ಪುಣೆ: ಕರ್ನಾಟಕ ಸಂಘ ಪುಣೆ ವತಿಯಿಂದ ಪುರಂದರದಾಸರ ಪುಣ್ಯತಿಥಿ ಹಾಗೂ ಭಾರತರತ್ನ ಪಂಡಿತ್ ಭೀಮ್ ಸೇನ್ ಜೋಶಿ ಅವರ 96 ನೇ ಜಯಂತ್ಯುತ್ಸವವನ್ನು ಫೆ 4ರಂದು ಗರ್ವಾರೆ ಕಾಲೇಜು ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಪಂಡಿತ್ ಭೀಮ್ ಸೇನ್ ಜೋಶಿಯವರ ಶಿಷ್ಯರಾದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕರಾದ ಪಂಡಿತ್ ಉಪೇಂದ್ರ ಭಟ್ ಅವರಿಂದ ಸಂಗೀತ್ ಸಂಧ್ಯಾ ಕಾರ್ಯಕ್ರಮ ನಡೆಯಿತು. ಪಂಡಿತ್ ಉಪೇಂದ್ರ ಭಟ್ ಅವರು ಪಂಡಿತ್ ಭೀಮ್ ಸೇನ್ ಜೋಶಿಯವರ ಅನೇಕ ದೇಶಭಕ್ತಿ ಗೀತೆಗಳನ್ನು, ದಾಸವಾಣಿ, ಭಾವಗೀತೆ, ರಂಗಗೀತೆ, ಭಕ್ತಿಗೀತೆ ಹಾಗೂ ಚಲನಚಿತ್ರ ಗೀತೆಗಳನ್ನು ಹಾಡಿ ಸೇರಿದ್ದ ಪ್ರೇಕ್ಷಕರನ್ನು ರಂಜಿಸಿದರು.
ಮೊದಲಿಗೆ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಘದ ಅಧ್ಯಕ್ಷೆ ರಮಾ ಹರಿಹರ್ ಸ್ವಾಗತಿಸಿ ಮಾತನಾಡಿ, ದಾಸ ಶ್ರೇಷ್ಠರಾದ ಪುರಂದರದಾಸರ ಆರಾಧನೆಯನ್ನು ಪ್ರತೀ ವರ್ಷ ಸಂಘದ ವತಿಯಿಂದ ಮಾಡಲಾಗುತ್ತಿದ್ದು, ಈ ವರ್ಷ ಪಂಡಿತ್ ಭೀಮ್ ಸೇನ್ ಜೋಶಿಯವರ 96 ನೇ ಜಯಂತ್ಯುತ್ಸವವನ್ನೂ ಆಚರಿಸುತ್ತಾ ಮಹಾನ್ ಚೇತನಗಳನ್ನು ಸ್ಮರಿಸುವ ಕಾರ್ಯವನ್ನು ಅಭಿಮಾನದೊಂದಿಗೆ ಮಾಡುತ್ತಿದ್ದೇವೆ. ಸಂಘದ ಸದಸ್ಯರೆಲ್ಲರ ಸಹಕಾರದಿಂದ ಇದು ಸಾಧ್ಯವಾಗುತ್ತದೆ ಎಂದರು.
ಸಂಘದ ವಿಶ್ವಸ್ತರಾದ ಹರಿಹರ್ ಅವರು ಪಂಡಿತ್ ಉಪೇಂದ್ರ ಭಟ್ ಅವರನ್ನು ನೆನಪಿನ ಕಾಣಿಕೆ ಹಾಗೂ ಪುಷ್ಪಗುತ್ಛವನ್ನಿತ್ತು ಸತ್ಕರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣ ಮಮದಾಪೂರ ಹಾಗೂ ಪದಾಧಿಕಾರಿಗಳು ಇನ್ನಿತರ ಕಲಾವಿದರನ್ನು ಗೌರವಿಸಿದರು.
ಪರಿಮಳಾ ಹುಲ್ಯಾಳ್ಕರ್ ನಿರೂಪಿಸಿದರು.ಮಿರ್ಜಿ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಬಹು ಸಂಖ್ಯೆಯಲ್ಲಿ ಕರ್ನಾಟಕ ಸಂಘದ ಸದಸ್ಯರು ಹಾಗೂ ಕನ್ನಡಿಗರು ಉಪಸ್ಥಿತರಿದ್ದರು
ಚಿತ್ರ -ವರದಿ :ಕಿರಣ್ ಬಿ.ರೈ ಕರ್ನೂರು