Advertisement

ಪಂಪನ ಸ್ಮರಿಸಿ, ಕುಮಾರವ್ಯಾಸನ ಮರೆತ ಕಸಾಪ

09:09 AM Dec 16, 2018 | |

ಧಾರವಾಡ: ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಭಾರತ ಕಣ್ಣಲಿ ಕುಣಿವುದು, ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು…. ಇದು ರಾಷ್ಟ್ರಕವಿ ಕುವೆಂಪು ಅವರು ಕುಮಾರವ್ಯಾಸನ ಕುರಿತು ಬರೆದ ಸಾಲುಗಳು. ಆದರೆ,  ಕರ್ಣಾಟ ಭಾರತ ಕಥಾ ಮಂಜರಿ (ಗದುಗಿನ ಭಾರತ) ರಚಿಸುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅನನ್ಯ ಕೊಡುಗೆ ನೀಡಿದ ಕುಮಾರವ್ಯಾಸನನ್ನು ಕನ್ನಡ ಸಾಹಿತ್ಯ ಪರಿಷತ್‌ ಕಡೆಗಣಿಸಿರುವುದು
ಸಾಹಿತಿಗಳಿಗೆ, ಕಾವ್ಯ ರಸಿಕರಿಗೆ ಬೇಸರ ಮೂಡಿಸಿದೆ.

Advertisement

2019ರ ಜನವರಿ 4, 5 ಹಾಗೂ 6ರಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿರುವ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಕುಮಾರವ್ಯಾಸನ ಹೆಸರನ್ನು ಯಾವುದೇ ವೇದಿಕೆ ಅಥವಾ ದ್ವಾರಕ್ಕೆ ಇಡದೆ ನಿರ್ಲಕ್ಷಿಸಲಾಗಿದೆ.

ಗದುಗಿನ ಭಾರತದಂಥ ಮಹಾನ್‌ ಗ್ರಂಥ ರಚಿಸಿದ ಕುಮಾರವ್ಯಾಸನನ್ನು ನಿರ್ಲಕ್ಷಿಸಿ, ಸಾಹಿತಿಗಳು ಹಾಗೂ ಕೋಳಿವಾಡ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ. ಪಂಪನನ್ನು ಸ್ಮರಿಸಿ, ಕುಮಾರವ್ಯಾಸನನ್ನು ಏಕೆ ಕಡೆಗಣಿಸಲಾಗಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ಪಂಪ ಹಾಗೂ ಕುಮಾರವ್ಯಾಸನ ಜನ್ಮಭೂಮಿ ಹಾಗೂ ಕರ್ಮಭೂಮಿ ಧಾರವಾಡ ಜಿಲ್ಲೆ. ಅಣ್ಣಿಗೇರಿಯಲ್ಲಿ ಜನಿಸಿದ ಆದಿಕವಿ ಪಂಪನ ಹೆಸರನ್ನು ವೇದಿಕೆಗೆ ಇಡಲಾಗಿದೆ. ಆದರೆ, ಅಣ್ಣಿಗೇರಿ ತಾಲೂಕಿನ ಕೋಳಿವಾಡದ ಕುಮಾರವ್ಯಾಸನ ಹೆಸರು ಮರೆಯಲಾಗಿದೆ. ಕೃಷಿ ವಿವಿಯಲ್ಲಿ ನಡೆಯುವ ಮುಖ್ಯ ವೇದಿಕೆಗೆ ಮಹಾಕವಿ ಪಂಪ ಮಹಾಮಂಟಪ ಎಂಬುದಾಗಿ, ಅಂಬಿಕಾತನಯದತ್ತ ಪ್ರಧಾನ ವೇದಿಕೆಯೆಂದು
ಹೆಸರಿಡಲಾಗಿದೆ. ಅದೇ ರೀತಿ, ರೈತರ ಜ್ಞಾನಾಭಿವೃದ್ಧಿ ಕೇಂದ್ರ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮ
ವೇದಿಕೆಗೆ ಶಂ.ಬಾ.ಜೋಶಿ ವೇದಿಕೆ, ಭೂಸನೂರಮಠ ಮಹಾಮಂಟಪ ಹಾಗೂ ರೆವರೆಂಡ್‌ ಕಿಟೆಲ್‌  ದ್ವಾರವೆಂದು ಹೆಸರಿಸಲಾಗಿದೆ. ಪ್ರೇûಾಗ್ರಹದ ಸಭಾಂಗಣದಲ್ಲಿ ಸರೋಜಿನಿ ಮಹಿಷಿ ಮಹಾಮಂಟಪ, ಡಿ.ಸಿ.ಪಾವಟೆ ವೇದಿಕೆ ಹಾಗೂ ಡಾ.ಗಿರಡ್ಡಿ ಗೋವಿಂದರಾಜು ದ್ವಾರ ಮಾಡಲಾಗಿದೆ. ಆದರೆ, ಯಾವುದೇ ವೇದಿಕೆ, ಮಂಟಪ, ದ್ವಾರಕ್ಕೂ
ಕೂಡ ಕುಮಾರವ್ಯಾಸನ ಹೆಸರಿಡಲಾಗಿಲ್ಲ.

ಭಾಮಿನಿ ಷಟದಿಯಲ್ಲಿ ಮಹಾಕಾವ್ಯ ರಚನೆ ಮಾಡಿ ಸಾಹಿತ್ಯ ರಸಿಕರ ಮನ ಗೆದ್ದಿರುವ, ರೂಪಕ ಲೋಕದ ಚಕ್ರವರ್ತಿಯೆಂದೇ ಕರೆಯಲ್ಪಡುವ ಕುಮಾರವ್ಯಾಸನನ್ನು ಕಡೆಗಣಿಸಿರುವುದು ಸಮಂಜಸವಲ್ಲ. ಈ ಕುರಿತು ಸಾಹಿತ್ಯ ಪರಿಷತ್‌ ಅಧ್ಯಕ್ಷರೊಂದಿಗೆ ಚರ್ಚಿಸಲಾಗುವುದು. ವೇದಿಕೆಗೆ ಕುಮಾರವ್ಯಾಸನ ಹೆಸರಿಡುವಂತೆ ಆಗ್ರಹಿಸುವುದಾಗಿ ಗ್ರಾಮದ ಮುಖಂಡರು ಹೇಳುತ್ತಾರೆ. ಕುಮಾರವ್ಯಾಸ ಎಂಥ ಶ್ರೇಷ್ಠ ವ್ಯಕ್ತಿಯೆಂದರೆ ಅವನು ತನ್ನ ಗ್ರಂಥ ಗದುಗಿನ ಭಾರತದಲ್ಲಿ ಎಲ್ಲಿಯೂ ತನ್ನ ಹೆಸರು, ಊರು, ಜಾತಿ ಹೇಳಿಕೊಂಡವನಲ್ಲ. “ವ್ಯಾಸನ ಮಗ ಸುಖ ಮಹರ್ಷಿಯಂತೆ ನಾನು ಕೂಡ ವ್ಯಾಸ ಮಹರ್ಷಿಯ ಇನ್ನೊಬ್ಬ ಮಗನಿದ್ದಂತೆ’ ಎಂದು ಹೇಳಿಕೊಂಡಿದ್ದಾನೆ. ನಾರಾಯಣಪ್ಪ “ಕುಮಾರವ್ಯಾಸ’ ಕಾವ್ಯನಾಮದಿಂದ ಬರೆದಿದ್ದಾನೆ. ಗದಗಿನ ವೀರನಾರಾಯಣ ದೇವಸ್ಥಾನದಲ್ಲೇ ಕುಮಾರವ್ಯಾಸ ಮಹಾಭಾರತ ರಚಿಸಿದ್ದಾನೆ. ಆದರೆ, ಗದಗ ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನದಲ್ಲೇ ಕುಮಾರವ್ಯಾಸ ಕುರಿತು ಒಂದು ಗೋಷ್ಠಿಯನ್ನೂ ನಡೆಸಲಿಲ್ಲ ಎಂದು ಕುಮಾರವ್ಯಾಸ ವಂಶಸ್ಥರಾದ ದತ್ತಾತ್ರೇಯ ಪಾಟೀಲ ವಿಷಾದ ವ್ಯಕ್ತಪಡಿಸುತ್ತಾರೆ. 

ನಮಗೆ ಪಂಪ ಎಷ್ಟು ಮುಖ್ಯವೋ ಕುಮಾರವ್ಯಾಸನೂ ಅಷ್ಟೇ ಮುಖ್ಯ. ಪಂಪನಂತೆ ಕುಮಾರವ್ಯಾಸ ಕೂಡ ಉತ್ಕೃಷ್ಟ ಕೃತಿ ನೀಡಿದ್ದಾನೆ. ಸಾಹಿತ್ಯದ ದೃಷ್ಟಿಯಿಂದ ನೋಡಿದಾಗ ಯಾರೂ ಕಡಿಮೆಯಿಲ್ಲ. ಬೇಕಾದರೆ ಇತ್ತೀಚಿನ ಕವಿಗಳನ್ನು ಬಿಡಬೇಕಿತ್ತು. ಸಂಘಟಕರು ಯಾವ ಉದ್ದೇಶದಿಂದ ಕುಮಾರವ್ಯಾಸನನ್ನು ಕಡೆಗಣಿಸಿದ್ದಾರೋ  ಗೊತ್ತಿಲ್ಲ. ಇನ್ನೂ ಕಾಲ ಮಿಂಚಿಲ್ಲ. ಯಾವುದಾದರೂ ಒಂದು ವೇದಿಕೆಗೆ ಕುಮಾರವ್ಯಾಸನ ಹೆಸರಿಡಬೇಕು.
 ಸಿದ್ದಲಿಂಗ ಪಟ್ಟಣಶೆಟ್ಟಿ, ಹಿರಿಯ ಸಾಹಿತಿ

Advertisement

ಸಮ್ಮೇಳನದ ಯಾವುದೇ ವೇದಿಕೆಗೆ ಕುಮಾರವ್ಯಾಸನ ಹೆಸರಿಡುತ್ತಿಲ್ಲ. ಜಿಲ್ಲೆಯಲ್ಲಿ ಕವಿಗಳು ಬಹಳಷ್ಟಿದ್ದಾರೆ. ವೇದಿಕೆಗಳಿಗೆ ಎಲ್ಲರ ಹೆಸರಿಡಲು ಆಗಲ್ಲ. ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ ಅವರೇ ವೇದಿಕೆ, ಮಂಟಪ, ದ್ವಾರಗಳ ಹೆಸರನ್ನು ಅಂತಿಮ ಮಾಡಿದ್ದಾರೆ. ಅವರ ಸೂಚನೆಯಂತೆ ಹೆಸರುಗಳನ್ನಿಡಲಾಗಿದೆ. ಕುಮಾರವ್ಯಾಸರ ಹೆಸರನ್ನು ಯಾಕೆ ಇಟ್ಟಿಲ್ಲ ಎಂಬುದರ ಬಗ್ಗೆ ಅವರನ್ನೇ ಕೇಳಬೇಕು.
 ಡಾ.ಲಿಂಗರಾಜ ಅಂಗಡಿ, ಜಿಲ್ಲಾಧ್ಯಕ್ಷ, ಕಸಾಪ, ಧಾರವಾಡ

ಧಾರವಾಡ ಜಿಲ್ಲೆಯಲ್ಲಿ 61 ವರ್ಷಗಳ ನಂತರ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಯಾವುದೇ ವೇದಿಕೆಗೆ ಕುಮಾರವ್ಯಾಸನ ಹೆಸರಿಡದಿರುವುದು ಖಂಡನೀಯ. ಉದ್ದೇಶ ಪೂರ್ವಕವಾಗಿ ಮರೆಯಲಾಗಿದೆಯೇ ಎಂಬುದನ್ನು ಸಾಹಿತ್ಯ ಪರಿಷತ್‌ ಸ್ಪಷ್ಟಪಡಿಸಬೇಕು. ಇದು ಕವಿ ಹಾಗೂ ಕೋಳಿವಾಡಕ್ಕೆ ಮಾಡಿದ ಅವಮಾನ.
 ಗಂಗಾಧರ ಗಾಣಿಗೇರ, ಅಧ್ಯಕ್ಷರು, ಗ್ರಾ.ಪಂ.ಕೋಳಿವಾಡ.

ಜಾತಿಯ ಕಾರಣಕ್ಕೆ ಕುಮಾರವ್ಯಾಸನನ್ನು ಕಡೆಗಣಿಸಿದ್ದರೆ ಅದು ಅಕ್ಷಮ್ಯ. ಪ್ರಧಾನ ವೇದಿಕೆಗೆ ಪಂಪನ ಹೆಸರಿಟ್ಟು ಕುಮಾರವ್ಯಾಸನನ್ನು ಕಡೆಗಣಿಸಿದ್ದೇಕೆ ಎಂಬುದನ್ನು ಸಾಹಿತ್ಯ ಪರಿಷತ್‌ ಅಧ್ಯಕ್ಷರೇ ತಿಳಿಸಬೇಕು.
 ದತ್ತಾತ್ರೇಯ ಪಾಟೀಲ, ಕುಮಾರವ್ಯಾಸರ ವಂಶಸ್ಥರು.

ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next