ಡೊಂಬಿವಲಿ:ವಿದ್ಯಾರ್ಥಿಗಳು ತಂದೆ-ತಾಯಿ ನಮಗೆ ಏನು ಕೊಟ್ಟಿದ್ದಾರೆ ಎನ್ನುವುದಕ್ಕಿಂತ ತಾನು ಏನು ಸಾಧನೆ ಮಾಡಿದ್ದೇನೆ, ನನ್ನ ತಂದೆ-ತಾಯಿಗೆ ಯಾವ ರೀತಿಯಲ್ಲಿ ಗೌರವ ನೀಡಿದ್ದೇನೆ ಎಂದು ತಿಳಿದಾಗ ಉತ್ತರ ಸಿಗುತ್ತದೆ. ಗುರುಗಳು ಎಲ್ಲರಿಗೂ ಒಂದೇ ತರಹ ಕಲಿಸುತ್ತಾರೆ. ವಿದ್ಯಾರ್ಥಿಗಳು ಅವರವರ ಬುದ್ಧಿಶಕ್ತಿಯಂತೆ ಕಲಿಯುತ್ತಾರೆ. ಮಾತಾಪಿತರು ತಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ತುಲನೆ ಮಾಡದೆ ಮಕ್ಕಳನ್ನು ತಮ್ಮ ಬುದ್ಧಿಶಕ್ತಿಗೆ ಅನುಗುಣವಾಗಿ ಕಲಿಯಲು ಬಿಟ್ಟಾಗ ಉತ್ತಮ ಫಲಿತಾಂಶ ಬರುತ್ತದೆ. ಹಿಂದೆ ವೈಫಲ್ಯವನ್ನು ಕಂಡವರು ಚರಿತ್ರೆಯನ್ನು ನಿರ್ಮಿಸಿದ್ದಾರೆ. ವಿದ್ಯಾರ್ಥಿಗಳೆಲ್ಲ ಶ್ರದ್ಧೆಯಿಂದ ಕಲಿತು ಸಮಾಜವನ್ನು ಕಟ್ಟಲು ಮುಂದಾಗಬೇಕು. ಮಂಜುನಾಥ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಉದ್ಯೋಗಸ್ಥರಾಗದೆ ಇತರರಿಗೆ ಉದ್ಯೋಗ ನೀಡುವವರಾಗಬೇಕು. ಆಗ ಕಲಿತ ಕಾಲೇಜಿಗೆ ಕೀರ್ತಿ ಬರುತ್ತದೆ ಎಂದು ಚಾರ್ಟರ್ಡ್ ಅಕೌಂಟೆಂಟ್ ಹರೀಶ್ ಹೆಗ್ಡೆ ನುಡಿದರು.
ಜ. 16ರಂದು ಸಂಜೆ ಕಲ್ಯಾಣ್ ಪಶ್ಚಿಮದ ಕೇಶವ ಅತ್ರೆ ರಂಗಮಂದಿರದಲ್ಲಿ ನಡೆದ ಕರ್ನಾಟಕ ಸಂಘ ಡೊಂಬಿವಲಿ ಸಂಚಾಲಿತ ಮಂಜುನಾಥ ಜೂನಿಯರ್ ಕಾಲೇಜಿನ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ ಸ್ಪರ್ಶ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶೈಕ್ಷಣಿಕ ರಂಗದಲ್ಲಿ ಡೊಂಬಿವಲಿ ಕರ್ನಾಟಕ ಸಂಘದ ಸಾಧನೆ ಅನುಪಮವಾಗಿದ್ದು, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸುಸಂಸ್ಕೃತರಾಗಿ ಬೆಳೆಯಲು ಇಲ್ಲಿ ಎಲ್ಲ ರೀತಿಯ ಸೌಲಭ್ಯಗಳಿವೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದು ನುಡಿದು ಶುಭಹಾರೈಸಿದರು.
ಅತಿಥಿಯಾಗಿ ಆಗಮಿಸಿದ ಕರ್ಜತ್ ಕಾಲೇಜ್ ಆಫ್ ಆರ್ಟ್ಸ್ ಆ್ಯಂಡ್ ಸಾಯನ್ಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ರವೀಂದ್ರ ದೇಶು¾ಖ್ ಅವರು ಮಾತನಾಡಿ, ತಂದೆ-ತಾಯಿ ತಮ್ಮ ಮಕ್ಕಳು ಉತ್ತಮವಾಗಿ ಕಲಿತು ಒಳ್ಳೆಯವರಾಗಬೇಕು ಎಂದು ಬಯಸುತ್ತಾರೆ. ಹೆತ್ತವರು ಮಕ್ಕಳಿಗೆ ಯಾವುದೇ ವಿಷಯದ ಮೇಲೆ ಒತ್ತಡ ಹಾಕಬಾರದು. ಅವರ ಅಭಿರುಚಿಗೆ ತಕ್ಕಂತೆ ಅವರನ್ನು ಪ್ರೋತ್ಸಾಹಿಸಿ ಬೆಳೆಸಬೇಕು. ನಾನು ವಿದ್ಯಾರ್ಥಿ ಜೀವನದಿಂದಲೇ ಆದರ್ಶವನ್ನು ಪಾಲಿಸಿದ ಪರಿಣಾಮ ಈ ಮಟ್ಟಕ್ಕೆ ಬೆಳೆದಿದ್ದೇನೆ. ಮಕ್ಕಳ ಜೀವನ ರೂಪಿಸುವಲ್ಲಿ ತಂದೆ, ತಾಯಿ, ಗುರುಗಳ ಪಾತ್ರ ಮಹತ್ತರವಾಗಿದೆ. ಮಕ್ಕಳು ಕಲಿತ ಶಾಲೆಯನ್ನು ಮರೆಯಬಾರದು ಎಂದರು.
ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳು ಆದರ್ಶ ಪ್ರಜೆಗಳಾಗಬೇಕು ಎಂದು ಶಿಕ್ಷಣ ಸಂಸ್ಥೆ ಸದಾ ಪ್ರಯತ್ನಿಸುತ್ತಿದೆ. ಇಂದು ಬಹುಮಾನ ಪಡೆದ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದಾಗ ಆ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಈ ಸಾಧನೆಯನ್ನು ಮಾಡಬಹುದು. ಕರ್ನಾಟಕ ಸಂಘ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಶಿಸ್ತಿಗೆ ಹೆಸರಾಗಿದೆ. ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳು ವಿದ್ಯಾರ್ಜನೆಯಲ್ಲಿ ತೊಡಗಿ ಶಿಕ್ಷಣ ಸಂಸ್ಥೆಯ ಹೆಸರನ್ನು ಬೆಳಗಿಸಬೇಕು ಎಂದರು.
ಸಂಘದ ಕಾರ್ಯಾಧ್ಯಕ್ಷ ಸುಕುಮಾರ್ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜಿನಲ್ಲಿ ಪ್ರತೀ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಂಸ್ಥೆಯ ಪ್ರಸಿದ್ಧಿಯನ್ನು ಸೂಚಿಸುತ್ತದೆ. ವಿದ್ಯಾರ್ಥಿಗಳಿಗೆ ಬೇಕಾಗುವ ಎಲ್ಲ ರೀತಿಯ ಸೌಕರ್ಯಗಳು ಹಾಗೂ ಮುಂದಿನ ದಿನಗಳಲ್ಲಿ ಕ್ರೀಡಾ ಮೈದಾನವನ್ನು ಹೊಂದುವ ಯೋಜನೆಯನ್ನು ನಾವು ಹೊಂದಿದ್ದೇನೆ ಎಂದರು.
ಡಾ| ವಿ. ಎಸ್. ಅಡಿಗಲ್ ಅವರು ಜೂನಿಯರ್ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಗೌರವ ಕಾರ್ಯದರ್ಶಿ ದೇವದಾಸ್ ಕುಲಾಲ್, ಡಾ| ದಿಲೀಪ್ ಕೋಪರ್ಡೆ ಅವರು ಅತಿಥಿಗಳನ್ನು ಪರಿಚಯಿಸಿದರು. ಬಹುಮಾನ ವಿಜೇತರ ಯಾದಿಯನ್ನು ಡಾ| ಪಾರ್ವತಿ ಪಾಟೀಲ್ ಅವರು ಓದಿದರು. ಇದೇ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ನ್ಯಾಯವಾದಿ ಆರ್. ಎನ್. ಭಂಡಾರಿ, ಅಜಿತ್ ಉಮ್ರಾಣಿ, ಸುಬ್ಬಯ್ಯ ಶೆಟ್ಟಿ, ಸುಷ್ಮಾ ಶೆಟ್ಟಿ, ಮಾಧುರಿಕಾ ಬಂಗೇರ, ಸತೀಶ್ ಶೆಟ್ಟಿ ಮೊದಲಾದವರನ್ನು ಗೌರವಿಸಲಾಯಿತು.
ಪ್ರೊ| ಸುಶೀಲಾ ಕಾರ್ಯಕ್ರಮ ನಿರ್ವಹಿಸಿದರು. ನಮಿತಾ ಪೂಜಾರಿ ವಂದಿಸಿದರು. ವೇದಿಕೆಯಲ್ಲಿ ಅಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ, ಕಾರ್ಯಾಧ್ಯಕ್ಷ ಸುಕುಮಾರ್ ಎನ್. ಶೆಟ್ಟಿ, ಸಿಎ ಹರೀಶ್ ಹೆಗ್ಡೆ, ರವೀಂದ್ರ ದೇಶು¾ಖ್, ದಿಲೀಪ್ ಕೋಪರ್ಡೆ, ದೇವದಾಸ್ ಕುಲಾಲ್, ರಮೇಶ್ ಕಾಖಂಡಕಿ, ಲೋಕನಾಥ ಶೆಟ್ಟಿ, ಡಾ| ವಿ. ಎಸ್. ಅಡಿಗಲ್, ಡಾ| ಪಾರ್ವತಿ ಪಾಟೀಲ್, ನಮಿತಾ ಪೂಜಾರಿ, ಶಿವಾಂಗಿ ಸಿಂಗ್ ಉಪಸ್ಥಿತರಿದ್ದರು.
ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು, ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕ ವೃಂದದವರು, ಶಿಕ್ಷಕೇತರ ಸಿಬಂದಿ ಪಾಲ್ಗೊಂಡು ಸಹಕರಿಸಿದರು.