Advertisement

Karnataka ;ಸಾರಿಗೆ ನೌಕರರ ವೇತನ ಶೇ. 12-15 ಹೆಚ್ಚಳ?

11:43 PM May 16, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ 4 ವರ್ಷಗಳಿಗೊಮ್ಮೆ ನಡೆಯುವ ಸಾರಿಗೆ ನೌಕರರ ವೇತನ ಪರಿಷ್ಕರಣೆ ಚರ್ಚೆ ಮುನ್ನೆಲೆಗೆ ಬಂದಿದ್ದು, ಈ ಬಾರಿಯೂ ಶೇ. 12ರಿಂದ 15ರಷ್ಟು ವೇತನ ಹೆಚ್ಚಳ ಮಾಡುವ ಸಂಬಂಧ ಚಿಂತನೆ ನಡೆದಿದೆ.

Advertisement

ಕಳೆದ ಬಾರಿ ಅಂದರೆ 2023ರಲ್ಲಿ ಸರಕಾರ ಅಳೆದು-ತೂಗಿ ಶೇ. 15ರಷ್ಟು ವೇತನ ಪರಿಷ್ಕರಣೆ ಮಾಡಿತ್ತು. ಇದು 2020ರ ಜ. 1ರಿಂದ ಪೂರ್ವಾನ್ವಯ ಆಗುವಂತೆ ಆದೇಶ ಹೊರಡಿಸಲಾಗಿತ್ತು. ಇದರಲ್ಲಿ 38 ತಿಂಗಳ ವೇತನ ಪರಿಷ್ಕರಣೆಯ ಬಾಕಿ ಇನ್ನೂ ಪಾವತಿ ಮಾಡಬೇಕಿದೆ. ಅಷ್ಟರಲ್ಲಿ ಮತ್ತೂಂದು ಪರಿಷ್ಕರಣೆ ಸಮಯ ಬಂದಿದೆ. ಈ ಹಿನ್ನೆಲೆಯಲ್ಲಿ ಸರಕಾರ ಈಗ ಮೂರು ವರ್ಷಗಳ ಹಿಂಬಾಕಿ ಸಹಿತ ಮುಂದಿನ ನಾಲ್ಕು ವರ್ಷದ ವೇತನ ಹೆಚ್ಚಳ ಮಾಡಬೇಕಾದ ಇಕ್ಕಟ್ಟಿಗೆ ಸಿಲುಕಿದೆ. ಸಾರ್ವತ್ರಿಕ ಚುನಾವಣೆಯು ಸರಕಾರಕ್ಕೆ ತುಸು ನೆಮ್ಮದಿ ನೀಡಿತ್ತು. ಚುನಾವಣೆ ಮುಗಿಯುತ್ತಿದ್ದಂತೆ ಈ ಸಂಬಂಧದ ಚರ್ಚೆ ಆರಂಭವಾಗಿದೆ. ಈಗಾಗಲೇ ಸಾರಿಗೆ ನೌಕರರ ವಿವಿಧ ಸಂಘಟನೆಗಳು ಸಾರಿಗೆ ಸಚಿವರು ಮತ್ತು ಕೆಎಸ್ಸಾರ್ಟಿಸಿ ಆಡಳಿತ ಮಂಡಳಿ ಯನ್ನು ಭೇಟಿಯಾಗಿ ಮನವಿ ಸಲ್ಲಿಸಿವೆ. ಅದರ ಮೇಲೆ ಸಚಿವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆಯೂ ನಡೆದಿದೆ. ಆದರೆ ನೀತಿಸಂಹಿತೆ ಅನಂತರ ಈ ಸಂಬಂಧದ ಪ್ರಕ್ರಿಯೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ.

“ಶಕ್ತಿ’ಯಿಂದ ಹೆಚ್ಚಿದ ಒತ್ತಡ!
ಸಾರಿಗೆ ನೌಕರರು ಶಕ್ತಿ ಗ್ಯಾರಂಟಿ ಯಶಸ್ಸಿನ ರೂವಾರಿಗಳು, ಇದರಿಂದ ಆದಾಯ ಹೆಚ್ಚಿದೆ ಎಂದು ಸರಕಾರ ಹೇಳಿದೆ.

ಈ ಮಧ್ಯೆ ಸರಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ಚಿಂತನೆ ನಡೆದಿದೆ. ಇದೆಲ್ಲವೂ ಸಹಜವಾಗಿ ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಒತ್ತಡ ಹೆಚ್ಚುವಂತೆ ಮಾಡಿದೆ. ಅದೆಲ್ಲವನ್ನೂ ಪರಿಗಣಿಸಿ ಕಳೆದ ಬಾರಿಯಂತೆ ಈ ಸಲವೂ ಶೇ. 12ರಿಂದ 15ರಷ್ಟು ವೇತನ ಪರಿಷ್ಕರಣೆ ಮಾಡುವ ಸಂಬಂಧ ಚರ್ಚೆ ನಡೆದಿದೆ. ಆದರೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಸಾರಿಗೆ ನೌಕರರ ಒಕ್ಕೂಟ ಮತ್ತು ರಾಜ್ಯ ಸಾರಿಗೆ ಸಂಸ್ಥೆ ನಡುವಿನ ಒಪ್ಪಂದದ ಪ್ರಕಾರ ಪ್ರತೀ 4 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಬೇಕು. ಆದರೆ ಕೆಲವು ಬಾರಿ ಇದು ನಿಯಮಿತವಾಗಿ ಆಗುವುದೇ ಇಲ್ಲ. 2020ರ ಜನವರಿಯಲ್ಲಿ ಆಗಬೇಕಾದ ಪರಿಷ್ಕರಣೆ 2023ರಲ್ಲಾಯಿತು. ಅದು 2023ರ ಮಾ. 1ರಿಂದ ಜಾರಿಗೆ ಬಂದಿದೆ. ಅದಕ್ಕೂ ಹಿಂದಿನ 38 ತಿಂಗಳ ಬಾಕಿ 1,700 ಕೋಟಿ ರೂ. ಇದೆ. ಇನ್ನೂ ವಿಚಿತ್ರವೆಂದರೆ ಬಿಎಂಟಿಸಿ ನೌಕರರಿಗೆ 16 18 ತಿಂಗಳ ತುಟ್ಟಿಭತ್ತೆ, ರಜೆ ನಗದೀಕರಣ ಮೊತ್ತ ಕೂಡ ಬಾಕಿ ಉಳಿಸಿಕೊಳ್ಳಲಾಗಿದೆ. ಅಷ್ಟರಲ್ಲಿ ಈಗ ಮತ್ತೂಂದು ಪರಿಷ್ಕರಣೆ ಸಮಯ ಬಂದಿದೆ. ಇದು ಕಳೆದ ಜನವರಿಯಲ್ಲೇ ಆಗಬೇಕಿತ್ತು. ಚುನಾವಣೆ ನೆಪದಲ್ಲಿ ಮುಂದೂಡಲ್ಪಟ್ಟಿತು ಎಂದು ಸಾರಿಗೆ ನೌಕರರ ಒಕ್ಕೂಟ ಮತ್ತು ಸಾರಿಗೆ ಸಂಸ್ಥೆ ಸಿಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಈ ಸಂಬಂಧದ ಚರ್ಚೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಸಾರಿಗೆ ಇಲಾಖೆಗೆ ಪ್ರಸ್ತಾವನೆ ಕೂಡ ಸಲ್ಲಿಕೆ ಆಗಿಲ್ಲ. ಸಾರಿಗೆ ಸಂಸ್ಥೆಯ ಆಡಳಿತ ಮಂಡಳಿ ಹಂತದಲ್ಲೇ ಚರ್ಚೆ ನಡೆದಿದೆ.
ಅಷ್ಟಕ್ಕೂ ಕಳೆದ ವರ್ಷವಷ್ಟೇ ಪರಿಷ್ಕರಣೆ ಮಾಡಲಾಗಿದೆ. ಸರಕಾರದ ಮಟ್ಟದಲ್ಲೂ ಗ್ಯಾರಂಟಿ ಮತ್ತಿತರ ಆರ್ಥಿಕ ಹೊರೆ ಇದೆ. ಈ ಹಂತದಲ್ಲಿ ಮತ್ತೊಂದು ಪರಿಷ್ಕರಣೆ ಕಷ್ಟ ಎಂಬ ವಾದವೂ ಕೇಳಿಬರುತ್ತಿದೆ.

ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಲೇಬೇಕು. ಆದರೆ ಚುನಾವಣ ನೀತಿಸಂಹಿತೆ ಜಾರಿ ಯಲ್ಲಿದೆ. ಅದು ಪೂರ್ಣಗೊಂಡ ಅನಂತರ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗು ವುದು. ಸದ್ಯಕ್ಕಂತೂ ಈ ಸಂಬಂಧ ಇದು ವರೆಗೆ ಯಾವುದೇ ನಿರ್ಧಾರ ಆಗಿಲ್ಲ. -ರಾಮಲಿಂಗಾರೆಡ್ಡಿ,ಸಚಿವರು, ಸಾರಿಗೆ ಇಲಾಖೆ

ವಿಜಯ ಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next