ರಾಜ್ಯದ 2022-23ನೇ ಸಾಲಿನ ಬಜೆಟ್‌ನಲ್ಲಿ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕ ಘಟಕಗಳಿಗೆ ಹೆಚ್ಚಿನ ಉತ್ತೇಜನಕಾರಿ ಅಂಶಗಳು ಕಂಡುಬರುತ್ತಿಲ್ಲ ಎಂಬ ವಿಶ್ಲೇಷಣೆಗಳು ಇವೆ. ಆದರೆ ಸಮಗ್ರವಾಗಿ ಪರಿಗಣಸಿದರೆ ಬಜೆಟ್‌ನಲ್ಲಿ ಘೋಷಿಸಿರುವ ಅಂಶಗಳು ಕೈಗಾರಿಕ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಒಂದಷ್ಟು ಧನಾತ್ಮಕ ಪರಿಣಾಮಗಳನ್ನು ಬೀರುವ ನಿರೀಕ್ಷೆ ಇದೆ.
ರಾಜ್ಯದ ಕರಾವಳಿ ಪ್ರದೇಶದ ಬಂದರು ಅಭಿವೃದ್ಧಿ ಹಾಗೂ ಕಡಲತೀರದ ವ್ಯಾಪಾರಕ್ಕೆ ಹೆಚ್ಚಿನ ಪ್ರಾಮುಖ್ಯವನ್ನು ನೀಡಲು ಅಂದಾಜು 1,800 ಕೋ.ರೂ. ವೆಚ್ಚದ ಯೋಜನೆಗಳನ್ನು ಯೋಜಿಸಿರುವುದು ಆರ್ಥಿಕ ಬೆಳವಣಿಗೆಗೆ ಪೂರಕ ಅಂಶ. ಕೆಐಎಡಿಬಿ ಮತ್ತು ಕೆ.ಎಸ್.ಎಸ್. ಐ.ಡಿ.ಸಿ. ಸ್ಥಾಪಿಸುವ ಹೊಸ ಕೈಗಾರಿಕ ಪ್ರದೇಶಗಳಲ್ಲಿ ಆರ್ಥಿಕ ದುರ್ಬಲ ವರ್ಗದವರು ಉದ್ಯಮ ಶೀಲ ರನ್ನಾಗುವಲ್ಲಿ ಉತ್ತೇಜನ ದಾಯಕ ವಾಗಿದೆ. ವಿದ್ಯುತ್ ಸರಬರಾಜು ಅಡಚಣೆ ನಿವಾರಿಸಲು ಘೋಷಿಸಿರುವ ಕ್ರಮಗಳು ಕೈಗಾರಿಕೆಗಳಿಗೆ ಪೂರಕವಾಗಲಿದೆ. ಬಜೆಟ್‌ನಲ್ಲಿ ಯಾವುದೇ ಹೆಚ್ಚುವರಿ ತೆರಿಗೆಗಳನ್ನು ವಿಧಿಸದಿರುವುದು ಕೈಗಾರಿಕ ವಲಯದಲ್ಲಿ ಸಮಾಧಾನ ಮೂಡಿಸಿದೆ.
ಕೆಐಟಿಎಸ್ ಅವರು ಎಲಿವೇಟ್ ಯೋಜನೆಯಡಿ ಗುರುತಿಸಲ್ಪಟ್ಟ ಮಹಿಳಾ ಉದ್ದಿಮೆದಾರರಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 10 ಲ.ರೂ. ತನಕ ನೇರ ಸಾಲವನ್ನು ಒದಗಿಸಿಕೊಡುವುದು ವ್ಯಾಪಾರ ಉದ್ದಿಮೆಗಳಲ್ಲಿ ಮಹಿಳೆಯರ ಉಪಸ್ಥಿತಿಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ. ಉದ್ಯೋಗ ಸೃಜನೆಗೆ ಒತ್ತು ನೀಡುವ ಸಮಗ್ರ ಉದ್ಯೋಗ ನೀತಿ ಜಾರಿಗೊಳಿಸಿ ಕೈಗಾರಿಕೆಗಳಿಗೆ ಹೆಚ್ಚುವರಿ ಪ್ರೋತ್ಸಾಹ ನೀಡುವ ಕ್ರಮ ಉದ್ಯೋಗ ಸೃಷ್ಟಿಗೆ ಪೂರಕವಾಗಬಹುದು. ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸುವುದು ಕೈಗಾರಿಕೆಗಳ ಅಭಿವೃದ್ಧಿಗೆ ಉತ್ತೇಜನದಾಯಕವಾಗಲಿದೆ.
ಸಾಮಾನ್ಯ ಸೌಲಭ್ಯ ಕೇಂದ್ರಗಳು ಮತ್ತು ಪ್ಲಗ್ ಅಂಡ್ ಪ್ಲೇ ಮೂಲಸೌಕರ್ಯಗಳೊಂದಿಗೆ ಬಹುಮಹಡಿ ಕಾರ್ಖಾನೆ ಸಂಕೀರ್ಣ ಸ್ಥಾಪನೆಯ ಪ್ರಸ್ತಾವನೆ ಉತ್ತಮ ಕ್ರಮವಾಗಿದ್ದು ರಾಜ್ಯದಲ್ಲಿ ಹೆಚ್ಚಿನ ಕಡೆಗಳಿಗೆ ಇದನ್ನು ವಿಸ್ತರಿಸಿದರೆ ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾಗಲಿದೆ. ರಾಜ್ಯದಲ್ಲಿ ಸೆಮಿಕಂಡಕ್ಟರ್ ತಯಾರಿಕೆಗೆ ಹೂಡಿಕೆದಾರರನ್ನು ಆಕರ್ಷಿಸಲು ವಿಶೇಷ ಪ್ರೋತ್ಸಾಹಕ ಕ್ರಮಗಳನ್ನು ಘೋಷಿಸಿರುವುದು ಹೆಚ್ಚಿನ ಉದ್ಯೋಗಾವಕಾಶಗಳ ಸೃಷ್ಟಿಗೆ ಪೂರಕವಾಗುವ ನಿರೀಕ್ಷೆ ಇದೆ. ಕೃಷಿ, ಮೀನುಗಾರಿಕೆ, ಆರೋಗ್ಯ, ಶಿಕ್ಷಣ, ಸಾರಿಗೆ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿರುವುದು ಸಮಗ್ರ ಅಭಿವೃದ್ಧಿಯಲ್ಲಿ ನಿರೀಕ್ಷಿತ ಫಲಿತಾಂಶ ನೀಡಬಹುದು.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯ ವಿಧಾನವನ್ನು ಸುಧಾರಿಸುವ ಭರವಸೆ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಪೂರಕವಾಗುವ ಆಶಾವಾದ ಇದೆ. ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಸ್ಟಾರ್ಟ್ ಅಪ್‌ಗ್ಳನ್ನು ಉತ್ತೇಜಿಸಲು ಕರ್ನಾಟಕ ಡಿಜಿಟಲ್ ಎಕನಾಮಿ ಮಿಷನ್‌ನಿಂದ ಕ್ಲಸ್ಟರ್‌ಗಳ ಸ್ಥಾಪನೆಗಾಗಿ ಪ್ರಸಕ್ತ ಸಾಲಿನಲ್ಲಿ 12 ಕೋ.ರೂ.ಗಳ ಅನುದಾನ ನೀಡಿರುವುದು ಬೆಂಗಳೂರಿನಿಂದ ಹೊರಗೆ ಐಟಿ ಉದ್ದಿಮೆಗಳು ವಿಸ್ತರಣೆಯಾಗುವುದಕ್ಕೆ ಹೆಚ್ಚು ಬಲ ನೀಡಲಿದೆ. ಮಂಗಳೂರು ಬಂದರನ್ನು 350 ಕೋ.ರೂ. ವೆಚ್ಚದಲ್ಲಿ ವಿಸ್ತರಣೆ ಮಾಡುವ ಪ್ರಸ್ತಾವನೆ ಕರಾವಳಿ ಭಾಗದಲ್ಲಿ ವಾಣಿಜ್ಯ ವ್ಯವಹಾರಗಳ ಅಭಿವೃದ್ಧಿಗೆ ಹೆಚ್ಚು ಪೂರಕವಾಗಬಹುದು.
– ವಿಶಾಲ್ ಸಾಲಿಯಾನ್,
ಅಧ್ಯಕ್ಷರು, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ, ಮಂಗಳೂರು