ಮುಂಬಯಿ: ಕರ್ನಾಟಕ ಸಂಘ ಮುಂಬಯಿ ಇದರ ಪ್ರಾಯೋಜಕತ್ವದಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಆಶ್ರಯದಲ್ಲಿ ತವರೂರ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಸಮರ ಸೌಗಂಧಿಕ ಯಕ್ಷಗಾನ ತಾಳಮದ್ದಳೆಯು ಆ. 23 ರಂದು ಅಪರಾಹ್ನ ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಜರಗಿತು.
ಪ್ರಾರಂಭದಲ್ಲಿ ಕರ್ನಾಟಕ ಸಂಘ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಭರತ್ ಕುಮಾರ್ ಪೊಲಿಪು ಅವರು ಅಜೆಕಾರು ಕಲಾಭಿಮಾನಿ ಬಳಗದ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಹಾಗೂ ತಾಳಮದ್ದಳೆಯ ಕಲಾವಿದರನ್ನು ಪುಷ್ಪಗುತ್ಛವನ್ನಿತ್ತು ಸ್ವಾಗತಿಸಿ ಶುಭಹಾರೈಸಿದರು. ಮಾಜಿ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಅವರು ಕಲಾವಿದರನ್ನು ಪರಿಚಯಿಸಿ ಕರ್ನಾಟಕ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಸಿದ್ಧ ಯಕ್ಷಗಾನ ಕಲಾವಿದ ಭಾಸ್ಕರ್ ರೈ ಕುಕ್ಕುವಳ್ಳಿ ಅವರು, ಕರ್ನಾಟಕ ಸಂಘ ಮುಂಬಯಿ ಇಂದು ತಾಳಮದ್ದಳೆಯನ್ನು ಆಯೋಜಿಸಿ ಊರಿನ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿರುವುದು ಹೆಮ್ಮೆಯಾಗುತ್ತಿದೆ. ಅಜೆಕಾರು ಕಲಾಭಿಮಾನಿ ಬಳಗವು ಕಳೆದ 17 ವರ್ಷಗಳಿಂದ ಸರಣಿ ತಾಳಮದ್ದಳೆಯನ್ನು ಆಯೋಜಿಸುತ್ತಿದ್ದು, ಕರ್ನಾಟಕ ಸಂಘ ಮುಂಬಯಿ ನಿರಂತರವಾಗಿ ಪ್ರೋತ್ಸಾಹ ನೀಡುತ್ತಾ ಬಂದಿದೆ. ಮುಂದೆಯೂ ಸಂಘದ ಪ್ರೋತ್ಸಾಹ, ಸಹಕಾರ ಸದಾ ಇರಲಿ ಎಂದರು.
ಯಕ್ಷಗಾನ ತಾಳಮದ್ದಳೆಯ ಮುಮ್ಮೇಳದಲ್ಲಿ ಭಾಗವತರಾಗಿ ಹೆಬ್ರಿ ಗಣೇಶ್, ಚೆಂಡೆಯಲ್ಲಿ ದಯಾನಂದ ಶೆಟ್ಟಿಗಾರ್, ಮದ್ದಳೆಯಲ್ಲಿ ಪ್ರಶಾಂತ್ ಶೆಟ್ಟಿ ವಗೆನಾಡು, ಅರ್ಥಧಾರಿಗಳಾಗಿ ಶಂಭು ಶರ್ಮ ವಿಟ್ಲ, ಭಾಸ್ಕರ್ ರೈ ಕುಕ್ಕುವಳ್ಳಿ, ಸದಾಶಿವ ಆಳ್ವ ತಲಪಾಡಿ, ವಿಜಯಶಂಕರ್ ಅಳಿಕೆ, ವೇಣುಗೋಪಾಲ್ ಭಟ್ ಶೇಣಿ ಅವರು ಭಾಗವಹಿಸಿದ್ದರು.
ದಿನೇಶ್ ಶೆಟ್ಟಿ ವಿಕ್ರೋಲಿ ಸಹಕರಿಸಿದರು. ಕರ್ನಾಟಕ ಸಂಘ ಮುಂಬಯಿ ಕೋಶಾಧಿಕಾರಿ ಎಂ. ಡಿ. ರಾವ್ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಕಲಾಭಿಮಾನಿಗಳು, ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಚಿತ್ರ-ವರದಿ : ಸುಭಾಶ್ ಶಿರಿಯಾ