ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಮಂಡಿಸಿರುವುದು ಡೋಂಗಿ ಬಜೆಟ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಕುಮಾರಸ್ವಾಮಿ ಅವರು ಪ್ರತಿಪಕ್ಷಗಳ ಗದ್ದಲದ ನಡುವೆಯೇ ರಾಜ್ಯ ಬಜೆಟ್ ಅನ್ನು ಮಂಡಿಸಿದ್ದರು. ಏತನ್ಮಧ್ಯೆ ಬಜೆಟ್ ಪುಸ್ತಕ ನೀಡದಿರುವುದನ್ನು ಖಂಡಿಸಿ ಬಿಜೆಪಿ ಶಾಸಕರು ಕಲಾಪ ಬಹಿಷ್ಕರಿಸಿ ಹೊರನಡೆದಿದ್ದರು.
ಬಜೆಟ್ ನಲ್ಲಿ ತನ್ನ ಸಹೋದರನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಘೋಷಿಸಿದ್ದಾರೆ. ನಾವು ಕೇಂದ್ರ ಸರ್ಕಾರಕ್ಕಿಂತ ಉತ್ತಮ ಬಜೆಟ್ ಕೊಡುತ್ತೇವೆ ಎಂದು ಹೇಳಿದ್ದ ಕುಮಾರಸ್ವಾಮಿ ಈಗ ಡೋಂಗಿ ಬಜೆಟ್ ಮಂಡಿಸಿದ್ದಾರೆ ಎಂದು ಟೀಕಿಸಿದ್ದಾರೆ. ರೈತರ ಸಾಲಮನ್ನಾಕ್ಕಾಗಿ 45 ಸಾವಿರ ಕೋಟಿ ರೂ. ಹಣವನ್ನು ಒಂದೇ ಕಂತಿನಲ್ಲಿ ನೀಡುವುದಾಗಿ ಭರವಸೆಯನ್ನು ಈಡೇರಿಸಿಲ್ಲ. ರೈತರ ಸಾಲಮನ್ನಾಕ್ಕಾಗಿ ಈ ಬಜೆಟ್ ನಲ್ಲಿ 12,350 ಕೋಟಿ ಮಾತ್ರ ಮೀಸಲಿಟ್ಟಿದ್ದಾರೆ ಎಂದು ದೂರಿದರು.
ನಮ್ಮದು ರೈತ, ಜನಪರ ಬಜೆಟ್: ಕುಮಾರಸ್ವಾಮಿ
ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಬಜೆಟ್ ಗಾತ್ರ, ವಿತ್ತೀಯ ಕೊರತೆ, ರಾಜಸ್ವ ಕೊರತೆಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ರೈತರ ಸಾಲಮನ್ನಾ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಆದರೆ ನಮ್ಮ ದೇಶದ ಸಾಲಮನ್ನಾ ದೇಶಕ್ಕೆ ಮಾದರಿಯಾಗಿದೆ. ನಮ್ಮದು ರೈತ ಮತ್ತು ಜನಪರ ಬಜೆಟ್ ಆಗಿದೆ ಎಂದು ಹೇಳಿದರು.
ಒಳ್ಳೆಯ ಬಜೆಟ್; ಸಿದ್ದರಾಮಯ್ಯ
ನನ್ನ ಸರ್ಕಾರದ ಅವಧಿಯಲ್ಲಿನ ಯೋಜನೆಗಳಿಗೆ ಅನುದಾನ ನೀಡಲಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಲಾಗಿದೆ. ಇನ್ನುಳಿದಂತೆ ಯಾವುದಕ್ಕೆ ಆದ್ಯತೆ ನೀಡಿದ್ದಾರೆ ಎಂಬುದನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.