಸಭೆ ಈ ಬಾರಿ ಶುಕ್ರವಾರ ನಿಗದಿಯಾಗಿದೆ. ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಆರ್. ಅಶೋಕ್, ರಮೇಶ್ ಜಾರಕಿಹೊಳಿ, ಕೋಟ ಶ್ರೀನಿವಾಸ ಪೂಜಾರಿ ದಿಲ್ಲಿಗೆ ಮತ್ತು ಹಿರಿಯ ಸಚಿವ ಕೆ.ಎಸ್. ಈಶ್ವರಪ್ಪ ಹೈದರಾಬಾದ್‌ಗೆ ತೆರಳಿದ್ದು, ಸಂಪುಟ ಸಭೆಯಿಂದ ಗೈರಾಗಲಿದ್ದಾರೆ.
ಇದರ ಬೆನ್ನಲ್ಲೇ ಯಡಿಯೂರಪ್ಪ ಅವರು ಗೃಹ ಕಚೇರಿ “ಕೃಷ್ಣಾ’ದಲ್ಲಿ ಶುಕ್ರವಾರ ಸಂಜೆ 4ಕ್ಕೆ ರಾಜ್ಯದ ಬಿಜೆಪಿ ಸಂಸದರ “ಅನೌಪಚಾರಿಕ’ ಸಭೆ ಕರೆದಿದ್ದಾರೆ. ಸಾರ್ವತ್ರಿಕ ಲೋಕಸಭಾ ಚುನಾವಣೆ ನಡೆದು ವರ್ಷ ಕಳೆದ ಬಳಿಕ ಯಡಿಯೂರಪ್ಪ ಅವರು ಸಂಸದರೊಂದಿಗೆ ಅನೌಪಚಾರಿಕ ಸಭೆ ನಡೆಸಲು ಮುಂದಾಗಿ ರುವುದು ಚರ್ಚೆಗೆ ಗ್ರಾಸವಾಗಿದೆ.
Related Articles
ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಸಂಪುಟ ಸಂಬಂಧ ಚರ್ಚಿಸಿದ್ದ ಬಿಎಸ್‌ವೈ ಅವರು ಬಳಿಕ ಮೂರು ದಿನಗಳಲ್ಲಿ ವರಿಷ್ಠರಿಂದ ಸೂಚನೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ದಿಲ್ಲಿಯಿಂದ ಯಾವುದೇ ಸಂದೇಶ ಬಾರದ ಕಾರಣ ಬಳಿಕ ಆ ವಿಚಾರವಾಗಿ ಮೌನಕ್ಕೆ ಶರಣಾಗಿದ್ದರು. ಬುಧವಾರ ಮೈಸೂರಿನಲ್ಲಿ ಮೌನ ಮುರಿದಿದ್ದ ಸಿಎಂ, ಎರಡು- ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದರು. ಇದು ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಕಾಲ ಸನ್ನಿಹಿತವಾಗಿರುವ ನಿರೀಕ್ಷೆ ಮೂಡಿಸಿದೆ.
Advertisement
ಸಿ.ಟಿ. ರವಿ ಕಚೇರಿ ಪೂಜೆದಿಲ್ಲಿಗೆ ತೆರಳಿರುವ ಹಲವು ಸಚಿವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಕಚೇರಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗುವ ಕಾರಣ ಹೇಳುತ್ತಿದ್ದಾರೆ. ಆದರೆ ಒಬ್ಬೊಬ್ಬರೂ ತಮ್ಮದೇ ಆದ ಅಜೆಂಡಾದೊಂದಿಗೆ ರಾಜಧಾನಿಗೆ ತೆರಳಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಿಂದ ಕೇಳಿಬಂದಿವೆ. ಆದರೆ ದಿಲ್ಲಿಯಲ್ಲಿ ಗುರುವಾರ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಆರ್. ಅಶೋಕ್, ಸಿಎಂಗೆ ಮಾಹಿತಿ ನೀಡಿಯೇ ದಿಲ್ಲಿಗೆ ಭೇಟಿ ನೀಡಿರುವುದಾಗಿ ಹೇಳುವ ಮೂಲಕ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಹೈದರಾಬಾದ್‌ಗೆ ತೆರಳುವ ಮುನ್ನ ಪ್ರತಿಕ್ರಿಯಿಸಿದ ಸಚಿವ ಕೆ.ಎಸ್. ಈಶ್ವರಪ್ಪ, ಸಿಎಂ ಬದಲಾವಣೆಯಂಥ ವಿಚಾರ ತಮ್ಮ ಗಮನಕ್ಕಂತೂ ಬಂದಿಲ್ಲ. ಶಾಸಕರು ಸಭೆ ಸೇರುವುದು, ಊಟ ಮಾಡುವುದು ಸಹಜ. ಪಕ್ಷದೊಳಗೆ ಯಾವ ಬೆಳವಣಿಗೆ ಗಳೂ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.
ಈ ನಡುವೆ ಬಿಜೆಪಿ ಸರಕಾರ ರಚನೆಗೆ ನೆರವಾದ ಸಿ.ಪಿ. ಯೋಗೇಶ್ವರ್ ಕೂಡ ದಿಲ್ಲಿಗೆ ತೆರಳಿದ್ದಾರೆ. ಯೋಗೇಶ್ವರ್ ಮತ್ತು ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ್ ಕುಮಟಳ್ಳಿ ಸಹಿತ ತ್ಯಾಗ ಮಾಡಿ ಬಂದವರಿಗೆ ಸಚಿವ ಸ್ಥಾನ ಕಲ್ಪಿಸುವಂತೆ ವರಿಷ್ಠರಿಗೆ ಮನವಿ ಮಾಡಲು ರಮೇಶ್ ಜಾರಕಿಹೊಳಿ ಪ್ರಯತ್ನ ನಡೆಸಿದ್ದಾರೆ. ಬೆಳಗಾವಿ ಜಿಲ್ಲಾ ರಾಜಕೀಯ, ಸ್ಥಾನಮಾನ ಹಂಚಿಕೆ ಕುರಿತಂತೆ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಲು ಲಕ್ಷ್ಮಣ ಸವದಿ ತೆರಳಿದ್ದಾರೆ. ಆರ್.ಅಶೋಕ್ ಕೆಲವು ವೈಯಕ್ತಿಕ ಕೆಲಸ ಕಾರ್ಯಕ್ಕಾಗಿ ದಿಲ್ಲಿಗೆ ತೆರಳಿದ್ದಾರೆ. ಸಿ.ಪಿ. ಯೋಗೇಶ್ವರ್ ಸಚಿವ ಸ್ಥಾನಕ್ಕಾಗಿ ಲಾಬಿ ಮುಂದುವರಿಸಿದ್ದಾರೆ ಎಂದೂ ಹೇಳಲಾಗಿದೆ. ಗ್ರಾಮ ಪಂಚಾಯತ್ ಚುನಾವಣೆಗೆ ಸಿದ್ಧತೆ
ಈ ಬೆಳವಣಿಗೆಗಳಿಗೂ ತನಗೂ ಸಂಬಂಧವಿಲ್ಲವೆಂಬಂತೆ ಪಕ್ಷವು ಗ್ರಾ.ಪಂ. ಚುನಾವಣೆಗೆ ಸಿದ್ಧತೆಯಲ್ಲಿ ನಿರತವಾಗಿದೆ. ಗ್ರಾಮ ಸ್ವರಾಜ್ ಸಮಾವೇಶಗಳಿಗೆ ಶುಕ್ರವಾರ ಚಾಲನೆ ದೊರೆಯಲಿದ್ದು, ಡಿ. 3ರ ವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತಲಾ ಒಂದೆರಡು ಸಮಾವೇಶಗಳು ಆಯೋಜನೆಯಾಗಲಿವೆ. ಒಟ್ಟಾರೆ ಗುರುವಾರ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿದ್ದು, ಅದರ ಪರಿಣಾಮ ಏನಿರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಸಭೆಗೆ ಇದೇ ಸಮಯ ಏಕೆ?
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ದಿಲ್ಲಿ ಕಚೇರಿ ಪೂಜಾ ಕಾರ್ಯಕ್ರಮ ನಿಗದಿಯಾಗಿದ್ದ ಶುಕ್ರವಾರವೇ ಸಿಎಂ ಯಡಿಯೂರಪ್ಪ ಅವರು ಸಚಿವ ಸಂಪುಟ ಸಭೆ ಮತ್ತು ಪಕ್ಷದ ಸಂಸದರ ಅನೌಪಚಾರಿಕ ಸಭೆ ಕರೆದಿರುವುದು ಪಕ್ಷದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿ.ಟಿ. ರವಿ ಅವರ ಕಚೇರಿ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳುವುದಾಗಿ ಕೆಲವು ಸಚಿವರು ಈ ಹಿಂದೆಯೇ ಹೇಳಿದ್ದರು. ಹಾಗೆಯೇ ಹಲವು ಸಂಸದರು ಕೂಡ ದಿಲ್ಲಿಯಲ್ಲಿ ನಡೆ ಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಬಗ್ಗೆ ಆಪ್ತರ ಬಳಿ ಹೇಳಿಕೊಂಡಿದ್ದರು. ಆ ಮೂಲಕ ಶುಕ್ರವಾರ ಹಲವು ಸಚಿವರು, ಸಂಸದರ ಸಹಿತ ಪ್ರಮುಖ ನಾಯಕರ ದಿಲ್ಲಿ ಭೇಟಿ ನಿಶ್ಚಯವಾದಂತಿತ್ತು. ಅವರು ದಿಲ್ಲಿಯಲ್ಲಿ ಸಭೆ ಸೇರುವುದನ್ನು ತಪ್ಪಿಸಲು ಸಿಎಂ ಈ ತಂತ್ರ ಹೂಡಿದರೇ ಎಂಬ ಪ್ರಶ್ನೆಯೂ ಪಕ್ಷ ದಲ್ಲಿ ಮೂಡಿದೆ. ಸಂಸದರ ಸಭೆಯನ್ನು ಸಿಎಂ ತಮ್ಮ ಬಲ ಪ್ರದ ರ್ಶನಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಶುಕ್ರವಾರ ಬಿಎಸ್‌ವೈ ಪತ್ರಿಕಾಗೋಷ್ಠಿ
ಶುಕ್ರವಾರ ಸಂಪುಟ ಸಭೆ ಬಳಿಕ ಸಿಎಂ ಯಡಿಯೂರಪ್ಪ ಅವರೇ ಪತ್ರಿಕಾಗೋಷ್ಠಿ ನಡೆಸಲಿರುವುದು ಕುತೂಹಲ ಮೂಡಿಸಿದೆ. ಈ ವೇಳೆ ಯಡಿಯೂರಪ್ಪ ಅವರು ಪ್ರಮುಖ ಘೋಷಣೆ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಸಂಪುಟದಲ್ಲಿ ನಾನೊಬ್ಬಳೇ ಸಚಿವೆ
ಇರುವುದು. ನಾನು ಸಂಘಟನೆಯ ಮೂಲಕ ಬಂದು ಸಾಕಷ್ಟು ಕೆಲಸ ಮಾಡಿದ್ದೇನೆ. ನಾನೇಕೆ
ಸಚಿವ ಸ್ಥಾನ ತ್ಯಾಗ ಮಾಡಲಿ ?
– ಶಶಿಕಲಾ ಜೊಲ್ಲೆ, ಸಚಿವೆ ಯಡಿಯೂರಪ್ಪ ಮುಳ್ಳಿನ ಮೇಲೆ ಪಂಚೆ ಹಾಕಿದ್ದಾರೆ. ಪಂಚೆಯನ್ನು ಹುಷಾರಾಗಿ ತೆಗೆಯಬೇಕು. ಸಿಎಂಗೆ ಬಾಕಿ ಇರುವುದು ಎರಡೂವರೆ ವರ್ಷ ಅಷ್ಟೇ. ಅಷ್ಟರೊಳಗೆ ಏನಾದರೂ ಮಾಡಬೇಕಲ್ಲವೇ?
-ವಿ. ಶ್ರೀನಿವಾಸ್ ಪ್ರಸಾದ್, ಸಂಸದ