Advertisement

Karnataka Sambhrama 50: ಕನ್ನಡ ಜ್ಯೋತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಭವ್ಯ ಸ್ವಾಗತ

12:45 PM Nov 03, 2023 | Team Udayavani |

ಗದಗ: ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯವೆಂದು ನಾಮಕರಣಗೊಂಡು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಚರಿಸುತ್ತಿರುವ ಕನ್ನಡ ಸಂಭ್ರಮ-50ರ ಅಂಗವಾಗಿ ಹಂಪಿಯಿಂದ ಆಗಮಿಸಿದ ಕನ್ನಡ ಜ್ಯೋತಿಯನ್ನು ನಗರದ ಐತಿಹಾಸಿಕ ವೀರನಾರಾಯಣ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅದ್ದೂರಿಯಾಗಿ ಬರಮಾಡಿಕೊಂಡರು.

Advertisement

ಶ್ರೀ ವೀರನಾರಾಯಣನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಅವರು ಬಳಿಕ ದೇವಸ್ಥಾನದ ಆವರಣದಲ್ಲಿ ನಾಡದೇವತೆ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪಾರ್ಚನೆ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. 1973ರ ನ. 3ರಂದು ನಡೆದ ಕರ್ನಾಟಕ ನಾಮಕರಣ ಸಂಭ್ರಮದ ಕಾರ್ಯಕ್ರಮವನ್ನು 2023ರ ನ. 3ರಂದು 50 ವರ್ಷದ ಸುವರ್ಣ ಸಂಭ್ರವನ್ನು ಪುನರಪಿಯಾಗಿ ಆಚರಿಸುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಜೊತೆಗೆ, 1973ರ ನ. 3ರಂದು ಸಾಗಿದ ಮೆರವಣಿಗೆಯು ಮಾರ್ಗದಲ್ಲಿಯೇ ಸಾಗಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ವಿಧಾನಸಭಾಧ್ಯಕ್ಷ ಯು.ಟಿ. ಖಾದರ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಪೌರಾಡಳಿತ ಸಚಿವ ರಹೀಂಖಾನ್, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ, ಶಾಸಕರಾದ ಜಿ.ಎಸ್. ಪಾಟೀಲ, ಶ್ರೀನಿವಾಸ ಮಾನೆ, ಜೆ.ಟಿ. ಪಾಟೀಲ, ಸರಕಾರದ ಮುಖ್ಯಸಚೇತಕ ಸಲೀಂ ಅಹ್ಮದ್, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಸೇರಿ ಹಲವರು ಇದ್ದರು.

ವೀರನಾರಾಯಣ ದೇವಸ್ಥಾನದಲ್ಲಿ ವಿಶೇಷ ಅಲಂಕಾರ

ಕನ್ನಡ ಸಂಭ್ರಮ-50ರ ಹಿನ್ನೆಲೆಯಲ್ಲಿ ನಗರದ ಪುರಾತನ ವೀರನಾರಾಯಣ ದೇವಸ್ಥಾನವನ್ನು ವಿವಿಧ ಹೂಗಳಿಂದ ಅಲಂಕಾರಗೊಳಿಸಲಾಗಿತ್ತು. ವೀರನಾರಾಯಣನಿಗೆ ವಿಶೇಷ ಪೂಜೆ ಜೊತೆಗೆ ಅಲಂಕಾರ ಮಾಡಲಾಗಿತ್ತು. ಕುಮಾರವ್ಯಾಸ ಸ್ಥಂಭಕ್ಕೂ ಅಲಂಕಾರ ಮಾಡಲಾಗಿತ್ತು. ಸಿಎಂ ಆಗಮನ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Advertisement

ಅದ್ದೂರಿ ಮೆರವಣಿಗೆ

ಮೈಸೂರಿನ ಚಂಡೆ ಮದ್ದಳೆ ಕಲಾತಂಡ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 25ಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಯುದ್ದಕ್ಕೂ ಕಲಾಪ್ರದರ್ಶನ ನೀಡಿದವು. ಮೈಸೂರು ದಸರಾದಲ್ಲಿ ಪ್ರದರ್ಶನಗೊಂಡ ಸಬರಮತಿ ಆಶ್ರಮ, ಲಕ್ಕುಂಡಿಯ ಬ್ರಹ್ಮಜೀನಾಲಯ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಗತವೈಭವ ಸಾರಿದವು. ನಗರಸಭೆ ವತಿಯಿಂದ ಭುವನೇಶ್ವರಿ, ಸರಕಾರದಿಂದ ಅಧಿಕೃತಗೊಳಿಸಲಾದ ಲಾಂಛನ ಹಾಗೂ ಭುನೇಶ್ವರಿ ದೇವಿ ಮೂರ್ತಿ, ಕುಂಭಹೊತ್ತ ಮಹಿಳೆಯರು, ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಮೆರವಣಿಗೆಗೆ ರಂಗು ತುಂಬಿದರು.

Advertisement

Udayavani is now on Telegram. Click here to join our channel and stay updated with the latest news.

Next