ಮೈಸೂರು: ಶಾಂತಿ, ಸಹನೆ ಹಾಗೂ ಪಾವಿತ್ರ್ಯತೆ ಈ ಮೂರು ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಸ್ವಾಸ್ಥÂ ನೆಲೆಸಲಿದೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿವಿ
ಮುಖ್ಯಸ್ಥೆ ರಾಜಯೋಗಿನಿ ದಾದಿ ಜಾನಕೀಜಿ ಹೇಳಿದರು.
ತಾಲೂಕಿನ ಲಿಂಗದೇವರು ಕೊಪ್ಪಲಿನ ಜ್ಞಾನ ಸರೋವರದಲ್ಲಿ ಆಯೋಜಿಸಿದ್ದ “ಕರ್ನಾಟಕ ಸಂತ ಸಮಾಗಮ’ ಸಮಾರಂಭ ಉದ್ಘಾಟಿಸಿ ಮಾತನಾಡಿ, 82 ವರ್ಷಗಳಿಂದ ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಸೇವೆಯ ಮೂಲಕ ಜೀವನದಲ್ಲಿ ಸಾರ್ಥಕತೆ ಕಂಡುಕೊಂಡಿದ್ದೇನೆ.
ಜೀವನದಲ್ಲಿ ಶಾಂತಿ ಅನುಭವಿಸುವುದು ಮುಖ್ಯ. ಅಶಾಂತ ಮನಸ್ಥಿತಿ ಯಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಹೀಗಾಗಿ ಶಾಂತ ಮನಸ್ಥಿತಿಯಿಂದ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕು.
ಓಂ ಶಾಂತಿ ಎಂದು ಹೇಳುವುದರಿಂದಲೇ ಮನಸ್ಸಿನಲ್ಲಿ ಶಾಂತಿ ನೆಲೆಗೊಳ್ಳುತ್ತದೆ ಎಂದರು. ರಾಜಯೋಗಿನಿ
ಬಿ.ಕೆ.ಆಶಾಜೀ, ಕೊಡಗಿನ ಅರಮೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಆತ್ಮಜ್ಞಾನಂದ ಮಹಾರಾಜ್ ಮಾತನಾಡಿದರು.
ಹುಟ್ಟುಹಬ್ಬ ಆಚರಣೆ: ಅಬು ಪರ್ವತದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ರಾಜಯೋಗಿನಿ ದಾದಿ ಜಾನಕೀಜಿ ಅವರ 102ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಜತೆಗೆ ಸಂಸ್ಥೆಯ 82ನೇ ವಾರ್ಷಿಕೋತ್ಸವ ಪ್ರಯುಕ್ತ 82 ಜ್ಯೋತಿಗಳನ್ನು ಬೆಳಗಿಸಲಾಯಿತು. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ 200ಕ್ಕೂ ಹೆಚ್ಚು ಮಠಾಧೀಶರುಗಳು ಸಂತ ಸಮಾಗಮಕ್ಕೆ ಸಾಕ್ಷಿಯಾದರು.